ಹಾಸನ, ಜುಲೈ 23:ಹಾಸನ ಮಹಾನಗರ ಪಾಲಿಕೆಗೆ ಅನುದಾನ ನೀಡುವಲ್ಲಿ ರಾಜ್ಯ ಸರ್ಕಾರ ಹಿಂದೇಟು ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಾಸನ ಶಾಸಕ ಎಚ್.ಪಿ. ಸ್ವರೂಪ್‌ಪ್ರಕಾಶ್, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳಿಂದ ಪಾಲಿಕೆಗೆ ಯಾವುದೇ ರೀತಿಯ ಅನುದಾನವನ್ನು ನೀಡದೇ ಮುಜುಗರದ ಸ್ಥಿತಿಯನ್ನು ಉಂಟುಮಾಡಲಾಗಿದೆ ಎಂದು ಅವರು ಆರೋಪಿಸಿದರು. ಪೌರಾಡಳಿತ ಸಚಿವರು ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ “ಹೆಚ್ಚುವರಿ ಅನುದಾನ, ಹೆಚ್ಚುವರಿ ಹುದ್ದೆ ಇಲ್ಲ” ಎಂಬ ಲಿಖಿತ ಪತ್ರವನ್ನು ನೀಡಿ ನಿರಾಕರಿಸಿದ್ದಾರೆ. ಹಾಸನದ ಜನತೆಗೆ ಮೂಲ ಸೌಲಭ್ಯಗಳ ಕಲ್ಪನೆಯಲ್ಲಿಯೂ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ” ಅನ್ನೋಂತೆ, ನಮ್ಮ ಹಾಸನದ ಮೇಲೆಯಂತೂ ಸಂಪೂರ್ಣ ಅಸಮಾನುಯಾಯ ನಡೆಯುತ್ತಿದೆ. ಪೌರಾಡಳಿತ ಸಚಿವರು ಹಾಸನದ ಜನರ ಅಹಿತವಾಗುವ ನಿರ್ಧಾರ ಕೈಗೊಂಡಿದ್ದಾರೆ,” ಎಂದು ಸ್ವರೂಪ್‌ಪ್ರಕಾಶ್ ಕಿಡಿಕಾರಿದರು.
ಪಾಲಿಕೆಗೆ ಸೇರಿದ ಹೊಸ ಹಳ್ಳಿಗಳ ಗತಿ ಏನು?
ಇತ್ತೀಚಿಗೆ 37 ಹಳ್ಳಿಗಳನ್ನು ಮಹಾನಗರ ಪಾಲಿಕೆಗೆ ಸೇರಿಸಲಾಗಿದೆ. ಈ ಹಳ್ಳಿಗಳ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್‌ನಿಂದ ಹಣ ಕೊಡಲಾಗದು, ಶಾಸಕರ ನಿಧಿಯ ಬಳಕೆಯೂ ಸಾಧ್ಯವಿಲ್ಲ. ಇದರಿಂದ ಸುಮಾರು 25-30 ಕೋಟಿ ರೂಪಾಯಿ ಕಂದಾಯ ಸಂಗ್ರಹವಾಗುತ್ತಿರುವ ಈ ಪ್ರದೇಶಗಳು ಯಾವುದೇ ಅಭಿವೃದ್ಧಿ ಕಾರ್ಯದಿಂದ ವಂಚಿತವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
200 ಕೋಟಿ ಅನುದಾನಕ್ಕೆ ಒತ್ತಾಯ
“ಪಾಲಿಕೆಗೆ ಹೆಚ್ಚುವರಿ ಹುದ್ದೆಗಳನ್ನೂ ಅನುಮೋದಿಸದೆ, ಅನುದಾನವನ್ನೂ ನೀಡದೇ ಆಡಳಿತ ಹೇಗೆ ಸಾಧ್ಯ?” ಎಂಬ ಪ್ರಶ್ನೆಯನ್ನು ಶಾಸಕರು ಎತ್ತಿದ್ದಾರೆ. ಸರ್ಕಾರ ನೀಡಲು ಸಾಧ್ಯವಿಲ್ಲ ಅಂದರೆ, ಮಹಾನಗರ ಪಾಲಿಕೆಯ ಆದೇಶವನ್ನೇ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
“ಸರ್ಕಾರವನ್ನು ನಡೆಸಲು ಸಾಧ್ಯವಿಲ್ಲ ಅಂದ್ರೆ, ಇಡೀ ಸರ್ಕಾರವನ್ನೇ ವಜಾ ಮಾಡಲಿ,” ಎಂಬ ಗಂಭೀರ ಹೇಳಿಕೆಯನ್ನು ಅವರು ನೀಡಿದ್ದಾರೆ. ಹಾಸನ ಪಾಲಿಕೆಗೆ ಕೂಡಲೆ 200 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಹೋರಾಟ
ಮುಂದಿನ ಅಧಿವೇಶನದ ವೇಳೆ, ಅನ್ಯಾಯಕ್ಕೆ ಗುರಿಯಾದ ಎಲ್ಲಾ ಶಾಸಕರೊಂದಿಗೆ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ ಅವರು, “ಸಿಎಂ ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಕೊಡುತ್ತಾರೆ. ವಿರೋಧ ಪಕ್ಷದ ಶಾಸಕರಿಗೆ ನ್ಯಾಯ ಕೊಡಿಸುತ್ತಿಲ್ಲ. ಸಿಎಂ ಎಲ್ಲರಿಗೂ ಸಮನ್ಯಾಯ ಕೊಡಿಸುವ ಕೆಲಸ ಮಾಡಬೇಕು,” ಎಂದರು.