Home ಕೋಮುವಾದ ಆರ್‌ಎಸ್‌ಎಸ್‌ ಶಾಖೆಯಲ್ಲಿ ಮಕ್ಕಳ ತರಬೇತಿಯ ಬಗ್ಗೆ ಪೋಸ್ಟ್‌, ಯುವಕನ ಬಂಧನ

ಆರ್‌ಎಸ್‌ಎಸ್‌ ಶಾಖೆಯಲ್ಲಿ ಮಕ್ಕಳ ತರಬೇತಿಯ ಬಗ್ಗೆ ಪೋಸ್ಟ್‌, ಯುವಕನ ಬಂಧನ

0

ಜೂನ್ 20, 2026 ರಂದು ರಾಜಸ್ಥಾನದ ಝುಂಜುನು ಜಿಲ್ಲೆಯ 25 ವರ್ಷದ ನಿವಾಸಿ ನವೀನ್ ಚೌಧರಿ ಅವರು ಆರ್‌ಎಸ್‌ಎಸ್‌ ಕುರಿತು ಇನ್‌ಸ್ಟಾಗ್ರಾಂನಲ್ಲಿ ಒಂದು ವಿಡಿಯೊವನ್ನು ಪೋಸ್ಟ್ ಮಾಡಿದರು.

ಚೌಧರಿ ಅವರು ಸ್ಥಳೀಯ ಸಮಸ್ಯೆಗಳ ಬಗ್ಗೆ ಬರೆಯುತ್ತಿದ್ದ, ಕಂಟೆಂಟ್‌ ಪ್ರಕಟಿಸುತ್ತಿದ್ದ ‘ಝುಂಜುನು ಎಕ್ಸ್‌ಪ್ರೆಸ್ ಪೇಜ್‌ನಲ್ಲಿ ಈ ವಿಡಿಯೊವನ್ನು ಪ್ರಕಟಿಸಲಾಗಿದೆ. ವಿಡಿಯೊದಲ್ಲಿ ಝುಂಜುನು ನಗರದ ಒಂದು ಆಟದ ಮೈದಾನ ಕಾಣಿಸುತ್ತದೆ. ಮೈದಾನದ ಒಂದು ಬದಿಯಲ್ಲಿ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿರುವಂತೆ ಕಾಣಿಸುತ್ತಿದ್ದರೆ, ಇನ್ನೊಂದು ಬದಿಯಲ್ಲಿ ಮತ್ತೊಂದು ಗುಂಪಿನ ಮಕ್ಕಳು ಆರ್‌ಎಸ್‌ಎಸ್‌ನ ವ್ಯಾಯಾಮ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವುದು ಕಾಣಿಸುತ್ತದೆ.

“ನೋಡಿ. ಇವತ್ತು ನಾನು ನಿಮಗೆ ತೋರಿಸಲಲು ಹೊರಟಿದ್ದೇನೆಂದರೆ… ನೀವು ಈ ಎರಡು ಗುಂಪಿನ ಮಕ್ಕಳನ್ನು ನೋಡಬಹುದು. ಈ ಎರಡೂ ಗುಂಪಿನ ಮಕ್ಕಳ ಭವಿಷ್ಯವು ಖಾಲಿ ಹಾಳೆಯಂತಿದೆ. ಆದರೆ ನಿಮಗೆ ಗೊತ್ತೇ ಈ ಎರಡರ ನಡುವಿನ ವ್ಯತ್ಯಾಸ ಏನು? ಈ ಎರಡು ಗುಂಪುಗಳಲ್ಲಿ ಒಂದು ಗುಂಪಿನ ಮಕ್ಕಳಿಗೆ ಮೈದಾನದಲ್ಲಿ ಬೆವರು ಸುರಿಸುವುದು, ದೇಶಕ್ಕಾಗಿ ಪದಕಗಳನ್ನು ಗೆಲ್ಲುವುದು ಮತ್ತು ತ್ರಿವರ್ಣ ಧ್ವಜಕ್ಕೆ ಹೆಮ್ಮೆ ತರುವುದು ಕಲಿಸಲಾಗುತ್ತಿದೆ,” ಎಂದು ಚೌಧರಿ ಅವರು ವಿಡಿಯೊದಲ್ಲಿ ಹಿಂದಿಯಲ್ಲಿ ಹೇಳಿರುವುದು ಕೇಳಿಸುತ್ತದೆ.

“ಇನ್ನೊಂದು ಕಡೆ, ಅದೇ ಸಮಯದಲ್ಲಿ ಮುಗ್ಧ ಮಕ್ಕಳಲ್ಲಿ ಧರ್ಮ ಮತ್ತು ದ್ವೇಷದ ಬೀಜ ಬಿತ್ತಲಾಗುತ್ತಿದೆ. ಅವರು ಪರಸ್ಪರ ಜಗಳವಾಡುವುದನ್ನು ಕಲಿಯುತ್ತಿದ್ದಾರೆ. ಈಗ ನೀವೇ ಯೋಚಿಸಿ, ಮೈದಾನದಲ್ಲಿ ಬೆವರು ಸುರಿಸುವ ಮಗು ದೇಶವನ್ನು ಮುಂದೆ ಕೊಂಡೊಯ್ಯುತ್ತದೆ. ಆದರೆ ಯಾರೊಳಗೆ ದ್ವೇಷದ ಬೀಜ ಬಿತ್ತಲಾಗುತ್ತಿದೆಯೋ, ಆತ ಭವಿಷ್ಯದಲ್ಲಿ ದೇಶಕ್ಕಾಗಿ ಏನು ಮಾಡುತ್ತಾನೆ?” ಎಂದು ಚೌಧರಿ ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ಚೌಧರಿ ಅವರು ಜೂನ್ 20ರ ಸಂಜೆ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದರು. ಜೂನ್ 21ರ ಬೆಳಿಗ್ಗೆ ರಾಜಸ್ಥಾನ ಪೊಲೀಸರು ಅವರ ಮನೆಗೆ ತೆರಳಿ ಅವರನ್ನು ಝುಂಜುನು ಕೊತ್ವಾಲಿ ಪೊಲೀಸ್ ಠಾಣೆಗೆ ಕರೆದೊಯ್ದರು.

“ಜೂನ್ 21ರ ಭಾನುವಾರ ಬೆಳಿಗ್ಗೆ, ವಿಡಿಯೊವನ್ನು ಡಿಲಿಟ್‌ ಮಾಡುವಂತೆ ಆರ್‌ಎಸ್‌ಎಸ್‌ಗೆ ಸಂಬಂಧಿಸಿದವರು ಮತ್ತು ಪೊಲೀಸರಿಂದ ನನಗೆ ಬೆದರಿಕೆ ಕರೆಗಳು ಬರಲಾರಂಭಿಸಿದವು. ನಂತರ ನಾಲ್ಕೈದು ಕಾರುಗಳಲ್ಲಿ ಪೊಲೀಸರು ನನ್ನ ಮನೆಗೆ ಬಂದರು. ಅವರು ನನ್ನನ್ನು ಭಯೋತ್ಪಾದಕನಂತೆ ಕಾರಿನೊಳಗೆ ಎಳೆದುಕೊಂಡು ಹೋಗಿ, ಕೊತ್ವಾಲಿ ಪೊಲೀಸ್ ಠಾಣೆಗೆ ಕರೆದೊಯ್ಯುವ ಮಾರ್ಗದಲ್ಲಿ ಮನಬಂದಂತೆ ಹೊಡೆದರು. ವಾಸ್ತವವಾಗಿ ಪೊಲೀಸರು ನನ್ನನ್ನು ಅಪಹರಿಸಿದ್ದರು,” ಎಂದು ಚೌಧರಿ ಅವರು ಜೂನ್ 22ರಂದು ‘ದಿ ವೈರ್’ಗೆ ತಿಳಿಸಿರುವುದು ವರದಿಯಾಗಿದೆ.

“ಠಾಣೆಯಲ್ಲಿ ನನಗೆ ಪರಿಚಯವಿಲ್ಲದ ಪೊಲೀಸ್ ಅಧಿಕಾರಿಯೊಬ್ಬರು, ‘ನೀನು ಯಾವ ಭ್ರಮೆಯಲ್ಲಿ ಬದುಕುತ್ತಿದ್ದೀಯ? ನೀವು ಸೊಳ್ಳೆಗಳು ಮತ್ತು ನೊಣಗಳಂತೆ ಹೀಗೆ ಮಾಡುತ್ತಲೇ ಇರುತ್ತೀರಿ, ಆದರೆ ಒಂದು ದಿನ ಈ ದೇಶದಲ್ಲಿ ನಾವು ಕೇಸರಿ ಧ್ವಜ ಹಾರಿಸುತ್ತೇವೆ’ ಎಂದು ಹೇಳಿದರು,” ಎಂದು ಚೌಧರಿ ಆರೋಪಿಸಿದ್ದಾರೆ.

ಚೌಧರಿ ಅವರನ್ನು ಒಂದು ಸಣ್ಣ ಕೊಠಡಿಯೊಳಗೆ ಇರಿಸಲಾಗಿತ್ತು, ಅವರ ಫೋನ್ ವಶಪಡಿಸಿಕೊಳ್ಳಲಾಗಿತ್ತು ಮತ್ತು ಸಂಜೆವರೆಗೂ ಯಾರೊಂದಿಗೂ ಮಾತನಾಡಲು ಅಥವಾ ಸಹಾಯ ಕೇಳಲು ಅವಕಾಶ ನೀಡಲಾಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

“ಸಂಜೆ ವೇಳೆಗೆ ನಾನು ಹೇಗೋ ಒಂದು ಫೋನ್ ಪಡೆಯಲು ಸಾಧ್ಯವಾಯಿತು ಮತ್ತು ಸಹಾಯಕ್ಕಾಗಿ ಕರೆ ಮಾಡಿದೆ. ನನಗೆ ಮೂತ್ರಪಿಂಡದಲ್ಲಿ ಕಲ್ಲು ಇದೆ ಮತ್ತು ಆರೋಗ್ಯವೂ ಸರಿಯಾಗಿರಲಿಲ್ಲ. ನನ್ನನ್ನು ಬಂಧಿಸಲು ಯಾವುದೇ ಕಾರಣ ಹುಡುಕಲಾಗದಾಗ, ಸಂಜೆ ನನ್ನನ್ನು ಮುನ್ನೆಚ್ಚರಿಕಾ ಬಂಧನಕ್ಕೆ ತೆಗೆದುಕೊಂಡರು. ಕೆಲವು ದಾಖಲೆಗಳಿಗೆ ಸಹಿ ಮಾಡಿಸಿದರು ಮತ್ತು ನಾನು ರಾತ್ರಿ ಪೊಲೀಸ್ ಠಾಣೆಯಲ್ಲೇ ಕಳೆದಿದ್ದೇನೆ. ಇಂದು ನನಗೆ ಜಾಮೀನು ಸಿಕ್ಕಿದೆ,” ಎಂದು ಚೌಧರಿ ಹೇಳಿದ್ದಾರೆ.

‘ಒಬ್ಬ ವ್ಯಕ್ತಿ ಇಂತಹ ವಿಷಯಗಳನ್ನು ಪೋಸ್ಟ್ ಮಾಡಿದರೆ, ಸಮಾಜದಲ್ಲಿ ದ್ವೇಷ ಮತ್ತು ವೈಮನಸ್ಸು ಹರಡುತ್ತದೆ’

ಕೊತ್ವಾಲಿ ಝುಂಜುನು ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್‌ಎಚ್‌ಒ) ಶ್ರವಣ್ ಕುಮಾರ್ ಮೀಲ್ ಅವರು ಚೌಧರಿ ಅವರಿಗೆ ಹೊಡೆಯಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ ಎಂದು ದಿ ವೈರ್‌ ವರದಿ ಮಾಡಿದೆ.

“ಶಾಂತಿ ಭಂಗವಾಗುವುದನ್ನು ತಡೆಯಲು ನಾವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 170ರ ಅಡಿಯಲ್ಲಿ (ಗಂಭೀರ ಅಪರಾಧಗಳು ನಡೆಯುವುದನ್ನು ತಡೆಯುವ ಉದ್ದೇಶದ ಬಂಧನ) ಚೌಧರಿ ಅವರನ್ನು ಮುನ್ನೆಚ್ಚರಿಕಾ ಬಂಧನಕ್ಕೆ ತೆಗೆದುಕೊಂಡಿದ್ದೇವೆ. ಒಬ್ಬ ವ್ಯಕ್ತಿ ಇಂತಹ ವಿಷಯಗಳನ್ನು ಪೋಸ್ಟ್ ಮಾಡಿದರೆ, ಸಮಾಜದಲ್ಲಿ ವೈಮನಸ್ಸು ಹರಡುತ್ತದೆ. ಆ ಪೋಸ್ಟ್ ಯಾರ ವಿರುದ್ಧವಾಗಿದೆ ಎಂಬುದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅವರು ಮದರಸಾ ವಿರುದ್ಧ ಪೋಸ್ಟ್ ಮಾಡಿದ್ದರೂ ಸಹ ನಾವು ಇದೇ ರೀತಿಯ ಕ್ರಮ ಕೈಗೊಳ್ಳುತ್ತಿದ್ದೆವು. ಅವರನ್ನು ಹೊಡೆದಿದ್ದಾರೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ನಾವು ಅವರ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿದ್ದೇವೆ. ನಮಗೆ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಶಾಂತಿ ಕಾಪಾಡುವುದು ನಮ್ಮ ಆದ್ಯತೆಯಾಗಿದೆ,” ಎಂದು ಎಸ್‌ಎಚ್‌ಒ ಮೀಲ್ ಅವರು ‘ದಿ ವೈರ್’ಗೆ ತಿಳಿಸಿದ್ದಾರೆ.

ಚೌಧರಿ ಅವರ ಪೋಸ್ಟ್‌ಗಳ ವಿರುದ್ಧ ದೂರು ನೀಡಿದ ಹಲವಾರು ಜನರಿಂದ ಪೊಲೀಸರಿಗೆ ದೂರವಾಣಿ ಕರೆಗಳು ಬಂದಿದ್ದವು ಎಂದು ಮೀಲ್ ಹೇಳಿದ್ದಾರೆ.

“ಚೌಧರಿ ಅವರನ್ನು ಇಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅವರ ಮುಂದೆ ಹಾಜರುಪಡಿಸಲಾಯಿತು ಮತ್ತು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ,” ಎಂದು ಮೀಲ್ ಸೋಮವಾರ ತಿಳಿಸಿದ್ದಾರೆ.

ಕಾಂಗ್ರೆಸ್ ಬೆಂಬಲ

ಈ ಘಟನೆಗೆ ಸಂಬಂಧಿಸಿ ವಿರೋಧ ಪಕ್ಷವಾದ ಕಾಂಗ್ರೆಸ್ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

“ಆರ್‌ಎಸ್‌ಎಸ್‌ನ ನೈಜ ಮುಖವನ್ನು ಬಹಿರಂಗಪಡಿಸುವ ಈ ವಿಡಿಯೊವನ್ನು ಪೋಸ್ಟ್ ಮಾಡುವುದು ಅಪರಾಧವಾಗಿದ್ದರೆ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಈ ಅಪರಾಧವನ್ನು ಮತ್ತೆ ಮತ್ತೆ ಮಾಡುತ್ತಾರೆ. ದ್ವೇಷ ಮತ್ತು ವಿಭಜನೆಯ ನಡುವೆಯೂ ಕ್ರೀಡೆ ಹಾಗೂ ರಾಷ್ಟ್ರ ನಿರ್ಮಾಣದ ಬಗ್ಗೆ ಮಾತನಾಡುವುದು ಅಪರಾಧವಾಗಿದ್ದರೆ, ನಾವು ಈ ಅಪರಾಧವನ್ನು ಮತ್ತೆ ಮತ್ತೆ ಮಾಡುತ್ತೇವೆ,” ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಅವರು ಜೂನ್ 21ರಂದು ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದರು. ಅವರು ತಮ್ಮ ಇನ್‌ಸ್ಟಾಗ್ರಾಂ ಪುಟದಿಂದ ಚೌಧರಿ ಪೋಸ್ಟ್ ಮಾಡಿದ್ದ ವಿಡಿಯೊವನ್ನೂ ಹಂಚಿಕೊಂಡಿದ್ದರು.

ನಂತರ, ಜೂನ್ 22ರಂದು ಚೌಧರಿ ಬಿಡುಗಡೆಯಾದ ಬಳಿಕ ದೋತಾಸ್ರಾ ಅವರನ್ನು ಭೇಟಿಯಾಗಿ ಎಕ್ಸ್‌ನಲ್ಲಿ ಹೀಗೆ ಬರೆದರು: “ನವೀನ್ ಅವರ ಧೈರ್ಯವು ಭಯ ಮತ್ತು ದಮನದ ನಡುವೆಯೂ ಸತ್ಯವನ್ನು ಹೇಳುವ ಧೈರ್ಯ ಹೊಂದಿರುವ ಎಲ್ಲ ಯುವಕರಿಗೂ ಪ್ರೇರಣೆಯಾಗಿದೆ. ದಮನ ಹೆಚ್ಚಾದಷ್ಟು, ಆರ್‌ಎಸ್‌ಎಸ್ ಮತ್ತು ಅದರ ದ್ವೇಷದ ನೈಜತೆಯ ವಿರುದ್ಧದ ಪ್ರತಿಕ್ರಿಯೆಯೂ ಮತ್ತಷ್ಟು ಬಲವಾಗುತ್ತದೆ.”

ಬೆದರಿಕೆಗಳ ನಡುವೆಯೂ ತಮ್ಮ ಪುಟದ ಮೂಲಕ ಸಾರ್ವಜನಿಕ ಹಿತಾಸಕ್ತಿಯ ಸ್ಥಳೀಯ ಸಮಸ್ಯೆಗಳನ್ನು ಮುಂದುವರಿಸಿ ಪ್ರಸ್ತಾಪಿಸುತ್ತೇನೆ ಎಂದು ಚೌಧರಿ ಹೇಳಿದ್ದಾರೆ.

“ಇದು ಪ್ರಜಾಪ್ರಭುತ್ವದ ಹತ್ಯೆ. ಯಾರು ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಪ್ರಶ್ನಿಸುತ್ತಾರೋ, ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಯಾರಾದರೂ ಅವರನ್ನು ಪ್ರಶ್ನಿಸಿದರೆ ಅವರಿಗೂ ನನ್ನಂತೆಯೇ ಪರಿಸ್ಥಿತಿ ಎದುರಾಗುತ್ತದೆ ಎಂಬ ಸಂದೇಶವನ್ನು ಅವರು ನೀಡಲು ಹೊರಟಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ದೇಶದ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಬಯಸುತ್ತಿವೆ ಮತ್ತು ಅದಕ್ಕಾಗಿಯೇ ನಾನು ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದೆ,” ಎಂದು ಚೌಧರಿ ಅವರು ‘ದಿ ವೈರ್’ಗೆ ತಿಳಿಸಿದ್ದಾರೆ.

ದಿ ವೈರ್‌ನ Rajasthan Man Taken into ‘Preventive Custody’ For Posting Video Critical of RSS Training for Kids ಯ ಕನ್ನಡಾನುವಾದ

You cannot copy content of this page

Exit mobile version