ಬೆಂಗಳೂರು: ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಇಬ್ಬರು ಪ್ರಮುಖ ನಾಯಕರು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಘೋಷಿಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಇಬ್ಬರು ದೊಡ್ಡ ನಾಯಕರು ಬುಧವಾರ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಿದರು.
“ಸಮಯವನ್ನು ನಿಗದಿಪಡಿಸಲಾಗಿದೆ. ಅವರು ಯಾರೆಂದು ಈಗ ಹೇಳುವುದಿಲ್ಲ. ಆ ಬಗ್ಗೆ ನಿಮಗೆ ನಾಳೆ ತಿಳಿಯುತ್ತದೆ” ಎಂದರು.
ಮೂಲಗಳ ಪ್ರಕಾರ ಜೆಡಿಎಸ್‌ನ ಮಾಜಿ ಶಾಸಕರಾದ ಬಿ.ಸಿ. ಗೌರಿಶಂಕರ್ ಮತ್ತು ಮಂಜುನಾಥ್ ಬುಧವಾರ ಕಾಂಗ್ರೆಸ್ ಸೇರುತ್ತಿದ್ದಾರೆ.
ಆದರೆ, ಜೆಡಿಎಸ್ ಮುಖಂಡ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಈಗಾಗಲೇ ಎರಡು ಬಾರಿ ಉಭಯ ನಾಯಕರ ಜತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. “ಇದು ಹಳೆಯ ವಿಷಯ. ನ್ಮಮ ಜೊತೆ ಪಕ್ಷದ ಕಾರ್ಯಕರ್ತರಿದ್ದಾರೆ. ಇಂತಹ ವಿಷಯಗಳು ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಅವರು ಹೇಳಿದರು.
ಬಿಜೆಪಿಯ ಪ್ರಮುಖ ನಾಯಕ ವಿ.ಸೋಮಣ್ಣ ಅವರು ಬಿ.ವೈ ವಿಜಯೇಂದ್ರ ಅವರ ನೇಮಕದಿಂದ ಅಸಮಾಧಾನಗೊಂಡಿರುವ ಕಾರಣ ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎಂದೂ ಮೂಲಗಳು ಹೇಳುತ್ತಿವೆ. ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ತಾನೂ ಆಕಾಂಕ್ಷಿಯೆಂದು ಸೋಮಣ್ಣ ಈ ಹಿಂದೆ ಹೇಳಿಕೊಂಡಿದ್ದರು.
ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕುಂದಕೂರ್ ಕೂಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜೊತೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರು ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ ಎಂದಿದ್ದಾರೆ. ಒಟ್ಟಾರೆ ಡಿಕೆ ಶಿವಕುಮಾರ್ ಅವರ ಘೋಷಣೆಯಿಂದಾಗಿ ರಾಜ್ಯ ರಾಜಕೀಯ ಆಸಕ್ತರು ನಾಳೆ ಕಾಂಗ್ರೆಸ್ ಸೇರಲಿರುವ ನಾಯಕರು ಯಾರು ಎನ್ನುವ ಕುರಿತು ತಲೆ ಕೆರೆದುಕೊಳ್ಳಲು ಆರಂಭಿಸಿದ್ದಾರೆ.