ಮೈಸೂರಿನ ಪಬ್‌ನಲ್ಲಿ ಅಗ್ನಿ ಆಕಸ್ಮಿಕ: ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಬಲಿ, ಹಲವರಿಗೆ ಗಾಯ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಸಿದ್ಧ ಪಬ್ (Pub) ಒಂದರಲ್ಲಿ ಸೋಮವಾರ ಮಧ್ಯಾಹ್ನ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಅಷ್ಟೇ ಅಲ್ಲದೆ, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಪಬ್‌ನಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ತುರ್ತು ಮಾಹಿತಿ ನೀಡಿದ್ದಾರೆ. ಮಾಹಿತಿ ಲಭ್ಯವಾದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಯ ತಂಡಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಆರಿಸಿದ್ದಲ್ಲದೆ, ಪಬ್ ಒಳಗಡೆ ಸಿಲುಕಿಕೊಂಡಿದ್ದ 15 ಕ್ಕೂ ಹೆಚ್ಚು ಜನರನ್ನು ಅತ್ಯಂತ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಆದರೆ, ಅಗ್ನಿಯ ತೀವ್ರತೆ ಮತ್ತು ದಟ್ಟವಾದ ಹೊಗೆಯ ಕಾರಣದಿಂದಾಗಿ ಪಬ್‌ನ ಅಡುಗೆ ಕೋಣೆ (Kitchen) ವಿಭಾಗದಲ್ಲಿದ್ದ ಇಬ್ಬರು ಉದ್ಯೋಗಿಗಳು ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇನ್ನುಳಿದ ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಭೀಕರ ದುರಂತದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಮೈಸೂರು ವಿಭಾಗೀಯ ಅಗ್ನಿಶಾಮಕ ಅಧಿಕಾರಿ ರಂಗನಾಥ್, “ಸೋಮವಾರ ಮಧ್ಯಾಹ್ನ 3:15 ರ ಸುಮಾರಿಗೆ ಸರಸ್ವತಿಪುರಂ ಅಗ್ನಿಶಾಮಕ ಠಾಣೆಗೆ ಈ ಅಗ್ನಿ ಅವಘಡದ ಕುರಿತು ತುರ್ತು ಕರೆ ಬಂದಿತ್ತು. ನಮ್ಮ ರಕ್ಷಣಾ ತಂಡಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು ಮತ್ತು ಒಳಗೆ ಸಿಲುಕಿದ್ದ 15 ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತಂದವು. ಆದರೆ, ಕಿಚನ್ ವಿಭಾಗದಲ್ಲಿದ್ದ ಇಬ್ಬರು ತೀವ್ರವಾಗಿ ಬೆಂಕಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಇನ್ನುಳಿದ ಏಳು ಜನರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ,” ಎಂದು ತಿಳಿಸಿದ್ದಾರೆ. ಪಬ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬ ಕುರಿತು ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು