ಅತಿಯಾದ ಕೆಲಸದ ಅವಧಿ, ಉದ್ಯೋಗದಲ್ಲಿನ ಅನಿಶ್ಚಿತತೆ ಮತ್ತು ಕಾರ್ಯಸ್ಥಳದಲ್ಲಿನ ಕಿರುಕುಳದಿಂದ ಉಂಟಾಗುವ ಮಾನಸಿಕ ಒತ್ತಡವು ವಿಶ್ವದಾದ್ಯಂತ ಪ್ರತಿವರ್ಷ ಸುಮಾರು 8.40 ಲಕ್ಷ ಉದ್ಯೋಗಿಗಳ ಸಾವಿಗೆ ಕಾರಣವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ತನ್ನ ಇತ್ತೀಚಿನ ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದೆ.
ದೀರ್ಘಕಾಲದ ಕೆಲಸದ ಗಂಟೆಗಳು, ಉದ್ಯೋಗದ ಅಭದ್ರತೆ, ಅತಿಯಾದ ಕೆಲಸದ ಒತ್ತಡ ಮತ್ತು ಕೆಲಸದ ಸ್ಥಳದಲ್ಲಿನ ಬೆದರಿಕೆ ಹಾಗೂ ಕಿರುಕುಳಗಳಿಂದ ಉದ್ಯೋಗಿಗಳು ತೀವ್ರ ಮಾನಸಿಕ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಉದ್ಯೋಗಿಗಳು ಹೃದಯಾಘಾತ ಮತ್ತು ಇತರ ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಕೆಲವರು ಹತಾಶೆಯಿಂದ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಈ ಸಮೀಕ್ಷೆಯ ನೇತೃತ್ವ ವಹಿಸಿದ್ದ ಐಎಲ್‌ಒ ಅಧಿಕಾರಿ ಮಾನಲ್ ಅಜ್ಜೀ ಅವರು ಪ್ರತಿಕ್ರಿಯಿಸಿ, “ಆಧುನಿಕ ಕೆಲಸದ ಪರಿಸ್ಥಿತಿಯಲ್ಲಿ ವೃತ್ತಿಪರ ಭದ್ರತೆ ಮತ್ತು ಆರೋಗ್ಯದ ದೃಷ್ಟಿಯಿಂದ ಈ ಮಾನಸಿಕ ಹಾಗೂ ಸಾಮಾಜಿಕ ಆತಂಕಗಳು ದೊಡ್ಡ ಸವಾಲಾಗಿ ಪರಿಣಮಿಸಿವೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರ್ಯಸ್ಥಳದಲ್ಲಿ ಉದ್ಯೋಗಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ರಕ್ಷಿಸುವುದು ಅತ್ಯಗತ್ಯವಾಗಿದೆ. ಉತ್ಪಾದಕತೆಯನ್ನು ಹೆಚ್ಚಿಸಲು, ಕೆಲಸದ ಗುಣಮಟ್ಟ ಸುಧಾರಿಸಲು ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು, ಉದ್ಯೋಗ ಸ್ಥಳಗಳಲ್ಲಿ ಮಾನಸಿಕ ಹಾಗೂ ಸಾಮಾಜಿಕವಾಗಿ ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
