Tuesday, June 25, 2024

ಸತ್ಯ | ನ್ಯಾಯ |ಧರ್ಮ

ಉಡುಪಿ ಜಿಲ್ಲಾ ವಿಧಾನಸಭಾ ಕ್ಷೇತ್ರಗಳು | ಬಿಜೆಪಿ ಭದ್ರಕೋಟೆಯನ್ನು  ಭೇದಿಸುತ್ತಾ ಕಾಂಗ್ರೆಸ್‌!

ಕರ್ನಾಟಕದ ವಿಧಾನಸಭೆಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯಾದ್ಯಂತ ಯಾವ ಪಕ್ಷದಿಂದ ಯಾರಿಗೆ ಟಿಕೆಟ್, ಯಾರು ಗೆಲ್ಲಬಹುದು, ಯಾರು ಸೋಲಬಹುದು ಎನ್ನುವ ಲೆಕ್ಕಾಚಾರಗಳು ಈಗಾಗಲೇ ಆರಂಭಗೊಂಡಿವೆ.ಈ ಲೆಕ್ಕಾಚಾರದಲ್ಲಿ ಉಡುಪಿ ಜಿಲ್ಲೆಯೂ ಹಿಂದೆ ಬಿದ್ದಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು ಕೆಲವು ಉತ್ಸಾಹಿಗಳು ಆಗಲೇ ಪರೋಕ್ಷ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದಾರೆ.

ಈ ಬಾರಿ ಆಡಳಿತ ರೂಢ ಬಿಜೆಪಿಗಿಂತಲೂ ಕಾಂಗ್ರಸ್‌ ಪಕ್ಷವೇ ಜಿಲ್ಲೆಯಲ್ಲಿ ಹೆಚ್ಚು ಉತ್ಸಾಹದಿಂದ ಓಡಾಡುತ್ತಿರುವಂತೆ ಕಾಣುತ್ತಿದೆಯಾದರೂ ಅದು ತನ್ನ ಎದುರಾಳಿ ಉರುಳಿಸಬಹುದಾದ ದಾಳಗಳ ಕುರಿತು ಕುತೂಹಲದಿಂದ ಕಾಯುತ್ತಿದೆ. ಇತ್ತ ಕಳೆದ ಬಾರಿ ಐದೂ ಕ್ಷೇತ್ರಗಳನ್ನು ಕ್ಲೀನ್‌ ಸ್ವೀಪ್‌ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಬಿಜೆಪಿ ಮಂಗಳವಾರವಷ್ಟೇ ಅಭ್ಯರ್ಥಿ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು ಐದು ಕ್ಷೇತ್ರಗಳಿದ್ದು ಅವುಗಳಲ್ಲಿ ಈಗಾಗಲೇ ಹೇಳಿದಂತೆ ಐದೂ ಕ್ಷೇತ್ರಗಳನ್ನು ಬಿಜೆಪಿಯೇ ಪ್ರತಿನಿಧಿಸುತ್ತಿದೆ. ಕ್ಷೇತ್ರವಾರು ಶಾಸಕರುಗಳಿಗೆ ಹೇಳಿಕೊಳ್ಳುವಂತಹ ಸಾಧನೆ ಏನೂ ಕಾಣುತ್ತಿಲ್ಲವಾದ ಕಾರಣ ಈ ಬಾರಿ ಹಿಂದಿನ ಲೋಕಸಭಾ ಚುನಾವಣೆಯಂತೆಯೇ ಮೋದಿಯೆಂಬ ನಾಮವೇ ಇವರನ್ನು ಕಾಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಅವರ ಬಯಕೆಗೆ ತಕ್ಕಂತೆ ಬಿಜೆಪಿ ಕೂಡಾ ರಾಜ್ಯದಲ್ಲಿ ಮೋದಿಯವರ ಇಪ್ಪತ್ತು ರ್ಯಾಲಿಗಳು ಮತ್ತು ಮೂವತ್ತು ಸಭೆಗಳನ್ನು ಹಮ್ಮಿಕೊಂಡಿರುವುದು ಇತ್ತೀಚೆಗೆ ಸುದ್ದಿಯಾಗಿತ್ತು.

ಈ ಜಿಲ್ಲೆಯ ಮತದಾನದಲ್ಲಿ ಬಂಟರು ಮತ್ತು ಬಿಲ್ಲವರು ನಿರ್ಣಾಯಕ ಸ್ಥಾನವನ್ನು ಹೊಂದಿದ್ದಾರೆ. ಇಲ್ಲಿನ ಟಿಕೆಟ್‌ ಹಂಚಿಕೆ ಕೂಡಾ ಇದೇ ಜಾತಿ ಲೆಕ್ಕಾಚಾರದಲ್ಲಿ ನಡೆಯುತ್ತದೆಯಾದರೂ ಈ ಬಾರಿ ಕೆಲವು ಕ್ಷೇತ್ರಗಳು ಬದಲಾವಣೆ ಕಾಣುವ ನಿರೀಕ್ಷೆಯಿದೆ. ಕರಾವಳಿಯಲ್ಲಿ ಬಿಜೆಪಿಯಿಂದ ಲೈಟ್‌ ಕಂಬ ನಿಂತರೂ ಗೆಲ್ಲುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತವೆಯಾದರೂ ಬಿಜೆಪಿಗೆ ಈ ಬಾರಿಯ ಚುನಾವಣೆ ಸುಲಭದ ತುತ್ತಲ್ಲವೆನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುವ ಸತ್ಯ.

ಕಾಪು: ಗೆಲುವಿನ ಕನಸು ಕಾಣುತ್ತಿರುವ ವಿನಯ ಕುಮಾರ ಸೊರಕೆ

ಉಡುಪಿಯ ಅಷ್ಟಮಠಗಳ ಪೈಕಿ ಪಲಿಮಾರು ಮಠ, ಅದಮಾರು ಮಠ, ಶಿರೂರು ಮಠ ಹಾಗೂ ಪುತ್ತಿಗೆ ಮಠಗಳ ಮೂಲ ಮಠಗಳು ಇರುವುದು ಕಾಪು ಕ್ಷೇತ್ರದಲ್ಲಿ. ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಮಧ್ವಾಚಾರ್ಯರ ತವರೂರು ಕೂಡ ಹೌದು. ಇಂತಹ ಕ್ಷೇತ್ರವು ಮೊದಲು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿತ್ತು. ಉಡುಪಿ ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆಗೊಂಡ ನಂತರು ಅದು ಉಡುಪಿ ಜಿಲ್ಲೆಗೆ ಸೇರಿಕೊಂಡಿತು. ಇದುವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರಸ್‌ ಒಂಬತ್ತು ಬಾರಿ ಗೆದ್ದಿದ್ದರೆ, ಬಿಜೆಪಿ ಮೂರು ಬಾರಿ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ ಸ್ವತಂತ್ರ ಭಾರತದ ನಂತರದ ಚುನಾವಣೆಯಲ್ಲಿ ಮೊದಲು ಗೆದ್ದ ವ್ಯಕ್ತಿ ಎಫ್‌ ಎಕ್ಸ್‌ ಪಿಂಟೋ. ಅದರ ನಂತರ ಪ್ರಜಾ ಸೋಷಲಿಸ್ಟ್‌ ಪಕ್ಷದಿಂದ ಎರಡು ಬಾರಿ ಗೆದ್ದಿದ್ದ ಭಾಸ್ಕರ್‌ ಶೆಟ್ಟಿಯವರು ನಂತರ ಕಾಂಗ್ರೆಸ್ಸಿನಿಂದ ಎರಡು ಬಾರಿ ಗೆದ್ದಿದ್ದಾರೆ. 1983ರಿಂದ 1999ರ ತನಕ ಕಾಂಗ್ರೆಸ್‌ ಪಕ್ಷದಿಂದ ನಿರಂತರವಾಗಿ ಗೆಲ್ಲುತ್ತಿದ್ದ ವಸಂತ್‌ ಸಾಲ್ಯಾನ್‌ ಅವರ ಓಟಕ್ಕೆ ಬ್ರೇಕ್‌ ಹಾಕಿ ಗೆದ್ದವರು ಬಿಜೆಪಿಯ ಲಾಲಾಜಿ ಮೆಂಡನ್.

2008ರ ಚುನಾವಣೆಯಲ್ಲಿ ಬಿಜೆಪಿ ಲಾಲಾಜಿ ಮೆಂಡನ್ ಕಾಂಗ್ರೆಸ್ ವಸಂತ್ ಸಾಲಿಯಾನ್ ವಿರುದ್ಧ 967 ಮತಗಳ ಜಯ ಸಾಧಿಸಿದರು. ಸತತ ಎರಡು ಬಾರಿ ಸೋ ಲುಂಡ ವಸಂತ್ ಸಾಲಿಯಾನ್ ಅವರಿಗೆ 2013ರ ಚುನಾವಣೆಯಲ್ಲಿಟಿಕೆಟ್ ಸಿಗಲಿಲ್ಲ. ಬದಲಿಗೆ ಹೊ ಸ ಮುಖ ವಿನಯ ಕುಮಾರ್ ಸೊ ರಕೆ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ವಿನಯ ಕುಮಾರ್ ಸೊ ರಕೆ ಲಾಲಾಜಿ ಮೆಂಡನ್ ಅವರನ್ನು 1,855 ಮತಗಳಿಂದ ಮಣಿಸಿ ಗೆಲುವಿನ ಖಾತೆತೆರೆದರು. 2018ರ ಚುನಾವಣೆಯಲ್ಲಿಕಾಂಗ್ರೆಸ್ನ ವಿನಯ ಕುಮಾರ್ ಸೊರಕೆ ಅವರನ್ನು ಮಣಿಸುವ ಮೂಲಕ ಬಿಜೆಪಿಯ ಲಾಲಾಜಿ ಮೆಂಡನ್ ಸೋಲಿನ ಸೇಡು ತೀರಿಸಿಕೊಂಡರು.

ಕಳೆದ ಬಾರಿ ಈಕ್ಷೇತ್ರ ಲಾಲಾಜಿ ಮೆಂಡನ್‌ 52.55 ಶೇಕಡಾ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೆ ಸೊರಕೆ 63976 ಮತಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆಡಳಿತ ಅಲೆಯು ಸೊರಕೆಯವರ ಪರವಾಗಿ ಕೆಲಸ ಮಾಡಬಹುದೆನ್ನುವುದು ಅವರ ಬೆಂಬಲಿಗರ ನಂಬಿಕೆ.

ಈ ಬಾರಿ ಮತ್ತೆ ಕಾಂಗ್ರೆಸ್‌ ನಿಂದ ವಿನಯ್‌ ಕುಮಾರ್ ಸೊರಕೆಗೆ‌ ಟಿಕೇಟ್‌ ನೀಡಿದ್ದು ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಬಿಜೆಪಿ ಈಗ ಅಧಿಕೃತವಾಗಿ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಹಾಲಿ ಶಾಸಕರಾದ ಲಾಲಾಜಿ ಮೆಂಡನ್‌ ಅವರಿಗೆ ಮಣೆಯಾಕದೆ ಹೊಸ ಅಭ್ಯರ್ಥಿ ಗುರ್ಮೆ ಸುರೇಶ್‌ ಕುಮಾರ್ ಗೆ ಟಿಕೇಟ್‌ ನೀಡಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆಯಲಿದ್ದು ಈ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕಾರ್ಕಳ: ಮುತಾಲಿಕ್‌ ಎನ್ನುವ ಮಗ್ಗುಲ ಮುಳ್ಳು

ಹಿಂದುತ್ವದ ಫೈರ್‌ ಬ್ರಾಂಡ್‌ ನಾಯಕರೆಂದೇ ಗುರುತಿಸಿಕೊಂಡಿದ್ದ ಸುನಿಲ್‌ ಕುಮಾರ್‌ ಅವರ ಕ್ಷೇತ್ರವಾದ ಕಾರ್ಕಳ ಈ ಬಾರಿ ಇಲ್ಲಿನ ಗೊಂದಲಗಳ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಕಾಂಗ್ರೆಸ್‌ ಮತ್ತು ವೀರಪ್ಪ ಮೊಯಿಲಿಯವರ ಭದ್ರಕೋಟೆಯಾದ ಈ ಕ್ಷೇತ್ರವನ್ನು ಈಗ ಬಿಜೆಪಿ ತನ್ನ ಕೈವಶ ಮಾಡಿಕೊಂಡಿದ್ದಾರೆ. ಅತ್ತ ಮೊಯಿಲಿ ಇಲ್ಲಿಂದ ಚಿಕ್ಕಬಳ್ಳಾಪುರ ವಲಸೆ ಹೋಗಿ ಅಲ್ಲಿಗೂ ಇಲ್ಲಿಗೂ ಸಲ್ಲದವರಾಗಿ ಉಳಿದು ಹೋಗಿದ್ದಾರೆ. ಸಜ್ಜನರೆನ್ನಿಸಿಕೊಂಡಿದ್ದ ಗೋಪಾಲ ಭಂಡಾರಿಯವರೂ ಇಲ್ಲಿಂದ ಎರಡು ಬಾರಿ ಕಾಂಗ್ರೆಸಿನಿಂದ ಗೆದ್ದಿದ್ದಾರೆ. ಬಿಜೆಪಿಯ ಸುನಿಲ್‌ ಕುಮಾರ್‌ ಇಲ್ಲಿಂದ ಮೂರು ಬಾರಿ ಗೆದ್ದಿದ್ದಾರೆ.

ಈ ಕ್ಷೇತ್ರ ಒಂದಷ್ಟು ದಿನ ನಕ್ಷಲ್‌ ಚಟುವಟಿಕೆಗಳಿಗೂ ಹೆಸರಾಗಿತ್ತು. ಇಲ್ಲಿನ ಈದು ಎನ್ನುವಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲರು ಸತ್ತ ಉದಾಹರಣೆಯೂ ಇದೆ. ಇಲ್ಲಿನ 27 ಮತಗಟ್ಟೆಗಳನ್ನು ನಕ್ಸಲ್‌ ಬಾಧಿತ ಎಂದು ಗುರುತಿಸಲಾಗಿದೆಯಾದರೂ ಇತ್ತೀಚೆಗೆ ಅಲ್ಲಿ ನಕ್ಸಲ್‌ ಚಟುವಟಿಕೆಯ ಸುದ್ದಿ ಬಂದಿಲ್ಲ.

ಸತತವಾಗಿ ಆರು ಬಾರಿ ಗೆದ್ದ ಮೊಯಿಲಿವರ ಈ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್‌ ಅಭ್ಯರ್ಥಿ ಯಾರೆನ್ನುವ ಪ್ರಶ್ನೆ ಎದ್ದು ಕಾಣುತ್ತಿದೆಯಾದರೂ ಮುನಿಯಾಲ ಉದಯ ಕುಮಾರ ಶೆಟ್ಟಿಯವರ ಹೆಸರು ಕಾರ್ಯಕರ್ತರ ನಡುವೆ ಓಡಾಡುತ್ತಿದೆ. ಕಾರ್ಯಕರ್ತರ ನೆಚ್ಚಿನ ಅಭ್ಯರ್ಥಿಯಾಗಿರುವ ಇವರು ಹಲವು ವರ್ಷಗಳಿಂದ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಇವರಲ್ಲದೆ ಹರ್ಷ ಮೊಯಿಲಿ, ಶುಭದಾ ರಾವ್‌, ಮಂಜುನಾಥ ಪೂಜಾರಿ, ದೀಪಕ್‌ ಕೋಟ್ಯಾನ್‌ ಇವರ ಹೆಸರುಗಳು ಓಡಾಡುತ್ತಿವೆ.

ಇತ್ತ ಬಿಜೆಪಿಯಿಂದ ಸುನಿಲ್‌ ಕುಮಾರ್‌ ಗೆ ಮತ್ತೆ ಟಿಕೇಟ್‌ ನೀಡಿದ್ದು ಮತ್ತೊಮ್ಮೆ ಗೆಲ್ಲುವ ನಿರೋಕ್ಷೆಯಲ್ಲಿದ್ದಾರೆ. ಆದರೆ ಈ ಬಾರಿ ಗೆಲುವು ಹಿಂದಿನಷ್ಟು ಸುಲಭವಿಲ್ಲ ಎನ್ನುವುದು ಸ್ಥಳೀಯರ ಅಂಬೋ. ಭ್ರಷ್ಟಾಚಾರದ ಆರೋಪ, ಆಡಳಿತ ವಿರೋಧಿ ಅಲೆಯ ಜೊತೆಗೆ ಸುನಿಲ್‌ ಅವರ ಗುರು ಎಂದು ಗುರುತಿಸಲಾಗುವ ಪ್ರಮೋದ್‌ ಮುತಾಲಿಕ್‌ ಸುಮಾರು ಒಂದು ವರ್ಷದಿಂದೀಚೆಗೆ ಕಾರ್ಕಳದಲ್ಲೇ ಠಿಕಾಣಿ ಹೂಡಿ ಶಿಷ್ಯನ ವಿರುದ್ಧ ರಣಕಹಳೆ ಊದಿದ್ದಾರೆ. ಅವರ ಭರ್ಜರಿ ಪ್ರಚಾರದ ನಡುವೆ ಬಿಜೆಪಿ ಕಾರ್ಯಕರ್ತರು ಯಾಕೋ ಮಂಕಾಗಿರುವಂತೆ ಕಾಣುತ್ತಾರೆ. ಆದರೆ ಇತ್ತೀಚೆಗೆ ಪರಶುರಾಮ ಪಾರ್ಕ್‌, ಮಾರಿ ದೇವಸ್ಥಾನದ ಉದ್ಘಾಟನೆ ಇತ್ಯಾದಿಯ ಹೆಸರಿನಲ್ಲಿ ಸುನಿಲ್‌ ಕುಮಾರ್‌ ದೊಡ್ಡ ದೊಡ್ಡ ಸಭೆಗಳನ್ನೇ ನಡೆಸಿದ್ದಾರೆ.

ಪ್ರಮೋದ್‌ ಮುತಾಲಿಕ್‌ ಅವರ ಜೊತೆ ಸುನಿಲ್‌ ಕುಮಾರ್‌ ಅವರ ಗೆಲುವಿನ ಕನಸಿಗ್ ತಣ್ಣೀರು ಎರಚಲು ಪ್ರಯತ್ನಿಸುತ್ತಿರುವವರೆಂದರೆ ಅವರದೇ ಪಕ್ಷದ ಮಮತಾ ಹೆಗಡೆ. ಇವರು ಕೂಡಾ ಸುನಿಲ್‌ ಕುಮಾರ್‌ ಅವರ ವಿರುದ್ಧ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಾ ತಾನೂ ಈ ಬಾರಿಯ ವಿಧಾನಸಭೆಗೆ ಕಾರ್ಕಳದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎನ್ನುತ್ತಿದ್ದರು. ಈಗ ಕೇಂದ್ರ ಹೈಕಮಾಂಡ್‌ ಇದಕ್ಕೆಲ್ಲ ಬ್ರೇಕ್‌ ಆಗಿದ್ದು ಕಾರ್ಕಾಳದಿಂದ ಸುನೀಲ್‌ ಕುಮಾರ್‌ ಅವರಿಗೆ ಟಿಕೇಟ್‌ ನೀಡಿದೆ. ಇತ್ತ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಮುತಾಲಿಕ್‌ ಗೆ ನಿರಾಶೆಯಾಗಿದ್ದು ಮುಂದಿನ ನಡೆ ಏನಿರಬಹುದು ಎಂದು ಕುತೂಹಲ ಮೂಡಿಸಿದೆ.

2013ರಲ್ಲಿ ಮತ್ತು 2018ರಲ್ಲೂ ಬಿಜೆಪಿಯ ವಿ.ಸುನಿಲ್ ಕುಮಾರ್ ಕಾಂಗ್ರೆಸ್ನ ಗೋಪಾಲ ಭಂಡಾರಿ ಅವರನ್ನು ಭಾರಿ ಮತಗಳ ಅಂತರಿಂದ ಸೋಲಿಸಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಕಾಂಗ್ರೆಸ್‌ ಮತ್ತದೇ ಗೋಪಾಲ ಭಂಡಾರಿ‌ ಅವರನ್ನು ಕಣಕ್ಕಿಳಿಸುವ ಯಾವುದೇ ಯೋಚನೆ ಇಲ್ಲ ಎಂಬುದು ಬಿಡುಗಡೆಯಾ 2 ಆಯ್ಕೆಪಟ್ಟಿಯಲ್ಲೇ ಸ್ಪಷ್ಟವಾಗಿದೆ. ಹಾಗಾಗಿ ಬಿಡುಗಡೆಯಾದಬೇಕಿರುವ ಮೂರನೇ ಪಟ್ಟಿಯಲ್ಲಿ ಕಾಂಗ್ರೆಸ್‌ ನಿಂದ ಈ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬುದು ಕೌತುಕದ ವಿಷಯವಾಗಿದೆ.

ಒಟ್ಟು 1,88,376 ಮತದಾರರಿರುವ ಕಾರ್ಕಳ ಕ್ಷೇತ್ರದಲ್ಲಿ ಇದರ ಜಾತಿವಾರು ಹಂಚಿಕೆ ಈ ಕೆಳಗಿನಂತಿದೆ. ಇಲ್ಲಿ ಬಿಲ್ಲವ ಮತ್ತು ಬಂಟ ಮತಗಳೇ ನಿರ್ಣಾಯಕವಾಗಿದ್ದರೂ ಇತರ ಜಾತಿ ಧರ್ಮಗಳ ಮತಗಳ ಸಂಖ್ಯೆಯನ್ನೂ ಕಡೆಗಣಿಸುವಂತಿಲ್ಲ.

ಬಿಲ್ಲವ –     40,000

ಬಂಟ್ಸ್ – 30,000

ಕ್ರಿಶ್ಚಿಯನ್   – 18,000

ಮುಸ್ಲಿಂ –   15,000

ಜೈನ್    –  9,000

ಜಿಎಸ್ಬಿ – 10,000

ಪರಿಶಿಷ್ಟ ಜಾತಿ –  11,000

ದೇವಾಡಿಗ  –   9,000

ಬ್ರಾಹ್ಮಣ – 7,000

ಕುಂಬಾರ 8,000

ಉಡುಪಿ: ಅಭ್ಯರ್ಥಿ ಆಯ್ಕೆ ಕಗ್ಗಂಟು, ಕಗ್ಗತ್ತಲಿನಲ್ಲಿ BJP ಕಾರ್ಯಕರ್ತರು

ಈ ಬಾರಿ ಉಡುಪಿ ಹಿಜಾಬ್‌ ವಿವಾದದ ಕಾರಣದಿಂದಾಗಿ ದೇಶವ್ಯಾಪಿ ಸುದ್ದಿಯಲ್ಲಿತ್ತು. ಇದರಿಂದ ಕೆಲವರು ಮುಜುಗರಕ್ಕೀಡಾಗಿದ್ದರೆ ಇನ್ನೂ ಕೆಲವರು ತಮ್ಮ ಮತಬುಟ್ಟಿ ತುಂಬಿದ ಖುಷಿಯಲ್ಲಿದ್ದರು. ಧಾರ್ಮಿಕ ಕ್ಷೇತ್ರವಾಗಿ ಉಡುಪಿ ಮತ್ತು ಆರೋಗ್ಯ ಮತ್ತು ವಿದ್ಯೆಯ ಕಾರಣಕ್ಕೆ ಖ್ಯಾತಿ ಪಡೆದ ಪಕ್ಕದ ಮಣಿಪಾಲವನ್ನು ಹೊಂದಿರುವ ಈ ಕ್ಷೇತ್ರವು ಮುಂದಿನ ಚುನಾವಣೆಯಲ್ಲಿ ತಮ್ಮನ್ನು ಪ್ರತಿನಿಧಿಸಲು ಮುಂದಾಗುವ ಹುರಿಯಾಳುಗಳು ಯಾರೆನ್ನುವ ಕುತೂಹಲದಲ್ಲಿ ಕಾಯುತ್ತಿದೆ. ಇದೇ ಉಡುಪಿಯಲ್ಲಿ ಸಣ್ಣಗೆ ಹೊತ್ತಿಕೊಂಡು ಜಿಲ್ಲಾ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದ ಹಿಜಾಬ್‌ ವಿವಾದವು ನಂತರ ದೇಹಕ್ಕೆ ವಿಷ ಹಬ್ಬುವಂತೆ ರಾಜ್ಯದೆಲ್ಲೆಡೆಗೆ ಹಬ್ಬಿತ್ತು. ಇತ್ತೀಚಿನ ಯುಪಿಸಿಎಲ್‌ ಬಿಡುಗಡೆ ಮಾಡಿದ ವರದಿಯ ಪ್ರಕಾರ ಈ ಪ್ರಕರಣವು ಅವಿಭಜಿತ ಕರಾವಳಿ ಜಿಲ್ಲೆಯ ಹಲವಾರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕಲ್ಲು ಹಾಕಿತು.

ಪ್ರಸ್ತುತ ರಘುಪತಿ ಭಟ್‌ ಪ್ರತಿನಿಧಿಸುತ್ತಿರುವ ಈ ಕ್ಷೇತ್ರವು ಬಿಜೆಪಿಯ ಮಡಿಲಿನಲ್ಲಿದೆ. ಕರಾವಳಿಯ ಇತರ ಜಿಲ್ಲೆಗಳಂತೆ ಇಲ್ಲಿಯೂ ಹಿಂದುತ್ವ ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸುವಂತೆ ಮೇಲ್ನೋಟಕ್ಕೆ ಕಾಣುತ್ತದೆಯಾದರೂ ಆಡಳಿತ ವಿರೋದಿ ಅಲೆ ಇಲ್ಲಿಯೂ ಇದೆ. ದಿನ ಬಳಕೆಯ ವಸ್ತುಗಳ ಬೆಲೆಯೇರಿಕೆ, ಪದೇ ಪದೇ ಏರಿದ ಗೃಹಸಾಲಗಳ ಬಡ್ಡಿ ಏರಿಕೆ ಇಲ್ಲಿನ ಜನರನ್ನು ದೇಶದ ಇತರೆಡೆಯ ಜನರಂತೆಯೇ ಚಿಂತೆಗೆ ದೂಡಿದೆ. ಪ್ರಜ್ಞಾವಂತರು ಆಡಳಿತ ಪಕ್ಷವನ್ನು ಪ್ರಶ್ನಿಸತೊಡಗಿದ್ದಾರೆ.

ಉಭಯ ಪಕ್ಷಗಳಲ್ಲೂ ಹಲವು ಟಿಕೆಟ್‌ ಆಕಾಂಕ್ಷಿಗಳಿದ್ದು ಎಲ್ಲರೂ ಟಿಕೆಟ್‌ ನಿರೀಕ್ಷೆಯಲ್ಲಿದ್ದರೂ, ಎರಡು ಪಕ್ಷದ ಹೈಕಮಾಂಡ್‌ ಗಳೂ ಇವರೆಲ್ಲಾ ಲೆಕ್ಕಾಚಾರವೇ ಉಲ್ಟಾ ಮಾಡಿದ್ದಾರೆ. ಬಿಜೆಪಿಯಿಂದ ಯಶ್‌ಪಾಲ್‌ ಸುವರ್ಣ ಎಂಬುವವರಿಗೆ ಟಿಕೇಟ್‌ ನೀಡುವ ಮೂಲಕ ಟಿಕೇಟ್‌ ನಿರೀಕ್ಷೆಯಲ್ಲಿದ್ದರು ಹಾಲಿ ಶಾಸಕ ರಘುಪತಿ ಭಟ್‌ ಗೆ ಬಿಗ್‌ ಸಾಕ್‌ ನೀಡಿದೆ. ಉಡುಪಿ ಜಿಲ್ಲೆಯ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್‌ ಮಾಡಿರುವ ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಪ್ರಸಾದ್‌ ರಾಜ್‌ ಕಾಂಚನ್‌ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆಯಲಿದ್ದು ಈ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇಲ್ಲಿ ಮೊಗವೀರ 42,000, ಬಿಲ್ಲವ 40,000, ಬಂಟರು, 30,785, ಬ್ರಾಹ್ಮಣ 18,000, ಮುಸ್ಲಿಂ 14,000, ಕ್ರಿಶ್ಚಿಯನ್ 13,000, ಪರಿಶಿಷ್ಟ ಜಾತಿ 10,000, ಪರಿಶಿಷ್ಟ ಪಂಗಡ 10,000 ಇತರೆ 13,000 ಸೇರಿದಂತೆ ಒಟ್ಟು ಮತದಾರರ ಸಂಖ್ಯೆ 1,90,785. ಇಲ್ಲಿ ಶಾಸಕರು ಯಾರಾಗಬೇಕನ್ನುವುದನ್ನು ಹಲವು ಫ್ಯಾಕ್ಟರ್‌ಗಳು ನಿರ್ಧರಿಸುತ್ತವೆ. ಅವುಗಳಲ್ಲಿ ಕೃಷ್ಣಮಠವೂ ಒಂದು.

ಕಳೆದ ಸಲ ಪರೇಶ್‌ ಮೇಸ್ತನ ಸಾವು ಮತ್ತು ಅದರ ನಂತರದ ಕೋಮು ಗಲಭೆಯ ಪ್ರಯೋಜನ ಪಡೆದ ಬಿಜೆಪಿಗೆ ಈ ಬಾರಿ ಗೆಲುವು ಸುಲಭದ ತುತ್ತೇಲ್ಲ ಎನ್ನವುದು ರಾಜಕೀಯ ವಿಶ್ಲೇಷಕರ ಮಾತು.

ಕುಂದಾಪುರ: ಗೆಲುವಿನ ಕನಸಿನ ದೋಣಿಯಲ್ಲಿ ಮೊಳಹಳ್ಳಿ ದಿನೇಶ್‌ ಹೆಗ್ಡೆ

ಕಡಲ ತಡಿಯಲ್ಲಿ ನೆಲೆ ನಿಂತು ಸಮುದ್ರವನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡ ಊರಿದು. ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ತೆಂಗು ಕಂಗು ತಾಳೆ ಬಾಳೆಯಿಂದ ಬದುಕು ನಡೆಸುವ ಕಷ್ಟಜೀವಿಗಳ ಕ್ಷೇತ್ರವೇ ಕುಂದಾಪುರ ವಿಧಾಸಭಾ ಕ್ಷೇತ್ರ.

ಕೆಲವು ದಿನಗಳ ಹಿಂದೆ ಕಾಂಗ್ರೆಸ್ಸಿನ ಹಿರಿಯ ರಾಜಕಾರಣಿ ಹಾಗೂ ಹಲವು ಸಲ ಕುಂದಾಪುರ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದ ಕೆ. ಪ್ರತಾಪ ಚಂದ್ರ ಶೆಟ್ಟಿಯವರು ಕೆಪಿಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಸುದ್ದಿಯಾಗಿದ್ದರು. ವಿಧಾನಪರಿಷತ್ತಿನ ಸಬಾಪತಿಯಾಗಿ ಕೆಲಸ ಮಾಡಿದ ಇವರು ಸಜ್ಜನ ರಾಜಕಾರಣಿಯೆಂದೇ ಗುರುತಿಸಿಕೊಂಡಿದ್ದರು. ಹಣಕಾಸಿನ ವಿಷಯದಲ್ಲಿ ಕೈಕೆಸರು ಮಾಡಿಕೊಂಡವರಲ್ಲ. ಇಂತಹ ರಾಜಕಾರಣಿಗೆ ಸೋಲಿನ ರುಚಿ ತೋರಿಸಿದವರು ಮೇಲಿನ ಎಲ್ಲಾ ವಿಶೇಷಣಗಳನ್ನೂ ಹೊಂದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು. ಕಾಕತಾಳೀಯವೆಂಬಂತೆ ಈ ಬಾರಿ ಹಾಲಾಡಿಯವರೂ ಉಮೇದುವಾರಿಕೆಯಿಂದ ಹಿಂದೆ ಸರಿಯುವುದಾಗಿ ಘೋಷಿಸುವುದರ ಜೊತೆಗೆ ತನ್ನದೇ ಅಭ್ಯರ್ಥಿಯನ್ನೂ ಘೋಷಿಸಿ ಒಂದರ್ಥದಲ್ಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಏಕೆಂದರೆ ಮೊದಲಿನಿಂದಲೂ ಬಂಟರೇ ಗೆದ್ದು ಬರುತ್ತಿರುವ ಈ ಕ್ಷೇತ್ರದಲ್ಲಿ ಅವರು ಬೆಂಬಲ ಘೋಷಿಸಿರುವುದು ಬ್ರಾಹ್ಮಣರಾದ ಕಿರಣ್‌ ಕೊಡ್ಗಿ ಎನ್ನುವವರಿಗೆ. ಇವರು ಬಿಜೆಪಿ ಹಿರಿಯ ನಾಯಕ ಎ.ಜಿ. ಕೊಡ್ಗಿಯವರ ಮಗ.

ಹಾಲಾಡಿಯವರ ರಾಜಿನಾಮೆಯ ನಂತರ ಕಾಂಗ್ರೆಸ್‌ ಗೆಲುವಿನ ಕನಸಿಗೆ ರೆಕ್ಕೆ ಮೂಡಿದಂತಾಗಿದೆ. ಚುನಾವಣೆ ಘೋಷಣೆಗೆ ಆರು ತಿಂಗಳಿಗೂ ಮೊದಲೇ ದಿನೇಶ್‌ ಹೆಗಡೆ ಮೊಳಹಳ್ಳಿಯವರು ಪರೋಕ್ಷ ಪ್ರಚಾರಕ್ಕೆ ಇಳಿದಿದ್ದರು. ಹಾಲಾಡಿಯವರ ಶಸ್ತ್ರ ತ್ಯಾಗದ ಘೋಷಣೆ ಅವರ ಗೆಲುವಿನ ಭರವಸೆಯನ್ನು ಹೆಚ್ಚಿಸಿದೆ. ಮೊದಲಿನಿಂದಲೂ ಈ ಕ್ಷೇತ್ರವನ್ನು ಬಂಟರು ಬಿಟ್ಟುಕೊಟ್ಟಿದ್ದೇ ಇಲ್ಲ. ಅದರಲ್ಲೂ ಈ ಬಾರಿ ಬಿಜೆಪಿ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದು ಇದು ಕಾಂಗ್ರೆಸ್ಸಿಗೆ ಪ್ಲಸ್‌ ಪಾಯಿಂಟ್‌ ಆಗುವುದು ಯಾವುದೇ ಅನುಮಾನವಿಲ್ಲ. ಸದ್ಯ ಕ್ಷೇತ್ರ ಕಾರ್ಯದಲ್ಲಿ ತೊಡಗಿರುವ ದಿನೇಶ್‌ ಹೆಗಡೆ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದು ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಬಿಜೆಪಿ ಮೋದಿಯನ್ನು ಕರೆಸಿ ಕರ್ನಾಟಕದಾದ್ಯಂತ ಒಂದರ ಹಿಂದೆ ಒಂದರಂತೆ ಸಭೆಗಳನ್ನು ಮಾಡಿಸುವ ಯೋಚನೆಯಲ್ಲಿರುವುದರಿಂದ ಕೊನೆಯ ಕ್ಷಣದಲ್ಲಿ ಏನೂ ಸಂಭವಿಸಬಹುದು ನೋಡಬೇಕಿದೆ.

ಇಲ್ಲಿನ ಜಾತಿವಾರು ಮತ ಹಂಚಿಕೆಯಲ್ಲೂ ಬಂಟರೇ ಮುಂಚೂಣಿಯಲ್ಲಿದ್ದು ಬಿಲ್ಲವರು ಎರಡನೇ ಸ್ಥಾನದಲ್ಲಿದ್ದಾರೆ. ಇವೆರೆಡು ಜಾತಿಗಳನ್ನು ಬಿಟ್ಟು ಇತರ ಜಾತಿಗಳ ಮತಗಳು ಸಾಲಿಡ್‌ ಆಗದ ಹೊರತು ಅಂತಹ ದೊಡ್ಡ ಇಂಪ್ಯಾಕ್ಟ್‌ ಚುನಾವಣೆಯ ಮೇಲೆ ಆಗುವುದಿಲ್ಲ. ಕರಾವಳಿಯ ಜನರು ಜಾತಿಗೆ ವೋಟ್‌ ಹಾಕುವುದಿಲ್ಲ ಹಿಂದುತ್ವಕ್ಕೆ ಮತ ಹಾಕುತ್ತಾರೆ ಎನ್ನುತ್ತಾರಾದರೂ ಈ ಜಿಲ್ಲೆಗಳ ಹಿಂದಿನ ಫಲಿತಾಂಶಗಳು ಬೇರೆಯದೇ ಕತೆ ಹೇಳುತ್ತವೆ. ಡಾಮಿನೆಂಟ್‌ ಜಾತಿಯ ಅಭ್ಯರ್ಥಿಗಳನ್ನು ಹಾಕಿ ಇತರ ಜಾತಿಗಳ ಮತಗಳನ್ನು ಬಿಜೆಪಿಗೆ ಬರುವಂತೆ ಮಾಡುವಲ್ಲಿ ಮಾತ್ರವೇ ಹಿಂದುತ್ವ ಕೆಲಸ ಮಾಡುತ್ತದೆಯೇ ಹೊರತು ಇತರ ಜಾತಿಗಳಿಗೆ ಮತ ಹಾಕಲು ಹಿಂದುತ್ವ ಮುಂದೆ ಬರುತ್ತದೆನ್ನುವುದು ಕನಸಿನ ಮಾತು.

ಬಂಟರು – 48,000

ಬಿಲ್ಲವ  –    36,000

ಮೊಗವೀರ   –   27,000

ದೇವಾಡಿಗ    –  12,000

ಗಾಣಿಗ  –  8,000

ಕೊಂಕಣಿ ಖಾರ್ವಿ  –  10,000

ಕ್ರಿಶ್ಚಿಯನ್    –   14,000

ಮುಸ್ಲಿಂ  –   17,000

ಇತರೆ   –   8,529

ಒಟ್ಟಾರೆ 1,88,529 ಮತದಾರರು ಈ ಕ್ಷೇತ್ರದ ಉಮೇದುವಾರರ ಹಣೆಬರಹವನ್ನು ನಿರ್ಧರಿಸುತ್ತದೆ. ಇವರಲ್ಲಿ ಬಂಟರು ಮತ್ತು ಬಿಲ್ಲವರು ನಿರ್ಣಾಯಕರು. ಕುಂದಾಪುರ ಅಧಿಕಾರ ಕೇಂದ್ರವೂ ಆಗಿರುವುದರಿಂದಾಗಿ ಬಂಟರು ಇಲ್ಲಿ ಸುಲಭವಾಗಿ ತಮ್ಮ ಹಿಡಿತವನ್ನು ಸಡಿಲಗೊಳಿಸುವುದಿಲ್ಲ.

ಜಿಲ್ಲೆಯ ಇತರ ಕ್ಷೇತ್ರಗಳಂತೆ ಇಲ್ಲಿಯೂ ಮೂರನೇ ಶಕ್ತಿಯೆನ್ನುವುದು ಇಲ್ಲವೇ ಇಲ್ಲ. ಹಲವು ಹೆಂಚಿನ ಕಾರ್ಖಾನೆಗಳನ್ನು ಹೊಂದಿರುವ ಈ ಊರು ಒಂದು ಕಾಲದಲ್ಲಿ ಕಮ್ಯೂನಿಸ್ಟರ ಬಿಗಿ ಹಿಡಿತವನ್ನು ಹೊಂದಿತ್ತಾದರೂ ಹೆಂಚಿನ ಕಾರ್ಖಾನೆಗಳ ಅವನತಿಯೊಂದಿಗೆ ಆ ಪಕ್ಷದ ಹಿಡಿತವೂ ಸಡಿಲಗೊಂಡಿದೆ. ಕಾರ್ಮಿಕ ಸಂಘಟನೆಗಳು ಒಂದಷ್ಟು ಪ್ರಬಲವಾಗಿವೆಯಾದರೂ ಚುನಾವಣೆಯ ಮೇಲೆ ಅವುಗಳ ಪ್ರಭಾವ ಅಷ್ಟಕಷ್ಟೇ.

ಬೈಂದೂರು: ಹೊರಗಿನ ಅಭ್ಯರ್ಥಿಗಳ ಸಮಗ್ರ ಹುಲ್ಲುಗಾವಲು

ವಿಶ್ವ ವಿಖ್ಯಾತ ಕಡಲ ತೀರ ಮರವಂತೆ ಹಾಗೂ ಒತ್ತಿನೆಣೆ ಜೊತೆಗೆ ಚಾರಣಿಗರ ಸ್ವರ್ಗ ಕೊಡಚಾದ್ರಿ, ಅದರ ಬುಡದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹೀಗೆ ಹತ್ತು ಹಲವು ಪ್ರೇಕ್ಷಣೀಯ ಸ್ಥಳವನ್ನು ಹೊಂದಿದ್ದರೂ ಬೈಂದೂರು ಕ್ಷೇತ್ರ ಪ್ರವಾಸೋದ್ಯಮದ ವಿಷಯದಲ್ಲಿ ಕಂಡ ಅಭಿವೃದ್ಧಿ ಶೂನ್ಯ. ಮೀನುಗಾರಿಕಾ ಬಂದರನ್ನು ಹೊಂದಿದ್ದರೂ ಇಲ್ಲಿ ಅದಕ್ಕೆ ಬೇಕಾಗುವ ತೀರಾ ಮೂಲಭೂತ ಸೌಲಭ್ಯಗಳು ಕೂಡಾ ಲಭ್ಯವಿಲ್ಲ. ಹೌದು ನೀವು ಓದುತ್ತಿರುವುದು ನಾಲ್ಕೈದು ವರ್ಷಗಳ ಕೆಳಗೆ ತಾಲೂಕು ಕೇಂದ್ರವಾಗಿ ಘೋಷಣೆಗೊಂಡ ಬೈಂದೂರು ಕ್ಷೇತ್ರದ ಕುರಿತು. ಬಹುತೇಕ ಗುಡ್ಡಗಾಡು ಪ್ರದೇಶವನ್ನೇ ಹೊಂದಿರುವ ಈ ತಾಲ್ಲೂಕಿನಲ್ಲಿ ಅಭಿವೃದ್ಧಿ ಎನ್ನುವುದು ಕೇವಲ ರಸ್ತೆ ಎನ್ನುವಷ್ಟರ ಮಟ್ಟಿಗೆ ಸೀಮಿತಗೊಂಡಿದೆ. ಎಷ್ಟೋ ಊರುಗಳಿಗೆ ಈಗಲೂ ಬಸ್ಸುಗಳಿಲ್ಲ. ಮಳೆಗಾಲ ಬಂತೆಂದರೆ ಹೊಳೆ ದಾಟಲಾಗದೆ ದ್ವೀಪವಾಗುವ ಊರುಗಳಿವೆ. ನೆರೆ ಬಂದು ಸಂಕ ದಾಟಲಾಗದೆ ಪುಟ್ಟ ಮಕ್ಕಳು ನೀರು ಪಾಲಾಗುವುದು ಕೂಡಾ ನಡೆಯುತ್ತದೆ.

ಇಂತಹ ಕ್ಷೇತ್ರದಲ್ಲಿ ಇದುವರೆಗೆ ಗೆದ್ದವರಲ್ಲಿ ಮೂವರು ಮಾತ್ರವೇ ಸ್ಥಳೀಯರು ಉಳಿದ ಬಹುತೇಕ ಸ್ಪರ್ಧಿಗಳು ಹೊರಗಿನವರೇ ಆಗಿದ್ದರು. ಅಲ್ಲದೆ ಈ ಬಾರಿಯೂ ಬಿಜೆಪಿಯಿಂದ ಕೆಲವು ಹೊರಗಿನ ಮುಖಗಳ ಹೆಸರು ಕೇಳಿಬರುತ್ತಿದೆ. ಇಲ್ಲಿ ಮೊದಲ ಬಾರಿಗೆ ಯಡ್ತೆರೆ ಮಂಜಯ್ಯ ಶೆಟ್ಟರು ಅವಿರೋಧವಾಗಿ ಆಯ್ಕೆಯಾಗಿದ್ದರು. ಅದರ ನಂತರ ಇಲ್ಲಿಂದ ಹಲ್ಸನಾಡು ಸುಬ್ಬರಾವ್‌, ಜಿ ಎಸ್‌ ಆಚಾರ್‌, ಐ ಎಮ್ ಜಯರಾಮ್‌ ಶೆಟ್ಟಿ, ಗೋಪಾಲ ಪೂಜಾರಿ, ಅಪ್ಪಣ್ಣ ಹೆಗಡೆ, ಎಜಿ ಕೊಡ್ಗಿ , ಗೋಪಾಲಕೃಷ್ಣ ಕೊಡ್ಗಿ ಗೆದ್ದು ಬೀಗಿದ್ದಾರೆ.

ಕ್ಷೇತ್ರಕ್ಕೆ ಐ ಎಮ್‌ ಜಯರಾಮ್‌ ಶೆಟ್ಟರು ತಮ್ಮ ದುಡ್ಡಿನ ಚೀಲದ ಜೊತೆ ಬರುವುದರೊಂದಿಗೆ ಇಲ್ಲಿ ಹಣವಿದ್ದರೆ ಯಾರೂ ಗೆಲ್ಲಬಹುದೆನ್ನುವುದನ್ನು ತೋರಿಸಿಕೊಟ್ಟು ಹೋದರು. ಅಂದಿನಿಂದ ಇಂದಿನವರೆಗೂ ಇಲ್ಲಿ ನಡೆಯುತ್ತಿರುವುದು ಹಣ(ಣಾ)ಹಣಿಯೇ ಆಗಿದೆ. ಕಳೆದ ಚುನಾವಣೆಯಲ್ಲೂ ಕ್ಷೇತ್ರದಲ್ಲಿ ಸಾಕಷ್ಟು ಹಣದ ಹೊಳೆ ಹರಿದಿತ್ತು ಎನ್ನುತ್ತಾರೆ ಇಲ್ಲಿನ ಜನ.

ಹಾಲಿ ಶಾಸಕ ಸುಕುಮಾರ ಶೆಟ್ಟಿಯವರು ತಮ್ಮ ಕಾರ್ಯಕರ್ತರನ್ನೇ ಎದುರು ಹಾಕಿಕೊಳ್ಳುವ ಮೂಲಕ ತನ್ನ ಕಾಲಿನ ಮೇಲೆ ತಾನೇ ಕಲ್ಲು ಎತ್ತಿ ಹಾಕಿಕೊಂಡಿದ್ದಾರೆ. ಇಲ್ಲಿನ ಕಾರ್ಯಕರ್ತರ ದೊಡ್ಡ ದಂಡೇ ಈ ಶಾಸಕರ ವಿರುದ್ಧ ಮುನಿದು ಕೂತಿದ್ದರೆ. ಇನ್ನೊಂದಷ್ಟು ಜನರು ಈ ಬಾರಿಯ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗಿ RSS ನಾಯಕ ಗುರುರಾಜ್‌ ಗಂಟಿಹೊಳೆಯವರ ಹೆಸರನ್ನು ಫೇಸ್ಬುಕ್‌, ಟ್ವಿಟರ್‌ಗಳಲ್ಲಿ ತೇಲಿಬಿಟ್ಟಿವೆ. ಆದರೆ ಪಕ್ಷದ ಕಡೆಯಿಂದ ತೇಲಿ ಬರುತ್ತಿರುವ ಹೆಸರುಗಳೇ ಬೇರೆಯಿವೆ ಅವುಗಳಲ್ಲಿ ಮುಖ್ಯವಾದುದೆಂದರೆ ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡುತ್ತಿದ್ದ ಮತ್ತು ಕ್ಷೇತ್ರದಲ್ಲಿ ದಾನಗಳ ಮೂಲಕ ಹೆಸರು ಗಳಿಸಿಕೊಂಡಿರುವ ಗೋವಿಂದ ಬಾಬು ಪೂಜಾರಿ, ಬಾಬು ಹೆಗ್ಡೆ, ಉದ್ಯಮಿ ದೀಪಕ್‌ ಕುಮಾರ್ ಶೆಟ್ಟಿ, ಶರತ್‌ ಶೆಟ್ಟಿ ಉಪ್ಪುಂದ. ಆದರೆ ಅಂತಿಮ ಪಟ್ಟಿ ಬಿಡುಗಡೆಯಾಗುವ ತನಕ ಇವೆಲ್ಲವೂ ಊಹೆ ಮಾತ್ರ.

ಇತ್ತ ಕಾಂಗ್ರೆಸ್ಸಿನಲ್ಲಿ ಗೋಪಾಲ ಪೂಜಾರಿ ಫುಲ್‌ ಫಾರ್ಮಿನಲ್ಲಿದ್ದು ಅವರಿಗೆ ಈ ಬಾರಿಯ ಟಿಕೆಟ್‌ ನೀಡಿ ಕಣಕ್ಕಿಳಿಸಿದೆ. ಅವರು ಈ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಹೋಟೆಲ್‌ ಉದ್ಯಮಿಯೂ ಆಗಿರುವ ಇವರು ಕಳೆದ ಬಾರಿಯ ಸಿದ್ಧರಾಮಯ್ಯನವರ ಸರಕಾರದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷರಾಗಿದ್ದರು. ಈ ಬಾರಿ ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇವರು ಮಂತ್ರಿಯಾಗಬಹುದೆನ್ನುವ ಮಾತುಗಳೂ ಕೇಳಿ ಬರುತ್ತಿವೆ. ಆ ಮೂಲಕ ಈ ಕ್ಷೇತ್ರದಿಂದ ಇದುವರೆಗೆ ಒಬ್ಬರೂ ಮಂತ್ರಿಯಾಗಿಲ್ಲವೆನ್ನುವ ಕೊರಗನ್ನು ಇಲ್ಲವಾಗಿಸಬಹುದೆನ್ನುವ ಇರಾದೆ ಅವರ ಬೆಂಬಲಿಗರದು. ಗೋಪಾಲ್‌ ಪೂಜಾರಿಯವರು ಜನಾನುರಾಗಿಯಾಗಿದ್ದು ಸದಾ ಜನರಿಗೆ ಲಭ್ಯರಿರುತ್ತಾರೆನ್ನುವುದು ಇವರಿಗೆ ಇರುವ ಅಗ್ಗಳಿಕೆ. ಕಳೆದ ಚುನಾವಣೆಯಲ್ಲಿ ಪರೇಶ್‌ ಮೇಸ್ತ ಮತ್ತು ದೀಪಕ್‌ ರಾವ್‌ ಇವರುಗಳ ಕೊಲೆಯ ಕಾರಣ ಕರಾವಳಿಯಲ್ಲಿ ಬಿಜೆಪಿ ಪರವಾದ ದೊಡ್ಡ ಅಲೆಯೇ ಎದ್ದಿದ್ದ ಕಾರಣ ಗೋಪಾಲ ಪೂಜಾರಿಯವರಿಗೆ ಗೆಲುವೆನ್ನುವುದು ಗಗನ ಕುಸುಮವಾಗಿತ್ತು. ಈ ಬಾರಿ ಆಟ ತನ್ನ ಪರವಾಗಿದೆ ಎನ್ನುವುದು ಅವರ ಅನಿಸಿಕೆ. ಇದನ್ನು ಮತದಾರರು ನಿಜವಾಗಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ತಂದಿರುವುದಾಗಿ ಹೇಳಿಕೊಳ್ಳುವ ಸುಕುಮಾರ ಶೆಟ್ಟರು ಸಾಕಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಆದರೆ ಇತರೇ ಕಾರಣಗಳಿಗಾಗಿ ಅವರಿಗೆ ಟಿಕೆಟ್‌ ತಪ್ಪುವ ಲಕ್ಷಣಗಳಿವೆ. ಹಾಗೇನಾದರೂ ಆದಲ್ಲಿ ಗೋಪಾಲ ಪೂಜಾರಿಯವರ ಗೆಲುವು ಸುಲಭವಾಗಲಿದೆ.

ಬಿಲ್ಲವರು ನಿರ್ಣಾಯಕವಾಗಿರುವ ಈ ಕ್ಷೇತ್ರದಲ್ಲಿ ಅವರ ಮತಗಳನ್ನು ಬಿಜೆಪಿ ತನ್ನತ್ತ ಸೆಳೆದುಕೊಂಡು ಯಾವುದೋ ಕಾಲವಾಗಿದೆ. ಕುಂದಾಪುರದಂತೆ ಇಲ್ಲಿಯೂ ಬಂಟರು ನಿರ್ಣಾಯಕರಾದರೂ ಅವರಿಗಿಲ್ಲಿ ಮತದಾರರ ಪಟ್ಟಿಯಲ್ಲಿ ಎರಡನೇ ಸ್ಥಾನ. ಸುಮಾರು ಇಪ್ಪತ್ತು ಸಾವಿರದಷ್ಟು ಅಲ್ಪಸಂಖ್ಯಾತ ಮತಗಳೂ ಇದ್ದು ಅವರು ಕೂಡಾ ಇಲ್ಲಿ ಒಂದು ಹಂತಕ್ಕೆ ನಿರ್ಣಾಯಕ ಸ್ಥಾನ ಗಳಿಸುತ್ತಾರೆ.

ಬಿಲ್ಲವ  –    47,000

ಬಂಟ್ಸ್  –   35,000

ಮೊಗವೀರ    –  30,000

ಮುಸ್ಲಿಂ  –  18,000

ರಾಮಕ್ಷತ್ರಿಯ   – 15,000

ದೇವಾಡಿಗ   –    14,000

ಗಾಣಿಗ  –  12,000

ಪರಿಶಿಷ್ಟ ಜಾತಿ   –  13,000

ಬ್ರಾಹ್ಮಣ – 9,000

ಒಟ್ಟು 2,05,319 ಸಂಖ್ಯೆಯ ಮತದಾರರು ಈ ಕ್ಷೇತ್ರದ ಅಭ್ಯರ್ಥಿಗಳ ಹಣೆ ಬರಹವನ್ನು ನಿರ್ಧರಿಸಲಿದ್ದು. ಒಟ್ಟಾರೆ ಮತದಾರರ ಚಿತ್ತ ಯಾರತ್ತ ಎನ್ನುವುದನ್ನು ಬಿಜೆಪಿಯ ಅಭ್ಯರ್ಥಿ ಯಾರೆನ್ನುವುದು ತೀರ್ಮಾನವಾದ ನಂತರವೇ ತಿಳಿಯಲು ಸಾಧ್ಯ.

Related Articles

ಇತ್ತೀಚಿನ ಸುದ್ದಿಗಳು