ದೆಹಲಿ: 1970ರ ದಶಕದಿಂದೀಚೆಗೆ ಬೆಳೆಯುತ್ತಿರುವ ಭಾರತ ಮತ್ತು ಭಾರತೀಯರನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದು, ಇತಿಹಾಸದ ಪುಟಗಳಲ್ಲಿ ಭದ್ರಪಡಿಸಿದ ಖ್ಯಾತ ಫೋಟೋ ಜರ್ನಲಿಸ್ಟ್ ರಘು ರಾಯ್ (83) ಭಾನುವಾರ ನಿಧನರಾದರು.
ಪ್ರೊಸ್ಟೇಟ್ ಕ್ಯಾನ್ಸರ್ ಮೆದುಳಿಗೆ ಹರಡಿದ್ದು ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ತಮ್ಮ 23ನೇ ವಯಸ್ಸಿನಲ್ಲಿ ‘ಸ್ಟೇಟ್ಸ್‌ಮನ್’ ಪತ್ರಿಕೆಯಲ್ಲಿ ಮುಖ್ಯ ಛಾಯಾಗ್ರಾಹಕರಾಗಿ ವೃತ್ತಿಜೀವನವನ್ನು ಆರಂಭಿಸಿದ ರಘು ರಾಯ್, ನಂತರದ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರು.
ಆಧುನಿಕ ಭಾರತದ ಪ್ರಮುಖ ಘಟನೆಗಳಾದ ಬಾಂಗ್ಲಾದೇಶ ವಿಮೋಚನಾ ಯುದ್ಧ ಮತ್ತು ನಿರಾಶ್ರಿತರ ಸಮಸ್ಯೆ (1977), ಭೋಪಾಲ್ ಅನಿಲ ದುರಂತ (1984), ಹಾಗೂ ವಾರಣಾಸಿಯ ಆಧ್ಯಾತ್ಮಿಕ ವೈಭವವನ್ನು ರಘು ರಾಯ್ ತಮ್ಮ ಅದ್ಭುತ ಛಾಯಾಚಿತ್ರಗಳ ಮೂಲಕ ಜಗತ್ತಿಗೆ ಪರಿಚಯಿಸಿದರು. ಭಾರತದ ಸಾಮಾಜಿಕ, ರಾಜಕೀಯ ಮತ್ತು ಆಧ್ಯಾತ್ಮಿಕ ಮುಖಗಳನ್ನು ತಮ್ಮ ಲೆನ್ಸ್ ಮೂಲಕ ಅತ್ಯಂತ ಸುಂದರವಾಗಿ ತೆರೆದಿಟ್ಟಿದ್ದರು.
ರಘು ರಾಯ್ ತಮ್ಮ ಫೋಟೋಗಳಲ್ಲಿ ಪ್ರಸಿದ್ಧ ವ್ಯಕ್ತಿಗಳಿಗೆ ನೀಡಿದಷ್ಟೇ ಮಹತ್ವವನ್ನು ಸಾಮಾನ್ಯ ಜನರಿಗೂ ನೀಡುತ್ತಿದ್ದರು. “ನಾವು ಬದುಕುತ್ತಿರುವ ಕಾಲಘಟ್ಟವನ್ನು ಭದ್ರಪಡಿಸಲು ಫೋಟೋಗ್ರಫಿ ಅನಿವಾರ್ಯ” ಎಂದು ಅವರು ದೃಢವಾಗಿ ನಂಬಿದ್ದರು. ಇವರ ಚಿತ್ರಗಳು ವಿಶ್ವದ ಅತ್ಯಂತ ಪ್ರತಿಷ್ಠಿತ ಪತ್ರಿಕೆಗಳು ಮತ್ತು ಮ್ಯಾಗಜೀನ್‌ಗಳಲ್ಲಿ ಪ್ರಕಟವಾಗಿವೆ.
ಬಾಂಗ್ಲಾದೇಶ ಯುದ್ಧ ಮತ್ತು ನಂತರದ ಬೆಳವಣಿಗೆಗಳನ್ನು ಅತ್ಯುತ್ತಮವಾಗಿ ಚಿತ್ರೀಕರಿಸಿದಕ್ಕಾಗಿ ಭಾರತ ಸರ್ಕಾರವು 1972ರಲ್ಲಿ ಇವರನ್ನು ‘ಪದ್ಮಶ್ರೀ’ ಪ್ರಶಸ್ತಿಯೊಂದಿಗೆ ಗೌರವಿಸಿತು. ಇದಲ್ಲದೆ, ಯುನೆಸ್ಕೋ ಮತ್ತು ಅಮೆರಿಕ ಸರ್ಕಾರದಿಂದ ‘ಅತ್ಯುತ್ತಮ ಛಾಯಾಗ್ರಾಹಕ’ ಪ್ರಶಸ್ತಿಗಳನ್ನು ಇವರು ಪಡೆದಿದ್ದರು. ರಘು ರಾಯ್ ಅವರು ತಮ್ಮ ಅನುಭವಗಳನ್ನೊಳಗೊಂಡ ಹಲವು ಪುಸ್ತಕಗಳನ್ನು ಕೂಡ ರಚಿಸಿದ್ದಾರೆ.
