ಗದಗ: ರಾಜ್ಯದಲ್ಲಿ ದ್ವಿಭಾಷಾ ಅಥವಾ ತ್ರಿಭಾಷಾ ಸೂತ್ರದ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಒಪ್ಪುವುದಿಲ್ಲ. ಬದಲಿಗೆ, ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿಯನ್ನು (SEP) ರೂಪಿಸುವತ್ತ ಗಮನ ಹರಿಸಿದೆ. ಆದ್ದರಿಂದ, SEP ಸಮಿತಿಯ ಚರ್ಚೆಗಳಲ್ಲಿ ದ್ವಿಭಾಷಾ ಅಥವಾ ತ್ರಿಭಾಷಾ ಸೂತ್ರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಒಂದು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ನೇಮಕಾತಿ ಸಂದರ್ಭದಲ್ಲಿ ಮಹಿಳಾ ಅಭ್ಯರ್ಥಿಗಳು ತಮ್ಮ ಪತಿ ಅಥವಾ ತಂದೆಯ ಆದಾಯ ಪ್ರಮಾಣಪತ್ರ ಲಗತ್ತಿಸಬೇಕೇ ಎಂಬುದು ಈ ಪ್ರಕರಣದ ಪ್ರಮುಖ ಅಂಶವಾಗಿದೆ.
ಈ ಬಗ್ಗೆ ನ್ಯಾಯಾಲಯ ನೀಡುವ ತೀರ್ಮಾನವನ್ನು ಇಲಾಖೆ ಪಾಲಿಸಲಿದೆ. ಇಂತಹ ಸಮಸ್ಯೆಗಳು ಭವಿಷ್ಯದಲ್ಲಿ ಪುನರಾವರ್ತನೆಯಾಗದಂತೆ, ಹೊಸ ಶಿಕ್ಷಕರ ನೇಮಕಾತಿ ನಿಯಮಗಳ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೇಳಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.