ಪರೀಕ್ಷಾ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ವೀಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ. ನಮ್ಮ ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವಂತಹ ವಿಧೇಯಕವನ್ನು ಸಂಸತ್ತು ಅಂಗೀಕರಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ. ಗುರುವಾರ ರಾಜ್ಯಸಭೆಯಲ್ಲಿ ಪರೀಕ್ಷಾ ತಿದ್ದುಪಡಿ ವಿಧೇಯಕ (ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026) ಅಂಗೀಕಾರಗೊಂಡಿದೆ.
2 ನಿಮಿಷ 26 ಸೆಕೆಂಡುಗಳ ಈ ವೀಡಿಯೊದಲ್ಲಿ ಪ್ರಧಾನಿಯವರು ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾತನಾಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅವರ ಈ ವೀಡಿಯೊಗೆ ಲಕ್ಷಾಂತರ ಲೈಕ್ಸ್ ಮತ್ತು ವೀಕ್ಷಣೆಗಳು ಬಂದಿವೆ.
ಸರ್ಕಾರ ನಿರಂತರ ಕ್ರಮಗಳನ್ನು ಕೈಗೊಳ್ಳುತ್ತಿದೆ – ಪಿಎಂ ಮೋದಿ
ಹೊಸ ವೀಡಿಯೊ ಸಂದೇಶದಲ್ಲಿ, ‘ಆಂಟಿ-ಪೇಪರ್ ಲೀಕ್ ಬಿಲ್’ ಅಂಗೀಕಾರವಾಗಿರುವುದನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, “ವಿಶ್ವಾಸಾರ್ಹ ಪರೀಕ್ಷಾ ಪದ್ಧತಿಯನ್ನು ನಿರ್ಮಿಸಲು ಒಂದರ ನಂತರ ಒಂದರಂತೆ ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಟಾಸ್ಕ್ ಫೋರ್ಸ್ ರಚನೆಯಾಗಿರಲಿ, ಫಾಸ್ಟ್ ಟ್ರ್ಯಾಕ್ ಕೋರ್ಟ್ ನಿರ್ಮಾಣವಾಗಿರಲಿ ಅಥವಾ ರಾಜ್ಯಗಳ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳುವುದಾಗಿರಲಿ,” ಎಂದಿದ್ದಾರೆ.
‘ತಂತ್ರಜ್ಞಾನದ ಬಳಕೆಯೂ ಅಗತ್ಯ’
“ಕಳೆದ ಕೆಲವು ದಶಕಗಳಿಂದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರ ಸರ್ಕಾರವು ಇಂತಹ ಪೇಪರ್ ಲೀಕ್ ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದ ಮಕ್ಕಳ ಭವಿಷ್ಯಕ್ಕೂ ಕಂಟಕ ಎದುರಾಗುತ್ತಿದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ – ಎಲ್ಲಾ ರಾಜ್ಯಗಳು ಮತ್ತು ಕೇಂದ್ರದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಅತ್ಯಗತ್ಯವಾಗಿದೆ. ತಂತ್ರಜ್ಞಾನದ ಹೇರಳ ಬಳಕೆಯೂ ಅಗತ್ಯವಾಗಿದೆ” ಎಂದು ಅವರು ಹೇಳಿದರು.
ಪೇಪರ್ ಲೀಕ್ ದಂಧೆಕೋರರನ್ನು ಬಿಡುವುದಿಲ್ಲ – ಪ್ರಧಾನಮಂತ್ರಿ
ಮುಂದುವರಿದು, “ಇನ್ನೊಮ್ಮೆ ಯಾವುದೇ ಪೇಪರ್ ಮಾಫಿಯಾ, ಪೇಪರ್ ಲೀಕ್ ಮಾಡುವ ದಂಧೆಕೋರರು, ದೇಶದ ಮಕ್ಕಳ ಭವಿಷ್ಯದ ಜೊತೆ ಆಟವಾಡುವ ಗ್ಯಾಂಗ್‌ಗಳನ್ನು ಬಿಡುವುದಿಲ್ಲ. ಈಗ ಇವರನ್ನು ಮಟ್ಟಹಾಕಲು ಕಠಿಣ ಕಾನೂನುಗಳ ಅಗತ್ಯವೂ ನಮಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಸಂಸತ್ತಿನಲ್ಲಿ ವಿಧೇಯಕವನ್ನು ಮಂಡಿಸಿದೆವು ಮತ್ತು ನಿಮಗೆ ಮಾತು ನೀಡಿದಂತೆ, ಸಂಸತ್ತಿನ ಉಭಯ ಸೌಧಗಳಲ್ಲಿ ಗರಿಷ್ಠ ಸಂಖ್ಯೆಯ ಸಂಸದರು ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಸಮ್ಮತಿ ಸೂಚಿಸಿದ್ದಾರೆ. ಇಂದು ಉಭಯ ಸದನಗಳು ಈ ಕಠಿಣ ಕಾನೂನು ಮತ್ತು ನಿಬಂಧನೆಗಳಿರುವ ವಿಧೇಯಕವನ್ನು ಅಂಗೀಕರಿಸಿವೆ.
ಈಗ ವಿಶ್ವಾಸಾರ್ಹ ಪರೀಕ್ಷಾ ಪದ್ಧತಿಯತ್ತ ಸಾಗುವ ದಾರಿಯಲ್ಲಿ ಒಂದು ಪ್ರಮುಖ ಕೆಲಸ ಪೂರ್ಣಗೊಂಡಿದೆ. ಕೆಲಸ ಮುಂದೆ ಸಾಗುತ್ತಿರುತ್ತದೆ. ಇಂತಹ ಪರಿಸ್ಥಿತಿಯನ್ನು ನಾವು ಸುದೀರ್ಘ ಕಾಲ ಮುಂದುವರಿಯಲು ಬಿಡುವುದಿಲ್ಲ. ಈ ವಿಶ್ವಾಸದೊಂದಿಗೆ ಸಹೋದ್ಯೋಗಿಗಳೇ, ಬನ್ನಿ ನಾವೆಲ್ಲರೂ ಒಟ್ಟಾಗಿ ವಿಕಸಿತ ಭಾರತದ ಕನಸನ್ನು ನನಸು ಮಾಡಲು ಹೆಗಲಿಗೆ ಹೆಗಲು ಕೊಟ್ಟು ಸಾಗೋಣ,” ಎಂದು ಕರೆ ನೀಡಿದ್ದಾರೆ.
