Thursday, June 13, 2024

ಸತ್ಯ | ನ್ಯಾಯ |ಧರ್ಮ

ಸಂಸತ್‌ ಮೇಲೆ ʼನಿರುದ್ಯೋಗದʼ ಹೊಗೆ!

ಡಿಸೆಂಬರ್‌ 13, ಬುಧವಾರ ಲೋಕಸಭೆಯ ಸಂದರ್ಶಕರ ಗ್ಯಾಲರಿಗೆ ನುಗ್ಗಿ, ಹಳದಿ ಬಣ್ಣದ ಹೊಗೆಯನ್ನು ಹಾರಿಸಿ ʼಸರ್ವಾಧಿಕಾರʼದ ವಿರುದ್ದ ಘೋಷಣೆಗಳನ್ನು ಕೂಗಿದರು. ಸಂಸತ್‌ ದಾಳಿ ಎಂಬಂತೆ ಬಿಂಬಿಸಲ್ಪಟ್ಟ ಆರು ಮಂದಿ ಯುವಕರ ಈ ನಾಟಕೀಯ ಸಂಭವ ದೇಶದಾದ್ಯಂತ ನಿರುದ್ಯೋಗದ ವಿರುದ್ಧದ ಪ್ರತಿಭಟನೆಯಾಗಿ ಬದಲಾಯಿತು.

ಉದ್ಯೋಗ ಸಿಗದೆ ಈ ʼಪ್ರತಿಭಟನಾಕಾರರುʼ ಹತಾಶರಾಗಿ ಹೋಗಿದ್ದರು. ಹರಿಯಾಣ ಮೂಲದ ನೀಲಂ ಆಜಾದ್ ಎಂಬ ಮಹಿಳೆ ಉನ್ನತ ಸ್ನಾತಕೋತ್ತರ ಪದವಿಯನ್ನು ಪಡೆದೂ ನಿರುದ್ಯೋಗಿಯಾಗಿದ್ದರು.. ಇವರೆಲ್ಲಾ ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಅಭಿಮಾನಿಗಳಾಗಿದ್ದರೆಂದೂ, 1929 ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ಬಾಂಬ್ ಸ್ಫೋಟಿಸಿದಂತೆ ಇದನ್ನೂ ಮಾಡಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಕಾಂಗ್ರೇಸ್‌ ನಾಯಕ ರಾಹುಲ್‌ ಗಾಂಧಿಯವರೂ ಈ ಘಟನೆಯ ಹಿಂದೆ ʼನಿರುದ್ಯೋಗʼದ ಕಾರಣವನ್ನು ಕಂಡಿದ್ದಾರೆ.

ಮೋದಿ ಸರ್ಕಾರವು ಆರೋಪಿಗಳನ್ನು ಭಯೋತ್ಪಾದನೆಯ ಆರೋಪದಡಿಯಲ್ಲಿ ಬಂಧಿಸಿದರೂ ಎಷ್ಟೇ ನಾಟಕೀಯವಾಗಿದ್ದರೂ, ಇದು ಹೇಗೆ ಭಯೋತ್ಪಾದಕ ಕೃತ್ಯವಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಈ ಮೂಲಕ ಇಡೀ ಕೃತ್ಯ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ನಿರುದ್ಯೋಗದ ಬಗೆಗಿನ ಚರ್ಚೆಗೆ ಕಾರಣವಾಗಿದೆ.

ನಿರುದ್ಯೋಗ ಎಂಬ ಮಹಾಮಾರಿ!

ಈ ಘಟನೆಯ ಹೊರತಾಗಿಯೂ ದೇಶದಾದ್ಯಂತ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅನೇಕ ವರದಿಗಳು ನಿರುದ್ಯೋಗ ಸಮಸ್ಯೆಯ ಗಂಭೀರತೆಯನ್ನು ನಮ್ಮ ಮುಂದೆ ಇಟ್ಟಿವೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿಅಂಶಗಳು, ಔದ್ಯೋಗಿಕ ವಲಯದಲ್ಲಿ 15-29 ವರ್ಷ ವಯಸ್ಸಿನ ಯುವಕರ ಪ್ರಮಾಣ 2016-17 ರಲ್ಲಿ 25% ಇದ್ದದ್ದು, 2022-23 ರಲ್ಲಿ 17% ಕ್ಕೆ ಗಂಭೀರವಾಗಿ ಕುಸಿದಿರುವುದನ್ನು ತೋರಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, 45 ವರ್ಷಕ್ಕಿಂತ ಮೇಲ್ಪಟ್ಟವರ ಪ್ರಮಾಣ 37% ರಿಂದ 49% ಕ್ಕೆ ಏರಿದೆ.

ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಂತ ತೀವ್ರವಾಗಿ ಹೆಚ್ಚಾಗಿದೆ. ಪಕ್ಕದ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾ ತಮ್ಮ ದೇಶದ ಯುವಕ-ಯುವತಿಯರಿಗೆ ಉದ್ಯೋಗ ನೀಡುವಲ್ಲಿ ಉತ್ತಮ ಕೆಲಸವನ್ನು ಮಾಡಿದೆ ಎಂದು ವಿಶ್ವ ಬ್ಯಾಂಕ್‌ನ ಡೇಟಾ ತೋರಿಸುತ್ತದೆ. ಭಾರತ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಬದಲು ಜನಸಂಖ್ಯೆಯ ಬೆಳವಣಿಗೆಯನ್ನು ಮುಂದುವರಿಸಿದೆ. HSBC ಯ ಭಾರತೀಯ ಅರ್ಥಶಾಸ್ತ್ರಜ್ಞ ಪ್ರಾಂಜುಲ್ ಭಂಡಾರಿ, ಮುಂದಿನ ಒಂದು ದಶಕದಲ್ಲಿ ಭಾರತವು 70 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ಆದರೆ, ಅದು ಕೇವಲ 24 ಮಿಲಿಯನ್‌ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ಉದ್ಯೋಗ ಮತ್ತು ಶಿಕ್ಷಣ ಪರಸ್ಪರ ವಿರುದ್ಧ ಸಂಬಂಧವನ್ನು ಹೊಂದಿರುವಂತೆ ಕಾಣುತ್ತಿದೆ ಎಂದರೆ ದುರಾದೃಷ್ಟ. ಒಂದು ಹೆಚ್ಚಾದರೆ ಇನ್ನೊಂದು ಕಡಿಮೆಯಾಗುತ್ತದೆ. ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ವರದಿ 2023 ರ ಪ್ರಕಾರ ಭಾರತದ ನಿರುದ್ಯೋಗ ಮಟ್ಟ ಯುವ ಪದವೀಧರರಲ್ಲಿಯೇ ಹೆಚ್ಚು, ಅಂದರೆ 42%. ಸಂಸತ್ತಿನಮೇಲೆ ದಾಳಿ ಮಾಡಿದ ಯುವಕರು ಭಾರತದಲ್ಲಿ ವಿದ್ಯಾವಂತ ಯುವಕ ಜನತೆ ಭಾರತದ ಜಾಬ್‌ ಮಾರ್ಕೆಟ್‌ನ ಮೇಲೆ ಅತ್ಯಂತ ಕಳಪೆ ನಿರೀಕ್ಷೆಗಳನ್ನು ಹೊಂದಿರುವುದನ್ನು ತೋರಿಸುತ್ತದೆ.

ಈ ಎಲ್ಲಾ ಪರಿಸ್ಥಿತಿಗಳನ್ನು ನೋಡಿದರೆ, ಸದ್ಯದ ಪರಿಸ್ಥಿತಿಯಲ್ಲಿ ದೇಶದ ಜನತೆ ನಿರುದ್ಯೋಗವನ್ನು ಅತ್ಯಂತ ಕರಾಳ ಸಮಸ್ಯೆಯೆಂಬಂತೆ ನೋಡುತ್ತಿರುವುದು ಅತಿಶಯೋಕ್ತಿಯಲ್ಲ. ದೆಹಲಿ ಮೂಲದ ಥಿಂಕ್ ಟ್ಯಾಂಕ್ ಲೋಕ್‌ನೀತಿ ಗುಜರಾತ್‌ನ 88% ಜನರು ನಿರುದ್ಯೋಗವನ್ನು “ದೊಡ್ಡ ಸಮಸ್ಯೆ” ಎಂದು ಪರಿಗಣಿಸಿದ್ದಾರೆ ಎಂದು ಹೇಳಿದೆ. ಇತರ ರಾಜ್ಯಗಳ ಜನರೂ ಇದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದಾರೆ.

ರಾಜಕೀಯವಾಗಿ ಸೋತಿದೆಯೇ ದೇಶ?

ನಿರುದ್ಯೋಗದ ಸಮಸ್ಯೆ ದೇಶದ ರಾಜಕೀಯ ವೈಫಲ್ಯ ಎಂಬಂತೆ ಯಾಕೆ ಪರಿಗಣಿಸಲ್ಪಟ್ಟಿಲ್ಲ ಎಂಬುದೇ ಅಚ್ಚರಿ. ಅದೊಂದು ರಾಜಕೀಯ ಚರ್ಚೆಯ ವಿಷಯವಾಗಿ ಯಾಕೆ ಬದಲಾಗಿಲ್ಲ? ಹಾಗೊಂದು ವೇಳೆ ಜನರು ನಿರುದ್ಯೋಗವನ್ನು ರಾಜಕೀಯ ಸಮಸ್ಯ ಎಂಬಂತೆ ಪರಿಗಣಿಸಿದರೂ, ಅದು ರಾಜ್ಯ ಮಟ್ಟದಲ್ಲಿ ಮಾತ್ರ. ಇದು ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಿರುದ್ಯೋಗ ಪ್ರಮುಖ ಸಮಸ್ಯೆಯಾಗಿತ್ತು. ಭಾರತ್ ರಾಷ್ಟ್ರ ಸಮಿತಿಯು ಅಧಿಕಾರವನ್ನು ಕಳೆದುಕೊಳ್ಳಲು ಮತ್ತು ಮತದಾರರು ಕಾಂಗ್ರೆಸ್ ಸರ್ಕಾರವನ್ನು ರಾಜ್ಯಕ್ಕೆ ತರಲು ಮುಖ್ಯ ಕಾರಣವೇ ನಿರುದೈೋಗ ಸಮಸ್ಯೆ. ಪಶ್ಚಿಮ ಬಂಗಾಳದ ಎಸ್‌ಎಸ್‌ಸಿ ಹಗರಣ ಮತ್ತು ಮಧ್ಯಪ್ರದೇಶದ ವ್ಯಾಪಂ ಹಗರಣದಂತಹ ಸರ್ಕಾರಿ ನೇಮಕಾತಿಯಲ್ಲಿನ ಭ್ರಷ್ಟಾಚಾರಗಳು ರಾಜ್ಯ ಸರ್ಕಾರಗಳ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿವೆ. ʼಕೆಲಸ ಕೊಡದೆ ವಂಚಿಸಿದ್ದಾರೆʼ ಎಂಬುದೇ ಉದ್ಯೋಗ ಇಲ್ಲದ ವಿದ್ಯಾವಂತ ಯುವಕರ ಕೋಪ!

ಇದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರಗಳು ಈಗ ಅನೇಕ ನೀತಿಗಳನ್ನು ಜಾರಿಗೆ ತರುತ್ತಿವೆ. ನಿಮಗೆ ಗೊತ್ತಿರುವಂತೆ ಬಿಹಾರ ಜಾತಿ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಜಾತಿ ಆಧಾರಿತ ಕೋಟಾಗಳನ್ನು 50% ರಿಂದ 65% ಕ್ಕೆ ವಿಸ್ತರಿಸಿದೆ. ಇದು ಇತರ ಹಿಂದುಳಿದ ವರ್ಗಗಳ ವಿದ್ಯಾವಂತ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಉತ್ತಮ ಅವಕಾಶವನ್ನು ನೀಡಬಹುದು.

ಆದರೆ ಸರ್ಕಾರಿ ಉದ್ಯೋಗಗಳ ಸಂಖ್ಯೆ ತೀರಾ ಕಡಿಮೆ. ಹಾಗಾಗಿ, ಸರ್ಕಾರಗಳು ತಳಮಟ್ಟದ ಯುವಕನ್ನು ತಲುಪಲು ನಗದು ವರ್ಗಾವಣೆಯಂತಹ ಕ್ರಮಗಳ ಕಡೆಗೆ ಗಮನ ಹರಿಸಿವೆ. ಕರ್ನಾಟಕದಲ್ಲಿ ಕಾಂಗ್ರೇಸ್‌ ಮಾಡಿದ್ದೂ ಇದನ್ನೇ. ಮಿರುದ್ಯೋಗಿ ಯುವಕರಿಗೆ ಉದ್ಯೋಗ ಕಂಡುಕೊಳ್ಳುವ ಅವಧಿಯ ವರೆಗೆ ಆರ್ಥಿಕ ನೆರವು ನೀಡುವುದು. ಸಹಜವಾಗಿಯೇ ಇದು ನಿರುದ್ಯೋಗಿಗಳಿಗೆ ಒಂದು ಮಟ್ಟದ ವರೆಗೆ ಆರ್ಥಿಕ ಬೆಂಬಲವಾಗುತ್ತದೆ.

ಸಾಂವಿಧಾನಿಕವಾಗಿ ಆರ್ಥಿಕ, ಹಣಕಾಸು ಮತ್ತು ವಾಣಿಜ್ಯದಂತಹ ಬಹುತೇಕ ಅಧಿಕಾರಗಳು ಕೇಂದ್ರಕ್ಕೆ ಸೇರಿದ್ದು. ಉದ್ಯೋಗಗಳನ್ನು ಸೃಷ್ಟಿಸುವುದು ಮುಖ್ಯವಾಗಿ ಕೇಂದ್ರ ಸರ್ಕಾರದ ಜವಾಬ್ದಾರಿ. ವಿಪರ್ಯಾಸವೆಂದರೆ, ಜನರ ನಿರುದ್ಯೋಗ ಪ್ರೇರಿತ ಕೋಪ ಕೇಂದ್ರದ ಕಡೆಗೆ ತುಂಬಾ ತುಂಬಾ ಕಡಿಮೆ. ಇದರ ಹಿಂದೆ ಕೆಲಸ ಮಾಡಿರುವುದು ನರೇಂದ್ರ ಮೋದಿ ಹಾಗೂ ಬಿಜೆಪಿಯ ಜನಪ್ರಿಯತೆ. ಉದ್ಯೋಗ ಕೇಳಬೇಕಾದ ಯುವಕರಿಗೆ ಚರ್ಚಿಸಲು ಹಾಗೂ ಯೋಚಿಸಲು, ಅವರನ್ನು ಉದ್ಯೋಗದ ಬಗ್ಗೆ ಯೋಚಿಸದಂತೆ ಮಾಡಲು ಬಿಜೆಪಿಯ ನರೇಟಿವ್‌ಗಳು ಪ್ರಖರವಾಗಿ ಕೆಲಸ ಮಾಡಿವೆ. ನಿರುದ್ಯೋಗಿ ಯುವಕರು ತಮ್ಮ ಬದುಕು ಕಟ್ಟಿಕೊಳ್ಳಲು ಬೇಕಾದ ಅಗತ್ಯಗಳ ಬಗ್ಗೆ ಯೋಚನೆ ಮಾಡದಂತೆ ಬಿಜೆಪಿ ಮಾಡಿದೆ. ಕೊನೆಯಲ್ಲಿ, ʼಉದ್ಯೋಗ ಇಲ್ಲದಿದ್ದರೂ ಏನಂತೆ, ಮೋದಿ ಇರಬೇಕು!ʼ ಎಂಬ ಯೋಚನೆಗಳನ್ನು ಬಿತ್ತಲಾಗಿದೆ.

ದೆಹಲಿಯ ಕಡೆಗಿಲ್ಲ ಜನಾಕ್ರೋಶ!

ಉದ್ಯೋಗ ನೀಡುವುದು ಕೇಂದ್ರದ ಜವಬ್ದಾರಿ. ಜನತೆ ಕೇಂದ್ರದ ಮೇಲೆ ತಮ್ಮ ಆಕ್ರೋಶವನ್ನು ತೋರಿಸಬೇಕು. ಆದರೆ, ನಿರುದ್ಯೋಗದ ಬಗ್ಗೆ ಜನಾಭಿಪ್ರಾಯವನ್ನು ಸಂಗ್ರಹಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕಾದ ಮುಖ್ಯವಾಹಿನಿಗಳ ಮಾಧ್ಯಮಗಳು ತಮ್ಮ ಜವಬ್ದಾರಿಯನ್ನು ಮರೆತಿವೆ. ಅವುಗಳು ಅನಧಿಕೃತವಾಗಿ ಬಿಜೆಪಿಯ ಐಟಿ ಸೆಲ್‌ಗಳಾಗಿ ಬದಲಾಗಿವೆ.

ಮೇಲ್ವರ್ಗಗಳ ಜನರು ತಾವು ವೈಯಕ್ತಿಕವಾಗಿ ನಿರುದ್ಯೋಗದಿಂದ ಬಳಲುತ್ತಿದ್ದರೂ, ಕೇಸರಿ ಪಕ್ಷದ ಮೇಲೆ ತಮ್ಮ ಕೋಪವನ್ನು ತೋರಿಸುತ್ತಿಲ್ಲ. ಇಲ್ಲಿ ನಿರುದ್ಯೋಗ ಎಂಬುದು ಚರ್ಚೆಯ ವಿಷಯವೇ ಅಲ್ಲ. ದೇವಾಲಯ, ರಾಷ್ಟ್ರೀಯ ಭದ್ರತೆ ಅಪಾಯದಲ್ಲಿದೆ, ಧರ್ಮ ಅಪಾಯದಲ್ಲಿದೆ ಎಂಬ ನರೇಟಿವ್‌ಗಳು 2014 ರಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಿ ಕೆಲಸ ಮಾಡಿವೆಯೋ, ಇವತ್ತಿಗೂ ಹಾಗೆಯೇ ಚರ್ಚಿಸಬೇಕಾದ ಅಗತ್ಯ ವಿಷಯಗಳಿಂದ ಜನರನ್ನು ಹಾದಿತಪ್ಪಿಸುತ್ತಿವೆ. ಒಂದು ಲೆಕ್ಕದಲ್ಲಿ ನೋಡಿದರೆ, ಈ ನರೇಟಿವ್‌ಗಳ ಪ್ರಭಾವ ಈಗ ಹೆಚ್ಚೇ ಇದೆ.

ಬಿಜೆಪಿಯ ರಾಜಕೀಯ ತಂತ್ರಗಾರಿಕೆಗಳ ಹೊರತಾಗಿಯೂ, ನಿರುದ್ಯೋಗ ಎಂಬ ʼರಾಜಕೀಯವಲ್ಲದೇ ಹೋಗಿರುವʼ ಸಮಸ್ಯೆ ಆಗಾಗ ಹೆಡೆ ಎತ್ತಿ ಬುಸುಗುಡುತ್ತಾ, ಇದ್ದಕ್ಕಿದ್ದಂತೆ ವಿಷಗಾಳಿ ಬಿಡುತ್ತದೆ. ಆಗ ಸಂಸತ್‌ ಮೇಲೆ ನಡೆಸಿದ ಹಳದಿ ಹೊಗೆ ದಾಳಿಯಂತಹ ಘಟನೆಗಳು ನಡೆಯುತ್ತವೆ. 1980 ರ ದಶಕದ ಉತ್ತರಾರ್ಧದಿಂದ ಭಾರತವು ಆರ್ಥಿಕವಾಗಿ ಸಮರ್ಪಕವಾಗಿ ಬೆಳೆಯುತ್ತಿದ್ದರೂ, ನಿರುದ್ಯೋಗ, ಅದರಲ್ಲೂ ಕಾರ್ಮಿಕ ಶಕ್ತಿಯನ್ನು ಕಡಿಮೆ ಬಳಸಿಕೊಳ್ಳುತ್ತಿರುವ ಕ್ಷೇತ್ರಗಳಲ್ಲಿ ಬೆಳೆಯುತ್ತಲೇ ಇದೆ. ಅಂದರೆ, ಆರ್ಥಿಕವಾಗಿ ಬೆಳೆಯುವುದು ಮತ್ತು ಉದ್ಯೋಗ ಹೆಚ್ಚಳದ ಮಧ್ಯೆ ಸಂಬಂಧವೇ ಇಲ್ಲ.

ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ವರದಿ 2023 ರ ವರದಿಯೂ ಇದನ್ನೇ ಹೇಳುತ್ತದೆ. ಇದರ ಪ್ರಕಾರವೂ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗದ ಬೆಳವಣಿಗೆಯ ನಡುವೆ ಯಾವುದೇ ಸಂಬಂಧವಿಲ್ಲ . ಇದಲ್ಲದೆ, ಭಾರತದ ನಿರುದ್ಯೋಗ ಸಮಸ್ಯೆಯ ಇನ್ನೊಂದು ಕರಾಳ ಆಧ್ಯಾಯವೆಂದರೆ, ಮಹಿಳರೂ ಸಂಬಳದ ಕೆಲಸವನ್ನು ಅತೀ ಕಡಿಮೆ ಮಾಡುತ್ತಿದ್ದಾರೆ. ಭಾರತದ ಮಹಿಳಾ ಕಾರ್ಮಿಕ ಬಲ ವಿಶ್ವದಲ್ಲೇ ಅತ್ಯಂತ ಕೆಟ್ಟದಾಗಿದೆ.

ನಿರುದ್ಯೋಗದ ಸಮಸ್ಯೆಯನ್ನು ಸುಧಾರಿಸಲು ಬೃಹತ್ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯೊಂದರ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ತುಂಬಾ ಸಮಯ ಬೇಕಾಗಬಹುದು. ಈ ಪರಿಸ್ಥಿತಿಯಲ್ಲಿ ಮತದಾರರು, ಉದ್ಯೋಗ ಸಮಸ್ಯೆಯನ್ನು ಸರ್ಕಾರ ನಿವಾರಿಸಬಹುದು ಎಂದು ಯೋಚಿಸುವುದೂ ಅಸಂಭನೀಯ. ಇದು ನನ್ನ ವೈಯಕ್ತಿಕ ನಿರಾಶವಾದವಾಗಿದ್ದರೆ ಸಾಕು! ಹಿಂದುತ್ವದಂತಹ ಐಡೆಂಟಿಟಿ ಪಾಲಿಟಿಕ್ಸ್ ಆಡವಾಡುವ ವರೆಗೆ ಇದು ಸಾದ್ಯವಾಗುತ್ತದೆಯೋ ಇಲ್ಲವೋ.

Related Articles

ಇತ್ತೀಚಿನ ಸುದ್ದಿಗಳು