ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಮಂಗಳವಾರ ಬೆಳಗ್ಗೆ ಎರಡು ಮನೆಗಳು ಕುಸಿದಿವೆ. ಈ ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ವೈದ್ಯರು ಮತ್ತು ಶ್ವಾನ ದಳದ ತಂಡವು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅವಶೇಷಗಳಡಿ ಸಿಲುಕಿದ್ದ 8 ಜನರನ್ನು ಹೊರತೆಗೆಯಲಾಗಿದೆ.
ಬೆಳಗಿನ ಜಾವ 3 ಗಂಟೆ ವೇಳೆಗೆ ಒಂದು ಮನೆ ಕುಸಿದು ಬಿದ್ದಿದ್ದು, ನಂತರ ಪಕ್ಕದ ಇನ್ನೊಂದು ಮನೆ ಕುಸಿದು ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ನಂತರ, ಮೈದಾಗಿನ್, ಗೊಡೌಲಿಯಾದಿಂದ ಕಾಶಿ ವಿಶ್ವನಾಥ ದೇವಸ್ಥಾನದವರೆಗಿನ ರಸ್ತೆಯನ್ನು ಮುಚ್ಚಲಾಯಿತು.
ನಗರದಲ್ಲಿ ಭಾರೀ ಮಳೆಗೆ ಮನೆಗಳು ಕುಸಿದಿವೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ಕುರಿತು ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಆದೇಶ ಹೊರಡಿಸಲಾಗಿದೆ.