ಧರ್ಮಸ್ಥಳದಲ್ಲಿನ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ SIT ಇಂದು ಪ್ರಕರಣದಲ್ಲಿ ಪ್ರಮುಖ ಹೆಸರಾಗಿರುವ ಉದಯ್ ಕುಮಾರ್ ಜೈನ್ ಅವರನ್ನು ವಿಚಾರಣೆಗೆ ಕರೆದಿದೆ. ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಸಂಖ್ಯ ಸಾವುಗಳ ತನಿಖೆ ಜೊತೆಗೆ ಈಗ ಉದಯ್ ಕುಮಾರ್ ಜೈನ್ ನನ್ನೂ ವಿಚಾರಣೆಗೆ ಕರೆದಿರುವ ಹಿನ್ನೆಲೆಯಲ್ಲಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನೂ ಎಸ್‌ಐಟಿ ಕೈಗೆತ್ತುಕೊಂಡ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಕರ್ನಾಟಕ ಪೊಲೀಸ್ ಮತ್ತು ಸಿಬಿಐ ತನಿಖೆಯಲ್ಲಿ ಇದೇ ಉದಯ್ ಕುಮಾರ್ ಜೈನ್‌ಗೆ ಕ್ಲೀನ್ ಚಿಟ್ ಸಿಕ್ಕಿತ್ತು. ಆದರೆ ಆಗಿನ ತನಿಖೆಯ ಮೇಲೆಯೇ ಸೌಜನ್ಯಾ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಆ ಸಂದರ್ಭದಲ್ಲಿ ಹಲವು ಸಾಕ್ಷಿಗಳನ್ನು ಪೊಲೀಸರೇ ನಾಶ ಮಾಡಿರುವ ಬಗ್ಗೆಯೂ ನೇರವಾಗಿ ಸಾಕ್ಷಿ ಇದ್ದ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆ ಬಗ್ಗೆ ಈ ಮೊದಲಿನಿಂದಲೂ ಅನುಮಾನ ವ್ಯಕ್ತಪಡಿಸಿದ್ದರು.
ಉದಯ್ ಕುಮಾರ್ ಜೈನ್ ಸೇರಿದಂತೆ ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್‌ಗೆ ಎಸ್‌ಐಟಿ ಬುಲಾವ್ ನೀಡಿದೆ. ಹೀಗಾಗಿ ಆರೋಪ ಹೊತ್ತ ಉದಯ್ ಕುಮಾರ್ ಜೈನ್ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ. ಹಾಗೂ ನನಗೆ ಯಾವ ಕಾರಣಕ್ಕೆ ಎಸ್ಐಟಿ ಕರೆದಿದೆ ಎಂಬುದು ಗೊತ್ತಿಲ್ಲ. ಆದರೆ ನಾನು ಯಾವುದೇ ತನಿಖೆಗೂ ಸಿದ್ಧನಿದ್ದೇನೆ ಎಂದು ಮಾಧ್ಯಮಗಳಿಗೆ ಉದಯ್ ಕುಮಾರ್ ಜೈನ್ ಹೇಳಿದ್ದಾರೆ.
ಬುರುಡೆ ಪ್ರಕರಣ ಮುಚ್ಚಿ ಹಾಕಲು ಈ ಪ್ರಕರಣವನ್ನ ಮತ್ತೆ ಮುನ್ನಲೆಗೆ ತರುತ್ತಿದ್ದಾರೆ. ಸಿಐಡಿ, ಸಿಬಿಐ ನನ್ನನೂ ತನಿಖೆ ನಡೆಸಿದ್ದಾರೆ. ಬ್ರೈನ್ ಮ್ಯಾಪಿಂಗ್ ಕೂಡ ಮಾಡಿದ್ದಾರೆ, ಇವತ್ತು ಮತ್ತೆ ಎಸ್‌ಐಟಿ ಕರೆದಿದ್ದಾರೆ. ನಾವು ಯಾವುದೇ ವಿಚಾರಣೆಗೂ ಸಿದ್ಧ ಎಂದು ಉದಯ್ ಕುಮಾರ್ ಜೈನ್ ಹೇಳಿದ್ದಾರೆ.
ಈಗ ನಮ್ಮನ್ನೆಲ್ಲಾ ದಿಕ್ಕಾಪಾಲು ಮಾಡಿ ಸೌಜನ್ಯಾ ತಾಯಿ ದೊಡ್ಡ ಮನೆಯಲ್ಲಿ ಆರಾಮಾಗಿದ್ದಾರೆ. ಅವರ ಮನೆ ಮೇಲೂ ಇಡಿ ರೇಡ್ ಆಗಬೇಕು ಅಂತ ಒತ್ತಾಯಿಸಿದ್ದಾರೆ.