Home ದೇಶ ಕೇಂದ್ರ ಸರ್ಕಾರದ ಏಕೈಕ ಕ್ರಿಶ್ಚಿಯನ್ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ; ರಾಷ್ಟ್ರಪತಿ ಮುರ್ಮು ಅವರಿಂದ ಅಂಗೀಕಾರ

ಕೇಂದ್ರ ಸರ್ಕಾರದ ಏಕೈಕ ಕ್ರಿಶ್ಚಿಯನ್ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ; ರಾಷ್ಟ್ರಪತಿ ಮುರ್ಮು ಅವರಿಂದ ಅಂಗೀಕಾರ

0

ಹೊಸದೆಹಲಿ: ರಾಜ್ಯಸಭೆಯ ಸದಸ್ಯತ್ವದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಜಾರ್ಜ್ ಕುರಿಯನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭಾ ಉಪಚುನಾವಣೆಯಲ್ಲಿ ಮತ್ತೆ ಟಿಕೆಟ್ ನೀಡದಿರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿತ್ತು.

ಜಾರ್ಜ್ ಕುರಿಯನ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕೃತವಾಗಿ ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ಮಂಗಳವಾರ ಪ್ರಕಟಿಸಿದೆ. ಕುರಿಯನ್ ಅವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜೊತೆಗೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ರಾಷ್ಟ್ರಪತಿಯವರು ಜಾರ್ಜ್ ಕುರಿಯನ್ ರಾಜೀನಾಮೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಕೇಂದ್ರ ಸಚಿವ ಸಂಪುಟದಲ್ಲಿದ್ದ ಕ್ರಿಶ್ಚಿಯನ್ ಸಮುದಾಯದ ಏಕೈಕ ಸಚಿವ ಜಾರ್ಜ್ ಕುರಿಯನ್ ಆಗಿದ್ದರು ಎಂದು ಪಿಟಿಐ (PTI) ವರದಿ ಮಾಡಿದೆ. ಅವರ ರಾಜ್ಯಸಭಾ ಸದಸ್ಯತ್ವದ ಅವಧಿಯು ಜೂನ್ 21 ರಂದು ಕೊನೆಗೊಂಡಿತ್ತು. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅವಧಿ ಮುಗಿದಿದ್ದ ಇಬ್ಬರು ಕೇಂದ್ರ ಸಚಿವರಾದ ರವನೀತ್ ಸಿಂಗ್ ಬಿಟ್ಟು ಮತ್ತು ಜಾರ್ಜ್ ಕುರಿಯನ್ ಅವರಿಗೆ ಬಿಜೆಪಿ ಮರುನಾಮನಿರ್ದೇಶನ ಮಾಡಿರಲಿಲ್ಲ.

65 ವರ್ಷದ ಜಾರ್ಜ್ ಕುರಿಯನ್ ಅವರು 1980 ರಲ್ಲಿ ಬಿಜೆಪಿ ಸ್ಥಾಪನೆಯಾದಾಗಿನಿಂದಲೂ ಪಕ್ಷದ ನಿಷ್ಠಾವಂತ ಸದಸ್ಯರಾಗಿದ್ದಾರೆ. ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ, ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಹಾಗೂ ಬಿಜೆಪಿಯ ಕೇರಳ ಘಟಕದ ಉಪಾಧ್ಯಕ್ಷರಾಗಿ ವಿವಿಧ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ಇದರೊಂದಿಗೆ ಅವರು ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿಯೂ ವೃತ್ತಿಜೀವನ ನಡೆಸಿದ್ದಾರೆ. ಈ ಹಿಂದೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಇವರು, ಜೂನ್ 9, 2024 ರಂದು ಕೇಂದ್ರ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

You cannot copy content of this page

Exit mobile version