174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ಗೆ ಯುಎಇ ಅಧ್ಯಕ್ಷರ ಸಲಹೆಗಾರರ ಶ್ಲಾಘನೆ

ದುಬೈ: ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಫ್ಲೈದುಬೈ ವಿಮಾನ FZ1073ರಲ್ಲಿ ಸಂಭವಿಸಿದ ಗಂಭೀರ ಘಟನೆಯ ವೇಳೆ ಧೈರ್ಯ ಮತ್ತು ವೃತ್ತಿಪರತೆಯಿಂದ ಕಾರ್ಯನಿರ್ವಹಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ರಾಜತಾಂತ್ರಿಕ ಸಲಹೆಗಾರ ಡಾ. ಅನ್ವರ್ ಗರ್ಗಾಶ್ ಶ್ಲಾಘಿಸಿದ್ದಾರೆ.

ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್‌ನಲ್ಲೇ ಕ್ಯಾಪ್ಟನ್ ಮತ್ತು ಕೋ-ಪೈಲಟ್ ನಡುವೆ ಗಂಭೀರ ಸಂಘರ್ಷ ಉಂಟಾಗಿತ್ತು. ಘಟನೆಯ ಹಿನ್ನೆಲೆಯಲ್ಲಿ ವಿಮಾನ ತುರ್ತು ಸಂಕೇತ ರವಾನಿಸಿ ಸೌದಿ ಅರೇಬಿಯಾದ ತಬೂಕ್‌ನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಅಜೀಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಮಾನದಲ್ಲಿ 174 ಪ್ರಯಾಣಿಕರು ಹಾಗೂ ಎಂಟು ಸಿಬ್ಬಂದಿ ಇದ್ದರು.

ಪ್ರಾಥಮಿಕ ತನಿಖೆಯ ಪ್ರಕಾರ, ಕೋ-ಪೈಲಟ್ ಕ್ಯಾಪ್ಟನ್ ಮೇಲೆ ದಾಳಿ ನಡೆಸಿದ್ದು, ಇಬ್ಬರೂ ಗಾಯಗೊಂಡಿದ್ದರು. ತುರ್ತು ಪರಿಸ್ಥಿತಿಯಲ್ಲಿ ವಿಮಾನದ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ವಿಮಾನವನ್ನು ಸುರಕ್ಷಿತವಾಗಿ ತಬೂಕ್‌ಗೆ ತಿರುಗಿಸಿದರು. ನಂತರ ಪ್ರಯಾಣಿಕರನ್ನು ಪರ್ಯಾಯ ವಿಮಾನದ ಮೂಲಕ ತಮ್ಮ ಪ್ರಯಾಣ ಮುಂದುವರಿಸಲು ವ್ಯವಸ್ಥೆ ಮಾಡಲಾಯಿತು.

ಈ ಘಟನೆ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅನ್ವರ್ ಗರ್ಗಾಶ್, ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಧೈರ್ಯ, ಜವಾಬ್ದಾರಿ ಮತ್ತು ವೃತ್ತಿಪರತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಅವರು ತೋರಿದ ವೃತ್ತಿಪರತೆ ಮತ್ತು ನೈತಿಕ ಧೈರ್ಯ ಅವರನ್ನು “ನಿಜವಾದ ಹೀರೋ” ಆಗಿಸಿದೆ ಎಂದು ಗರ್ಗಾಶ್ ಹೇಳಿದ್ದಾರೆ.

ಇದೇ ವೇಳೆ, ಘಟನೆಗೆ ಸಂಬಂಧಿಸಿದಂತೆ ಯುಎಇ ಮತ್ತು ಸೌದಿ ಅರೇಬಿಯಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸೌದಿ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಕೋ-ಪೈಲಟ್ ಕ್ಯಾಪ್ಟನ್ ಮೇಲೆ ದಾಳಿ ನಡೆಸಿರುವುದು ದೃಢಪಟ್ಟಿದ್ದರೂ, ದಾಳಿಯ ನಿಖರ ಉದ್ದೇಶ, ಹಿನ್ನೆಲೆ ಹಾಗೂ ಪ್ರೇರಣೆ ಕುರಿತು ತನಿಖೆ ಮುಂದುವರಿದಿದೆ. ಇಬ್ಬರೂ ಪೈಲಟ್‌ಗಳನ್ನು ವೈದ್ಯಕೀಯ ಚಿಕಿತ್ಸೆ ಬಳಿಕ ಅಕ್ಟೋಬರ್ 1ರಂದು ಯುಎಇ ಭದ್ರತಾ ತಂಡದೊಂದಿಗೆ ಅಬುಧಾಬಿಗೆ ಕರೆದೊಯ್ಯಲಾಗಿದೆ.

ಘಟನೆಯನ್ನು ಅನ್ವರ್ ಗರ್ಗಾಶ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ “ಅಪಾಯಕಾರಿ ಭಯೋತ್ಪಾದನಾ ಕೃತ್ಯ” ಎಂದು ಉಲ್ಲೇಖಿಸಿರುವುದು ಗಮನಾರ್ಹವಾಗಿದೆ. ಇದೇ ವೇಳೆ ಘಟನೆ ಕುರಿತು ಊಹಾಪೋಹಗಳು ಅಥವಾ ದೃಢಪಡಿಸದ ಪಿತೂರಿ ಸಿದ್ಧಾಂತಗಳನ್ನು ಹರಡುವ ಬದಲು ಎಚ್ಚರಿಕೆ ಮತ್ತು ತನಿಖೆಗೆ ಮಹತ್ವ ನೀಡಬೇಕು ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು