ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹಿರಿಯ ನಾಯಕ ಇಂದ್ರೇಶ್ ಕುಮಾರ್ ಅವರು ಲೋಕಸಭೆಯಲ್ಲಿ ಕಾಂಗ್ರೇಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರ್‌ಎಸ್‌ಎಸ್ ವಿರುದ್ಧ ಮಾಡಿರುವ ಟೀಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಕಾಲಕಾಲಕ್ಕೆ ‘ಅಸಂತುಲಿತ ಮತ್ತು ದ್ವೇಷಪೂರಿತ ಹೇಳಿಕೆಗಳನ್ನು’ ನೀಡುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ, ಅವರ ಪಕ್ಷ ಮತ್ತು ಅವರ ಬೆಂಬಲಿಗರಿಗೆ ಸದ್ಬುದ್ಧಿ ನೀಡಲಿ ಎಂದು ವೃಂದಾವನದ ಠಾಕೂರ್‌ಜೀಯಲ್ಲಿ ಪ್ರಾರ್ಥಿಸುವುದಾಗಿ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ವೃಂದಾವನದಲ್ಲಿ ಎಎನ್‌ಐ (ANI) ಜೊತೆ ಮಾತನಾಡಿದ ಇಂದ್ರೇಶ್ ಕುಮಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶವೇ ಮೊದಲ ಮತ್ತು ಕೊನೆಯ ಆದ್ಯತೆ ಎಂದು ಭಾವಿಸುವ ಸಂಘಟನೆಯಾಗಿದೆ ಎಂದಿದ್ದಾರೆ. ಸಂಘವು ದೇಶಭಕ್ತಿ, ಸಾಮಾಜಿಕ ಸೇವೆ ಮತ್ತು ರಾಷ್ಟ್ರಹಿತಕ್ಕೆ ಸಮರ್ಪಿತವಾಗಿದೆ, ಇಂತಹ ಸಂಘಟನೆಯ ವಿರುದ್ಧ ಈ ರೀತಿಯ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
“ರಾಹುಲ್ ಗಾಂಧಿ ಕಾಲಕಾಲಕ್ಕೆ ಅಸಂತುಲಿತ ಮತ್ತು ದ್ವೇಷಪೂರಿತ ಮಾತುಗಳನ್ನು ಆಡುತ್ತಾರೆ. ನಾನು ಪ್ರಸ್ತುತ ವೃಂದಾವನದಲ್ಲಿದ್ದೇನೆ ಮತ್ತು ಅವರಿಗೆ, ಅವರ ಪಕ್ಷಕ್ಕೆ ಹಾಗೂ ಬೆಂಬಲಿಗರಿಗೆ ಸದ್ಬುದ್ಧಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆರ್‌ಎಸ್‌ಎಸ್ ದೇಶಭಕ್ತಿ, ಸಾಮಾಜಿಕ ಸೇವೆ ಮತ್ತು ರಾಷ್ಟ್ರವೇ ಮೊದಲು ಎಂಬ ತತ್ವದ ಮೇಲೆ ಕೆಲಸ ಮಾಡುವ ಸಂಘಟನೆಯಾಗಿದೆ. ಅವರು ಈ ರೀತಿಯ ಅನುಚಿತ ವರ್ತನೆಯನ್ನು ನಿಲ್ಲಿಸಬೇಕು” ಎಂದು ಅವರು ಹೇಳಿದ್ದಾರೆ.
ಲೋಕಸಭೆಯಲ್ಲಿ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ
ಇಂದ್ರೇಶ್ ಕುಮಾರ್ ಅವರ ಈ ಪ್ರತಿಕ್ರಿಯೆಯು ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ ಕುರಿತ ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಯ ನಂತರ ಬಂದಿದೆ.
ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಆರ್‌ಎಸ್‌ಎಸ್ ನಿಯಂತ್ರಣ ಸಾಧಿಸಿದೆ ಮತ್ತು ವಿದ್ಯಾರ್ಥಿಗಳಿಗೆ ಸ್ವತಂತ್ರವಾಗಿ ಆಲೋಚಿಸುವ ಸ್ವಾತಂತ್ರ್ಯ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. “ನಮ್ಮ ಶಿಕ್ಷಣ ವ್ಯವಸ್ಥೆಯು ಅತ್ಯಂತ ಕಠೋರವಾಗಿದೆ ಮತ್ತು ಕೆಟ್ಟದಾಗಿದೆ. ಪ್ರತಿಯೊಂದನ್ನೂ ಖಾಸಗೀಕರಣಗೊಳಿಸಲಾಗುತ್ತಿದೆ. ಇದು ಸುಲಿಗೆ ಮಾಡುವ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಈ ವ್ಯವಸ್ಥೆಯ ಆತ್ಮವನ್ನು ಆರ್‌ಎಸ್‌ಎಸ್ ವಶಪಡಿಸಿಕೊಂಡಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದರು.
ವಿದ್ಯಾರ್ಥಿಗಳ ‘ನೈಜ ಶತ್ರು’ ಆರ್‌ಎಸ್‌ಎಸ್ ಎಂದು ಅವರು ಪ್ರತಿಪಾದಿಸಿದ್ದರು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧವೂ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ಶಿಕ್ಷಣ ಸಚಿವಾಲಯವನ್ನು ನಿಜವಾಗಿ ಪ್ರಧಾನ್ ಅವರು ನಡೆಸುತ್ತಿಲ್ಲವಾದ್ದರಿಂದ ಅವರ ರಾಜೀನಾಮೆಯೂ ಕೇವಲ ಸಾಂಕೇತಿಕವಾಗಿರುತ್ತದೆ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತ ತಾರಿಕ್ ಅನ್ವರ್
ಮತ್ತೊಂದೆಡೆ, ಕಾಂಗ್ರೆಸ್ ಸಂಸದ ತಾರಿಕ್ ಅನ್ವರ್ ಅವರು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದ ಮಾತುಗಳಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳಿದ್ದಾರೆ. ಎಎನ್‌ಐ ಜೊತೆ ಮಾತನಾಡಿದ ತಾರಿಕ್ ಅನ್ವರ್, ಈ ವಿಷಯಕ್ಕೆ ಗೃಹ ಸಚಿವ ಅಮಿತ್ ಶಾ ಜವಾಬ್ದಾರರಾಗಿದ್ದರೆ ಅವರು ಅದರ ಹೊಣೆ ಹೊರಬೇಕು ಎಂಬುದೇ ರಾಹುಲ್ ಗಾಂಧಿ ಅವರ ಸ್ಪಷ್ಟ ಸಂದೇಶವಾಗಿತ್ತು ಎಂದಿದ್ದಾರೆ. ಅವರಿಗೆ ಮಾಹಿತಿ ಇಲ್ಲದಿದ್ದರೆ, ಅದು ಇನ್ನಷ್ಟು ಗಂಭೀರ ವಿಷಯವಾಗುತ್ತದೆ ಏಕೆಂದರೆ ದೇಶದ ಗೃಹ ಸಚಿವರಿಗೆ ರಾಜಧಾನಿ ದೆಹಲಿಯಲ್ಲಿ ಪೊಲೀಸರು ಕೈಗೊಳ್ಳುತ್ತಿರುವ ಕ್ರಮಗಳ ಮಾಹಿತಿಯೂ ಇಲ್ಲ ಎಂದಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
