Saturday, June 15, 2024

ಸತ್ಯ | ನ್ಯಾಯ |ಧರ್ಮ

ಭಾರತದಲ್ಲಿ ಹೆಚ್ಚಿದ್ದಾರೆ 25 ವರ್ಷದೊಳಗಿನ ನಿರುದ್ಯೋಗಿಗಳು! – State of Working India ವರದಿಯಲ್ಲಿ ಏನಿದೆ?

ಬೆಂಗಳೂರು: ಭಾರತದಲ್ಲಿ ಒಟ್ಟಾರೆ ನಿರುದ್ಯೋಗದ ಪ್ರಮಾಣ 2017-18ರ 8.7% ಕ್ಕೆ ಹೋಲಿಸಿದರೆ 2021-22ರಲ್ಲಿ  6.6% ಇಳಿದಿದೆ. ಆದರೆ 25 ವರ್ಷ ಪ್ರಾಯದೊಳಗಿನ ಭಾರತದ 42% ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ‌ ಸೆಂಟರ್ ಫಾರ್ ಸಸ್ಟೈನಬಲ್ ಎಂಪ್ಲಾಯಿಮೆಂಟ್ (Centre for Sustainable Employment – CSE)  ವರದಿ ತಿಳಿಸಿದೆ.

ಬುಧವಾರ ಬಿಡುಗಡೆ ಮಾಡಿರುವ ಈ ವರದಿಯಲ್ಲಿ ಉನ್ನತ ಶೈಕ್ಷಣಿಕ ಮಟ್ಟವನ್ನು ಹೊಂದಿರುವವರಿಗೆ ಅದೇ ವಯಸ್ಸಿನವರಿಗೆ ಹೋಲಿಸಿದರೆ ಭಾರತದಲ್ಲಿ 25 ವರ್ಷಕ್ಕಿಂತ ಕಡಿಮೆ ಪ್ರಾಯದ ಪದವೀಧರರು ಅತೀ ಹೆಚ್ಚು ನಿರುದ್ಯೋಗಿಗಳು ಎಂದು ಹೇಳಿದೆ.

ಅಲ್ಲದೇ, ಲಿಂಗಾಧಾರಿತ ವೇತನದಲ್ಲಿ ಅಸಮಾನತೆ (gender pay disparity) ಕಡಿಮೆಯಾಗಿದ್ದರೂ, ಜಾತಿ – ಧರ್ಮ ಆಧಾರಿತ ವೇತನದಲ್ಲಿರುವ ಅಸಮಾನತೆಗಿಂತ ಲಿಂಗಾಧಾರಿತ ವೇತನದಲ್ಲಿ ಅಸಮಾನತೆ ಹೆಚ್ಚಿದೆ. ಇದು ಇನ್ನೂ ವಿವಿಧ ಜಾತಿಗಳು ಮತ್ತು ಧರ್ಮಗಳ ನಡುವಿನ ಆದಾಯದ ಅಸಮಾನತೆಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಸ್ವಉದ್ಯೋಗಿಗಳಲ್ಲಿ ಮತ್ತು ಪರಿಶಿಷ್ಟ ಜಾತಿ/ಪಂಗಡಗಳ ಮಹಿಳಾ ಉದ್ಯೋಗಿಗಳಲ್ಲಿ ಅಸಮಾನತೆ ಹೆಚ್ಚಿದೆ.

‘State of Working India 2023 — Social Identities and Labour Market Outcomes’  ಎಂಬ ಈ ವರದಿಯ ಪ್ರಕಾರ ಕಾರ್ಮಿಕ ಮಾರುಕಟ್ಟೆಗಳಲ್ಲಿ ಜಾತಿ ಆಧಾರಿತ ಬೇಧ ಮತ್ತು ಲಿಂಗಾಧಾರಿತ ಅಸಮಾನತೆ ಕಡಿಮೆಯಾಗಿದೆ.  ಆದರೆ, ಅಭಿವೃದಿಯನ್ನು ಉದ್ಯೋಗಗಳಿಗೆ ಜೋಡಿಸುವ ವಿಚಾರದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸಾಧನೆ ಕಳಪೆ.

Employment-Unemployment Surveys ಮತ್ತು Periodic Labour Force Survey, India Working Survey ಯಂತಹ National Statistical Office (NSO) ನಡೆಸಿದ ಸಮೀಕ್ಷೆಗಳು ಸೇರಿದಂತೆ ಬೇರೆ ಬೇರೆ ಮೂಲಗಳ ಡೇಟಾ ಬಳಸಿಕೊಂಡು ಈ ವರದಿನ್ನು ತಯಾರಿಸಲಾಗಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧಕರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು, ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಸಂಶೋಧನೆ ನಡೆಸಿದ್ದಾರೆ.

ಮಹಿಳೆಯರು ಏನು ಮಾಡುತ್ತಿದ್ದಾರೆ?

ಈ ವರದಿಯಲ್ಲಿ ಲಿಂಗ-ಆಧಾರಿತ ವೇತನದಲ್ಲಿರುವ ಅಸಮಾನತೆಯಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆಗಳನ್ನೂ, ಸಾಂಪ್ರದಾಯಿಕ ಲಿಂಗ ಮಾನದಂಡಗಳು ಮಹಿಳೆಯರ ಉದ್ಯೋಗಗಳ ಮೇಲೆ ಬೀರಿರುವ ಪ್ರಭಾವವನ್ನು ತೋರಿಸಲಾಗಿದೆ.

2004 ರಲ್ಲಿ ಮಹಿಳೆಯರು ಪುರುಷರ ಸಂಬಳದ 70% ವೇತನ ಪಡೆಯುತ್ತಿದ್ದರು. ಇದು 2017 ರಲ್ಲಿ 76% ಏರಿದ್ದು, ಈ ಪ್ರಮಾಣ 2020-21ವರೆಗೆ ಮುಂದುವರಿದಿದೆ.  ಮುಖ್ಯವಾಗಿ ಗೃಹಣಿಯರು ಸ್ವಉದ್ಯೋಗ ಆರಂಭಿಸಿದ ನಂತರ 2020-21ರಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ.  ಕೋವಿಡ್-‌19ಕ್ಕಿಂತ ಮೊದಲು ಇದ್ದ 50% ಗೆ ಹೋಲಿಸಿದರೆ 60% ಮಹಿಳೆಯರು ಸ್ವಯಂ ಉದ್ಯೋಗಗಳನ್ನು ಆರಂಭಿಸಿದ್ದಾರೆ.

ಆದರೆ ಇದೇನು ಸಂಭ್ರಮಿಸುವ ವಿಚಾರವಲ್ಲ. ಈ ವರದಿಯ ಪ್ರಕಾರ 2019ರಿಂದ  ಕೋವಿಡ್‌ನ ಕಾರಣದಿಂದಾಗಿ ಹೆಚ್ಚಿದ ಸ್ವಉದ್ಯೋಗಗಳ ಗಳಿಕೆ ಕುಸಿದಿದೆ. 2022ರಲ್ಲಿ ಈ ಗಳಿಕೆಯು 2019ಕ್ಕೆ ಮೊದಲ ತ್ರೈಮಾಸಿಕದಲ್ಲಿದ್ದ ಗಳಿಕೆಯ 85% ಆಗಿದೆ.

2004 ಮತ್ತು 2017 ರ ನಡುವೆ ವಾರ್ಷಿಕ ಸರಿಸುಮಾರು ಮೂರು ಮಿಲಿಯನ್ ನಿಯಮಿತ ವೇತನ ಉದ್ಯೋಗಗಳು ಸೃಷ್ಟಿಯಾಗಿವೆ. 2017 ಮತ್ತು 2019 ರ ನಡುವೆ ಇದು ಐದು ಮಿಲಿಯನ್‌ಗೆ ಏರಿದೆ. 2019 ರಿಂದ ಇದು ಕೊರೋನ ಮತ್ತು ಆರ್ಥಿಕ ಕುಸಿತದ ಕಾರಣಗಳಿಂದ ಕಡಿಮೆಯಾಗಿದೆ.

ವರದಿಯನ್ನು ಇಲ್ಲಿ ಓದಿ: ‘State of Working India 2023 — Social Identities and Labour Market Outcomes’

ಅತ್ತೆ – ಸೊಸೆಯರ ಸಂಬಂಧ!

ಮನೆಯಲ್ಲಿ ಅತ್ತೆಯಂದಿರ ಉದ್ಯೋಗ ಗ್ರಾಮೀಣ ಹಾಗೂ ನಗರ ಪ್ರದೇಶದ ಸೊಸೆಯಂದಿರು ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ನಿರ್ಧಿರಿಸುವ ವಿಚಾರ ಈ ವರದಿಯ ಗಮನಾರ್ಹ ಸಂಗತಿ. ನಿರುದ್ಯೋಗಿ ಅತ್ತೆಯೊಂದಿಗೆ ವಾಸಿಸುವ ಭಾರತದ ವಿವಾಹಿತ ಮಹಿಳೆಯರು ಉದ್ಯೋಗ ಮಾಡುವುದು 20%-30% ಕಡಿಮೆ.

ಅಕಸ್ಮಾತ್‌, ಪ್ರತ್ಯೇಕವಾಗಿ ವಾಸಿಸುವ ಸೊಸೆಯಂದಿರಿಗೆ ಹೋಲಿಸಿದರೆ ಉದ್ಯೋಗವಿರುವ ಅತ್ತೆಯಂದಿರೊಂದಿಗೆ ವಾಸಿಸುವ 50% (ಗ್ರಾಮೀಣ) ಮತ್ತು  70% (ನಗರ) ಹೆಚ್ಚು  ಸೊಸೆಯಂದಿರುವ ಉದ್ಯೋಗಿಗಳಾಗಿದ್ದಾರೆ.  

ಕ್ಯಾಸ್ಟ್‌ ಮ್ಯಾಟರ್ಸ್!

ಜನರಲ್‌ ಕೆಟಗರಿಯ ಜಾತಿಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿ/ಪಂಗಡಗಳ ಕಾರ್ಮಿಕರಿಗೆ Intergenerational  Mobility ತುಂಬಾ ಕಷ್ಟವಾಗಿ ಪರಿಣಮಿಸಿದೆ.

2018 ರಲ್ಲಿ ಸಾಂದರ್ಭಿಕ ವೇತನ ಪಡೆಯುವ  75.6% SC/ST ಪುರುಷ ಉದ್ಯೋಗಿಗಳ ಗಂಡು ಮಕ್ಕಳೂ ತಂದೆಯಂತೆ ವೇತನ ಪಡೆಯುವ ಕೆಲಸವನ್ನೇ ಮಾಡುತ್ತಿದ್ದಾರೆ.  2004 ರಲ್ಲಿ ಇದು 86.5% ಇತ್ತು. ಈ ಇಳಿಕೆ  ಸಾಂದರ್ಭಿಕ ವೇತನ ಪಡೆಯುವ SC/ST ಕಾರ್ಮಿಕರ ಗಂಡು ಮಕ್ಕಳು ಬೇರೆ ಉದ್ಯೋಗಗಳನ್ನು, ಅದರಲ್ಲೂ  ಅನೌಪಚಾರಿಕ ನಿಯಮಿತ ವೇತನದ ಕೆಲಸ ಮಾಡಲು ಆರಂಭಿಸಿರುವುದನ್ನು. ಸಾಮಾನ್ಯ ವರ್ಗದ ಜಾತಿಯಲ್ಲಿ  2004ರಲ್ಲಿ ಇದ್ದ ಈ ಪ್ರಮಾಣ 83.2% ರಿಂದ 2018 ರಲ್ಲಿ 53.2% ಗೆ ಕುಸಿದಿದೆ.

ಎಂಬತ್ತರ ದಶಕದಲ್ಲಿ ಪರಿಶಿಷ್ಟ ಜಾತಿಯ ಕಾರ್ಮಿಕರು ತ್ಯಾಜ್ಯ ವಿಲೇವಾರಿಯ ಕೆಲಸದಲ್ಲಿ ಈಗಿಗಿಂತ ಐದು ಪಟ್ಟು ಹೆಚ್ಚು ಮತ್ತು ಚರ್ಮದ ಕೆಲಸದಲ್ಲಿ ನಾಲ್ಕು ಪಟ್ಟು ಹೆಚ್ಚಿದ್ದರು. ಆದರೆ ಈಗ ಇದು ಕಡಿಮೆಯಾಗಿರುವುದು ಈ ವರದಿಯಿಂದ ತಿಳಿದುಬರುತ್ತದೆ. ಆದರೆ, ಎಸ್‌ಸಿ/ಎಸ್‌ಟಿ ಮಹಿಳಾ ಕಾರ್ಮಿಕರು ಮೇಲ್ಜಾತಿಯ ಮಹಿಳೆಯರು ಸಂಬಳದ 54% ಮಾತ್ರ ಗಳಿಸುತ್ತಿದ್ದಾರೆ.  

ಈ ವರದಿ ಬೆಳಕು ಚೆಲ್ಲುವ ಇನ್ನೊಂದು ಪ್ರಮುಖ ಅಂಶವೆಂದರೆ, ದಲಿತ ಸಮುದಾಯಗಳ ಉದ್ಯಮಿಗಳ ಪಾತಿನಿಧ್ಯತೆ. ಸಣ್ಣ ವ್ಯವಹಾರಗಳಲ್ಲೇ SC/ST ಉದ್ಯಮಿಗಳು ಬೇರೆಯವರಿಗೆ ಹೋಲಿಸಿದರೆ ತುಂಬಾ ಕಡಿಮೆ ಇದ್ದಾರೆ. 20ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಉದ್ದಿಮೆಗಳಲ್ಲಿ ದಲಿತ ಉದ್ಯಮಿಗಳ ಪ್ರಾತಿನಿಧ್ಯತೆ ಕಡಿಮೆ ಇರುವುದು ಕಂಡುಬಂದಿದೆ, ಅಲ್ಲದೇ SC/S ಉದ್ಯೋಗಿಗಳನ್ನು ತಾತ್ಕಾಲಿಕ ಉದ್ಯೋಗಗಳಿಗೆ ನೇಮಿಸಲಾಗುತ್ತಿದೆ.

ಮುಸಲ್ಮಾನರೂ ನಿಯಮಿತವಾಗಿ ವೇತನ ಪಡೆಯುವ ಉದ್ಯೋಗಗಳಲ್ಲಿರುವುದು ತುಂಬಾ ಕಡಿಮೆ. ಕಳೆದ ನಾಲ್ಕು ದಶಕಗಳಿಂದ ಸ್ವಯಂ ಉದ್ಯೋಗ, ಇಲ್ಲವೇ ಸಾಂದರ್ಭಿಕ ವೇತನದ ಕೆಲಸಗಳನ್ನೇ ಹೆಚ್ಚು ನೆಚ್ಚಿಕೊಂಡಿರುವುದು ಕಂಡು ಬಂದಿದೆ.

ಒಂದು ಕಡೆಯಲ್ಲಿ ದೇಶದ ಯುವಜನತೆ ನಿರೂದ್ಯೋಗಿಗಳಾಗುತ್ತಿದ್ದಂತೆ, ಔದ್ಯೋಗಿಕ ವಲಯಗಳಲ್ಲಿ ಜಾತಿ, ಲಿಂಗ ಮತ್ತು ಧರ್ಮದ ಪ್ರಭಾವ ದಟ್ಟವಾಗಿ ಹರಡಿರುವ ಕರಾಳತೆಯನ್ನು ಈ ವರದಿ ಬಿಚ್ಚಿಟ್ಟಿದೆ.

ವರದಿಯನ್ನು ಇಲ್ಲಿ ಓದಿ: ‘State of Working India 2023 — Social Identities and Labour Market Outcomes’

Related Articles

ಇತ್ತೀಚಿನ ಸುದ್ದಿಗಳು