Friday, June 14, 2024

ಸತ್ಯ | ನ್ಯಾಯ |ಧರ್ಮ

ಮೋದಿಯವರ ಹೊಸ ಕಾಲಚಕ್ರದಲ್ಲಿ ಉದ್ಯೋಗ ಸಿಗಲಿದೆಯೇ?

ಕಳೆದ ಎರಡು ವರ್ಷಗಳಿಂದ ಪ್ರಧಾನಿ ಮೋದಿಯವರು ಮಾಡುವುತ್ತಿರುವುದೆಲ್ಲಾ ಹೇಗಾದರೂ ಮಾಡಿ 2024ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಆಸೆಯಿಂದ. ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಇದಕ್ಕೆ ಒಂದು ಉದಾಹರಣೆಯಷ್ಟೇ. ಇದರ ಮುಂದೆ ದೇಶ ಅನುಭವಿಸುತ್ತಿರುವ ಸಂಕಷ್ಟಗಳು ಮಣ್ಣುಪಾಲಾಗಿವೆ. ಕಂಠ ಹರಿದುಕೊಂಡು ಕೂಗುವ ಘೋಷಣೆಗಳ ಮಧ್ಯೆ ದೇಶದ ನೋವಿನ ದನಿ ಕೇಳದಾಗಿದೆ

ಲೇಖನ: ಚರಣ್ ಐವರ್ನಾಡು

ಅಯೋಧ್ಯೆಯಲ್ಲಿ ಪ್ರಧಾನಿಗಳು ಬಾಲರಾಮನ ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಸ್ವತಃ ತಾವು ಗರ್ಭಗುಡಿಯ ಒಳಗೆ ರಾಮನಿಗೆ ಪೂಜೆ ಮಾಡಿದ್ದಾರೆ. ಇದಾದ ನಂತರ ಮಾಡಿದ ತಮ್ಮ ಭಾಷಣದಲ್ಲಿ ಜನವರಿ 22ನ್ನು ದೇಶದಲ್ಲಿ ಹೊಸ ಕಾಲ ಚಕ್ರದ ಆರಂಭ ಎಂದು ಘೋಷಿಸಿದ್ದಾರೆ. ಆದರೆ ಮುಂದೆ ಈ ಚಕ್ರ ಹೇಗೆ ತಿರುಗಲಿದೆ ಎಂಬುದು ನೋಡಬೇಕಿದೆ.

2014 ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗ ಅವರು ನೀಡಿದ್ದ ಪ್ರಮುಖ ಭರವಸೆಗಳ ಚಕ್ರ ಉಲ್ಟಾ ಸುತ್ತುತ್ತಿದೆಯೇ?
2014 ರಲ್ಲಿ, ಭಾರತದ ಆರ್ಥಿಕತೆಯು ಸುಮಾರು ಎರಡು ದಶಕಗಳ ಕ್ಷಿಪ್ರ ಬೆಳವಣಿಗೆಯ ನಂತರ ಮೂರು ವರ್ಷಗಳ ಕಾಲ ತೀವ್ರ ಕುಸಿತವನ್ನು ಕಂಡಿತು. 2003-04 ರಿಂದ ವರ್ಷಕ್ಕೆ ಸರಾಸರಿ 70 ಲಕ್ಷಕ್ಕಿಂತಲೂ ಹೆಚ್ಚಿನ ಕೃಷಿಯೇತರ ಉದ್ಯೋಗದ ಬೆಳವಣಿಗೆಯು ತೀವ್ರವಾಗಿ ಕುಸಿದಿದೆ.

ಈ ಸಂದರ್ಭದಲ್ಲಿ ಪಿಎಂ ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದರು. ಈ ಬಣ್ಣ ಬಣ್ಣದ ಬರವಸೆಯನ್ನು ನಂಬಿದ ಯುವಕರು ಅವರನ್ನು ನಂಬಿ ಅಧಿಕಾರಕ್ಕೆ ತರಲು ಮತ ಹಾಕಿದರು. ಆದರೆ ಅವರ ಸರ್ಕಾರಕ್ಕೆ ಈ ಉದ್ಯೋಗ ಸೃಷ್ಟಿಯಲ್ಲಿ ಆಗಿರುವ ಕುಸಿತವನ್ನು ತಡೆಯಲು ಸಾಧ್ಯವಾಗಲಿಲ್ಲ. ಮಾರ್ಚ್ 2020 ರ ಹೊತ್ತಿಗೆ, ಕೋವಿಡ್‌ ತಾಪತ್ರಯ ಶುರುವಾಗುವ ಮೊದಲು ಭಾರತದ ಆರ್ಥಿಕತೆಯ ಪರಿಸ್ಥಿತಿ ಶೋಚನೀಯವಾಗಿತ್ತು. ಇದರಿಂದ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಯುವಕರು.

ಭಾರತೀಯರು ಒಪ್ಪತ್ತಿನ ಊಟಕ್ಕೆ ಇಸ್ರೇಲ್‌ಗೆ ಹೋಗಬೇಕೇ?

ಪ್ಯಾಲಿಸ್ತೇನ್‌ ಹಅಗೂ ಗಾಜಾದ ಮೇಲೆ ಇಸ್ರೇಲ್‌ ಆಕ್ರಮಣ ಆರಂಭವಾಗಿ ಸುಮಾರು ನೂರು ದಿನಗಳಿಗೂ ಹೆಚ್ಚಾಗುತ್ತಿದೆ. ಗಾಜಾ ನಿರ್ಣಾಮವಾಗಿ ಹೋಗಿದೆ. ಇಸ್ರೇಲ್‌ ಯುದ್ಧದ ಉನ್ಮಾದದಲ್ಲಿಯೇ ಇದೆ.

ಪ್ಯಾಲಿಸ್ತೇನಿಯರ ಉದ್ಯೋಗ ಪರವಾನಗಿಯನ್ನು ಇಸ್ರೇಲ್‌ ಅಮಾನತು ಮಾಡಿರುವುದರಿಂದ ಅಲ್ಲಿ ಕಾರ್ಮಿಕರ ಅಭಾವ ಎದುರಾಗಿದೆ. ಹಾಗಾಗಿ ಅಲ್ಲಿ ಉದ್ಯೋಗಗಳು ಖಾಲಿ ಬಿದ್ದಿವೆ. ಅಕ್ಟೋಬರ್‌ನಲ್ಲಿ, ಟೆಲ್ ಅವಿವ್‌ನಲ್ಲಿ ಇಸ್ರೇಲಿ ಕಟ್ಟಡ ನಿರ್ಮಾಣ ಕಂಪನಿಗಳು ಪ್ಯಾಲೆಸ್ತೇನಿಯರ ಬದಲಿಗೆ 100,000 ಭಾರತೀಯ ಕಾರ್ಮಿಕರನ್ನು ಕಳುಹಿಸಿ ಕೊಡುವಂತೆ ಭಾರತ ಸರ್ಕಾರವನ್ನು ಕೋರಿದೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಹರ್ಯಾಣ ಸರ್ಕಾರವು ಡಿಸೆಂಬರ್‌ನಲ್ಲಿ ಇಸ್ರೇಲ್‌ನಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಕಾರ್ಮಿಕರನ್ನು ತಮ್ಮ ರಾಜ್ಯದಿಂದ ಕಳುಹಿಸಲು 10,000 ಹುದ್ದೆಗಳಿಗೆ ಅರ್ಜಿ ಕರೆದಿತ್ತು. ಇದರಲ್ಲಿ ಬಡಗಿಗಳು ಮತ್ತು ಕಬ್ಬಿಣದ ಮಾಡುವ 3,000 ಹುದ್ದೆಗಳಿದ್ದವು. ನೆಲಕ್ಕೆ ಟೈಲ್ ಹಾಕುವವರಿಗಾಗಿ 2,000 ಉದ್ಯೋಗಗಳು ಮತ್ತು ಗಾರೆ ಕೆಲಸಕ್ಕೆ 2,000 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಇದಕ್ಕೆ ಸಂಬಳ ತಿಂಗಳಿಗೆ 6,100 ಶೆಕೆಲ್‌ಗಳು ಅಥವಾ ಸುಮಾರು 1,625 ಡಾಲರ್ (1 ಲಕ್ಷದ 30 ಸಾವಿರ ರುಪಾಯಿ). ಹರ್ಯಾಣದ ತಲಾ ತಿಂಗಳ ಆದಾಯ (per capita income) ಸುಮಾರು 24723.75 ರುಪಾಯಿ (2022-23).

ಅದೇ ತಿಂಗಳು, ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶವು 10,000 ಕಾರ್ಮಿಕರಿಗಾಗಿ ಇದೇ ರೀತಿಯ ಇಸ್ರೇಲಿ ಉದ್ಯೋಗ ನೀಡುವ ಭರವಸೆಯ ಜಾಹೀರಾತನ್ನು ಬಿಡುಗಡೆ ಮಾಡಿತು. ಕಳೆದ ಮಂಗಳವಾರದಂದು ಲಕ್ನೋದಲ್ಲಿ ನೇಮಕಾತಿ ಚಾಲನೆ ಆರಂಭಗೊಂಡಿದ್ದು, ನೂರಾರು ಅರ್ಜಿದಾರರನ್ನು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಭಾರತ ಸರ್ಕಾರ ತನ್ನ ಪ್ರಜಾಪ್ರಭುಗಳಿಗೆ ವಿದೇಶಿ ಉದ್ಯೋಗ ನೀಡುವಷ್ಟು ಮುಂದೆ ಹೋಗಿದೆ ಎಂದು ನೀವು ಭಾವಿಸಿದರೆ, ಅದು ಮೂರ್ಖತನ. ಯುದ್ಧದಲ್ಲಿ ಮುಳುಗಿರುವ ಒಂದು ದೇಶ ಉದ್ಯೋಗ ನೀಡಲು ಶಕ್ತವಾದರೆ, ಭಾರತಕಕ್ಕೆ ಉದ್ಯೋಗ ಸೃಷ್ಟಿಸಲು ಯಾಕೆ ಸಾಧ್ಯವಾಗುತ್ತಿಲ್ಲ?

ನಿರುದ್ಯೋಗದಿಂದ ಭಾರತ ತತ್ತರಿಸಿ ಹೋಗಲಿದೆ?

ಸದ್ಯ ಯುವಕರ ಅವರ ಭವಿಷ್ಯ ಎಷ್ಟು ಕರಾಳವಾಗಿತ್ತು ಎಂಬುದನ್ನು ತೋರಿಸಲು ಮೂರು ಉದಾಹರಣೆಗಳು ಸಾಕು. 2018 ರಲ್ಲಿ, ಭಾರತೀಯ ರೈಲ್ವೇ ವಿವಿಧ ಕೆಳಮಟ್ಟದ ಉದ್ಯೋಗಗಳಲ್ಲಿ 63,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಿತು. 1.91 ಕೋಟಿ ಪದವಿ ಮತ್ತು ಡಿಪ್ಲೋಮಾ ಓದಿರುವ ಯುವಕರು ಈ ಹುದ್ದೆಗಳಿಗೆ ಅಪ್ಲೈ ಮಾಡಿದ್ದರು.

ಒಂದು ವರ್ಷದ ನಂತರ, Personnel and Training Department 12,000 ಖಾಲಿ ಹುದ್ದೆಗಳನ್ನು ಅರ್ಜಿ ಕರೆದಾಗ, 1.2 ಕೋಟಿಗೂ ಹೆಚ್ಚು ಯುವಕರು ಮತ್ತೆ ಅರ್ಜಿ ಸಲ್ಲಿಸಿದರು.

ಆಯ್ದ ಯುವಕರಿಗೆ ನಾಲ್ಕು ವರ್ಷಗಳ ಮಿಲಿಟರಿ ತರಬೇತಿ ನೀಡಲು ಸರ್ಕಾರವು ಅಗ್ನಿವೀರ್ ಯೋಜನೆಯನ್ನು ಘೋಷಿಸಿದಾಗ, ಇದಕ್ಕೆ ಆಯ್ಕೆಯಾಗದೆ ವಿಫಲರಾಗಿ ಯುವಕರು ಹತಾಶೆಗೆ ಒಳಗಾದರು. ಹತಾಶ ಯುವಕರು ಆತ್ಮಹತ್ಯೆ ಮಾಡಿಕೊಂಡರು. ಬಿಹಾರದ ದಾನಪುರ ನಿಲ್ದಾಣದಲ್ಲಿ ರೈಲಿಗೆ ಬೆಂಕಿ ಕೂಡ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರಧಾನಿ ಮೋದಿಯವರು ತಮ್ಮ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾದರು., 2019 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಲೂ ನಿರುದ್ಯೋಗದ ಸಮಸ್ಯೆಗೆ ಪರಿಹಾರ ಹುಡುಕಲಿಲ್ಲ. 2019-20 ರ ಹೊತ್ತಿಗೆ, GDP ಬೆಳವಣಿಗೆಯು 4.2 ಶೇಕಡಾಕ್ಕೆ ಕುಸಿದಿದೆ. ಇದು ಹಿಂದೆಂದೂ ಕಾಣದ ಕುಸಿತವಾಗಿದೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಆಗಸ್ಟ್ 2020 ರಲ್ಲಿ ಪ್ರಕಟವಾದ ಮೆಕಿನ್ಸೆ ವರದಿ ದೇಶ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡುತ್ತದೆ: ಮುಂದಿನ ದಶಕದಲ್ಲಿ ಭಾರತದ ಜಿಡಿಪಿ ವಾರ್ಷಿಕವಾಗಿ ಶೇಕಡಾ 8 ರಿಂದ 8.5 ರಷ್ಟು ಬೆಳೆಯಬೇಕು. ಹಾಗಾದಾಗ ಮಾತ್ರ 2019-20 ರ ಹಣಕಾಸು ವರ್ಷದಲ್ಲಿ ದಾಖಲಾದ ಶೇಕಡಾ 4.2 ರ ಬೆಳವಣಿಗೆಯ ಡಬಲ್‌ ಆಗುತ್ತದೆ. ಆಗ 2023 ಮತ್ತು 2030 ರ ನಡುವೆ 9 ಕೋಟಿ ಹೊಸ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಯಾಗುತ್ತದೆ. ಇವುಗಳಲ್ಲಿ 6 ಕೋಟಿ ಹೊಸ ಉದ್ಯೋಗಿಗಳು ವರ್ಕ್‌ ಫೋರ್ಸ್‌ ಪ್ರವೇಶಿಸಲಿದ್ದಾರೆ.

ಆದರೆ ಇವರಿಗೆ ಮಾಡಲು ಕೆಲಸ ಇದ್ಯಾ? ಇದೊಂದು ಪ್ರಶ್ನೆ… ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನೆನ್ಸ್ ಈ ಬಗ್ಗೆ ಮಾತನಾಡುತ್ತದೆ. COVID ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿದರು.

COVID ಆಟ ಮುಗಿದಾಗ ಅವರು ಮತ್ತೆ ಬಂದು ಮಾಡಲು ಏನೂ ಉದ್ಯೋಗ ಇರಲಿಲ್ಲ. ಇದರ ಪರಿಣಾಮವಾಗಿ, ಏಪ್ರಿಲ್ 2020 ಮತ್ತು ಜೂನ್ 2023 ರ ನಡುವೆ 6 ಕೋಟಿ ಕಾರ್ಮಿಕರು ಕೃಷಿ ಕೆಲಸದ ಚಟುವಟಿಕೆಗೆ ಬಂದರು ಎಂದು ಈ ಅಧ್ಯಯನ ಹೇಳುತ್ತದೆ.
2011 ಮತ್ತು 2021 ರ ನಡುವೆ, 16 ರಿಂದ 60 ವರ್ಷ ವಯಸ್ಸಿನ 7 ಕೋಟಿ ಜನರು ಕೆಲಸ ಹುಡುಕುವುದನ್ನೇ ಬಿಟ್ಟಿದ್ದಾರೆ. ಇವರು ದೇಶದ ಕಾರ್ಮಿಕ ಬಲದಿಂದ ಹೊರಗುಳಿದಿದ್ದಾರೆ. ಇದನ್ನು ಹೇಳಿದ್ದು ಸ್ವತಃ ಸರ್ಕಾರದ್ದೇ ಆದ Periodic Labour Force Studies.

ಸದ್ಯ ಮೋದಿಯವರು ಹೇಳಿದ ಚಕ್ರ ಮುಂದಕ್ಕೆ ಚಲಿಸುತ್ತೀಲ್ಲ. ಮುಂದಕ್ಕೆ ಹೋಗದೇ ಇದ್ದರೂ ಪರವಾಗಿಲ್ಲ, ನಿಂತಲ್ಲೇ ನಿಂತಿದ್ದರೂ ಫೈನ್… ಆದರೆ ಚಕ್ರ ಈಗ ಹಿಂದಕ್ಕೆ ಓಡುತ್ತಿದೆ. ಯುವಕ ಯುವತಿಯರು ಉದ್ಯೋಗದ ಭದ್ರತೆಯಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ, ಇದು ಒಂದು ಕಡೆ ಇದ್ದರೆ, ಉನ್ನತ ಶಿಕ್ಷಣದ ಗುಣಮಟ್ಟದಲ್ಲಿ ಏಕಾಏಕಿ ದುರಂತಮಯವಾದ ಕುಸಿತವಾಗಿದೆ.

ಕಳೆದ ಎರಡು ದಶಕಗಳಲ್ಲಿ, ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜಿತವಾಗಿರುವ ಖಾಸಗಿ ಕಾಲೇಜುಗಳ ಸಂಖ್ಯೆ ಅಣಬೆಯಂತೆ ಹೆಚ್ಚಾಗುತ್ತಿದೆ. ಎರಡು ದಶಕಗಳ ಹಿಂದೆ ಸುಮಾರು 10,000 ಇದ್ದ ಖಾಸಗಿ ಕಾಲೇಜುಗಳ ಸಂಖ್ಯೆ ಈಗ 42,000ಕ್ಕೂ ಹೆಚ್ಚಾಗಿದೆ. ಇವೆಲ್ಲವೂ ಸುಳ್ಳು ಭರವಸೆಗಳನ್ನು ನೀಡುತ್ತಾ, ಫೀಸು ಹೆಚ್ಚಿಸುವುದನ್ನು ಮೂಮದುವರಿಸಿವೆ. ಉನ್ನತ ಶಿಕ್ಷಣ ದುಬಾರಿಯಾಗುತ್ತಿದೆ.

ಕಳೆದ ಎರಡು ವರ್ಷಗಳಿಂದ ಪಿಎಂ ಮೋದಿಯವರು ಮಾಡುವುತ್ತಿರುವುದೆಲ್ಲಾ ಹೇಗಾದರೂ ಮಾಡಿ 2024ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು. ಅಯೋಧ್ಯೆಯಲ್ಲಿ ಮಾಡಿರುವ ರಾಮನ ಪ್ರತಿಷ್ಠಾಪನೆ ಇದಕ್ಕೆ ಉದಾಹರಣೆ. ಇದರ ಮುಂದೆ ದೇಶ ಅನುಭವಿಸುತ್ತಿರುವ ಸಂಕಷ್ಟಗಳು ಮಣ್ಣುಪಾಲಾಗಿವೆ. ಕಂಠ ಹರಿದುಕೊಂಡು ಕೂಗುವ ಘೋಷಣೆಗಳ ಮಧ್ಯೆ ದೇಶದ ನೋವಿನ ದನಿ ಕೇಳದಾಗಿದೆ.

ಜನತೆಯನ್ನು ಎಲ್ಲಿ ಹೇಗೆ ನಿಯಂತ್ರಿಸಬೇಕು ಎಂಬುದನ್ನು ಸ್ಪಷ್ಟವಾಗಿ ಮೋದಿಯವರು ಮಾಡಿದ್ದಾರೆ. ಭ್ರಮೆಯಿಂದ ತೇಲಾಡುತ್ತಿದ್ದೇವೆ ನಾವು. ಸಮಸ್ಯೆಗಳನ್ನು ಮರೆತಿದ್ದೇವೆ. ಆದರೆ, ಸಮಸ್ಯೆಗಳು ನಮ್ಮನ್ನು ಮರೆಯಲ್ಲ. ಹುಚ್ಚುನಾಯಿಯಂತೆ ನಮ್ಮನ್ನು ಬೆನ್ನಟ್ಟಿ ಕಚ್ಚಲಿವೆ. ಒಂದು ದಿನ ದೀಡೀರನೇ ಮೋದಿಯವರು ಚುನಾವಣೆಯನ್ನು ಮುಂದೂಡುತ್ತಿದ್ದೇವೆ ಎಂದರೂ ಅಚ್ಚರಿಯಿಲ್ಲ.

ಹೀಗೇ ಆದರೆ ಮೋದಿಯವರು ಹೇಳಿದ ಭರತವರ್ಷದ ಹೊಸ ಕಾಲ ಚಕ್ರ ತುಂಬಾ ಸ್ಪೀಡಾಗಿ ಓಡಲಿದೆ. ಆದರೆ ಮುಂದಕ್ಕಲ್ಲ, ಹಿಂದಕ್ಕೆ…..

Related Articles

ಇತ್ತೀಚಿನ ಸುದ್ದಿಗಳು