ಉಡುಪಿ: ನಗರದ ಸಿಟಿ ಬಸ್ ನಿಲ್ದಾಣದ ಸಮೀಪವಿರುವ ವಾಣಿಜ್ಯ ಸಂಕೀರ್ಣವೊಂದರಲ್ಲಿ ಭಾನುವಾರ ಸಂಜೆ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಹಲವು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಖಾದರ್ ಬಿಲ್ಡಿಂಗ್‌ನಲ್ಲಿರುವ ಮೊಬೈಲ್ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಗೆಗಳು ಪಕ್ಕದ ಅಂಗಡಿಗಳಿಗೂ ವೇಗವಾಗಿ ಹರಡಿದವು. ಮೊಬೈಲ್ ಫೋನ್, ಹಾರ್ಡ್‌ವೇರ್ ಮತ್ತು ಪ್ಲಾಸ್ಟಿಕ್ ಸಾಮಗ್ರಿಗಳ ಅಂಗಡಿಗಳು ಬೆಂಕಿಯ ತೀವ್ರತೆಗೆ ಆಹುತಿಯಾಗಿದ್ದು, ಅಂಗಡಿಯಲ್ಲಿದ್ದ ಎಲ್ಲ ಸರಕುಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿವೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿಗಳು, ಮೂರು ಅಗ್ನಿಶಾಮಕ ವಾಹನಗಳೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನಡೆಸಿದರು. ಆರಂಭದಲ್ಲಿ ಬೆಂಕಿಯನ್ನು ಹತೋಟಿಗೆ ತರಲು ಸಿಬ್ಬಂದಿಗಳು ಹರಸಾಹಸ ಪಟ್ಟರು. ನಂತರ ನೀರಿನ ಟ್ಯಾಂಕರ್‌ಗಳ ಮೂಲಕ ಹೆಚ್ಚಿನ ಪ್ರಮಾಣದ ನೀರನ್ನು ಪೂರೈಸಿದ ಬಳಿಕ, ಸುಮಾರು ಎರಡು ಗಂಟೆಗಳ ನಿರಂತರ ಕಾರ್ಯಾಚರಣೆಯ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ಆದರೂ, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಆಚಾರ್ಯ ಸೇರಿದಂತೆ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡಕ್ಕೆ ನೆರವಾದರು. ಏತನ್ಮಧ್ಯೆ, ಅಗ್ನಿಶಾಮಕ ದಳದ ವಾಹನಗಳು ತಡವಾಗಿ ಬಂದಿದ್ದಕ್ಕೆ ಸ್ಥಳದಲ್ಲಿದ್ದ ಅಂಗಡಿ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
