Home ರಾಜಕೀಯ ಈಗಲೂ ಮಮತಾ ಬ್ಯಾನರ್ಜಿ ಅವರೇ ಟಿಎಂಸಿ ಸುಪ್ರೀಂ: ಚುನಾವಣಾ ಆಯೋಗಕ್ಕೆ ಅಧಿಕೃತ ಪದಾಧಿಕಾರಿಗಳ ಪಟ್ಟಿ ಸಲ್ಲಿಸಿದ...

ಈಗಲೂ ಮಮತಾ ಬ್ಯಾನರ್ಜಿ ಅವರೇ ಟಿಎಂಸಿ ಸುಪ್ರೀಂ: ಚುನಾವಣಾ ಆಯೋಗಕ್ಕೆ ಅಧಿಕೃತ ಪದಾಧಿಕಾರಿಗಳ ಪಟ್ಟಿ ಸಲ್ಲಿಸಿದ ಪಕ್ಷ!

0

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಆಂತರಿಕ ಭಿನ್ನಮತ ತಾರಕಕ್ಕೇರಿರುವ ನಡುವೆಯೇ, ಮಮತಾ ಬ್ಯಾನರ್ಜಿ ಅವರೇ ಪಕ್ಷದ ಅಧಿಕೃತ ಸುಪ್ರೀಂ ಆಗಿ ಮುಂದುವರಿದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲು ಟಿಎಂಸಿ ತನ್ನ ಪದಾಧಿಕಾರಿಗಳು ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರ ಹೊಸ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ (EC) ಸಲ್ಲಿಸಿದೆ.

ಪಶ್ಚಿಮ ಬಂಗಾಳದ ಸುಮಾರು 20 ಸಂಸದರು ಹಾಗೂ ಕೆಲವು ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ದಂಗೆ ಎದ್ದಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಮೂಲಗಳ ಪ್ರಕಾರ, ಮಂಗಳವಾರ ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ಈ ಪಟ್ಟಿಯು “ಜೂನ್ 20, 2026 ರವರೆಗಿನ” ಪಕ್ಷದ ಸಾಂಸ್ಥಿಕ ರಚನೆಯನ್ನು ಒಳಗೊಂಡಿದ್ದು, ಪಕ್ಷದ ಮೇಲಿನ ನಿಯಂತ್ರಣದ ಕುರಿತು ಬಂಡಾಯ ಬಣದ ಹಕ್ಕುಗಳನ್ನು ತಳ್ಳಿಹಾಕಲು ಅಧಿಕೃತ ಶ್ರೇಣಿಯನ್ನು ದಾಖಲಿಸಿದೆ.

ಈ ಪಟ್ಟಿಯ ಪ್ರಕಾರ, ಮಮತಾ ಬ್ಯಾನರ್ಜಿ ಅವರು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಚೇರ್‌ಪರ್ಸನ್ ಆಗಿ ಮುಂದುವರಿದಿದ್ದಾರೆ. ಸುಬ್ರತಾ ಬಕ್ಷಿ ಉಪಾಧ್ಯಕ್ಷರಾಗಿದ್ದರೆ, ಅಭಿಷೇಕ್ ಬ್ಯಾನರ್ಜಿ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇದರೊಂದಿಗೆ ಡೆರೆಕ್ ಒ’ಬ್ರೇನ್ ಮತ್ತು ಡೋಲಾ ಸೇನ್ ಅವರನ್ನು ಜಂಟಿ ಕಾರ್ಯದರ್ಶಿಗಳನ್ನಾಗಿ ಹಾಗೂ ಸುಭಶೀಶ್ ಚಕ್ರವರ್ತಿ ಅವರನ್ನು ಕೋಶಾಧಿಕಾರಿಯನ್ನಾಗಿ ಹೆಸರಿಸಲಾಗಿದೆ.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಚಂದ್ರಿಮಾ ಭಟ್ಟಾಚಾರ್ಯ, ಅಮಿತ್ ಮಿತ್ರಾ, ಕಲ್ಯಾಣ್ ಬ್ಯಾನರ್ಜಿ, ಸೌಗತ ರಾಯ್, ಮಹುವಾ ಮೊಯಿತ್ರಾ ಮತ್ತು ಕುನಾಲ್ ಘೋಷ್ ಸೇರಿದಂತೆ ಪ್ರಮುಖ ಹಿರಿಯ ನಾಯಕರಿದ್ದಾರೆ. ಇದರಲ್ಲಿ ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ಪಶ್ಚಿಮ ಬಂಗಾಳದ ಟಿಎಂಸಿ ಅಧ್ಯಕ್ಷರನ್ನಾಗಿ ಹಾಗೂ ಶೋಭಂದೇಬ್ ಚಟ್ಟೋಪಾಧ್ಯಾಯ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ಪಕ್ಷದ ನಾಯಕರನ್ನಾಗಿ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣವು ಕೋಲ್ಕತಾದಲ್ಲಿ ವಿಶೇಷ ಜಂಟಿ ಅಧಿವೇಶನ ನಡೆಸಿ, ಮಮತಾ ಬ್ಯಾನರ್ಜಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಹಿರಿಯ ಶಾಸಕ ಅರೂಪ್ ರಾಯ್ ಅವರನ್ನು ನೂತನ ಚೇರ್‌ಪರ್ಸನ್ ಆಗಿ ನೇಮಕ ಮಾಡಿ ಸಮಾನಾಂತರ ಸಾಂಸ್ಥಿಕ ರಚನೆಯನ್ನು ಘೋಷಿಸಿದ ಮರುದಿನವೇ ಮಮತಾ ಬಣ ಈ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಿದೆ. ಪಕ್ಷದಲ್ಲಿ ಉಂಟಾಗಿರುವ “ಸಾಂವಿಧಾನಿಕ ಬಿಕ್ಕಟ್ಟಿನ” ಕಾರಣದಿಂದಾಗಿ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಬಂಡಾಯ ಬಣದ ನಾಯಕ ರಿತಬ್ರತ ಬ್ಯಾನರ್ಜಿ ಸಮರ್ಥಿಸಿಕೊಂಡಿದ್ದರು. ಆದರೆ, ಮಮತಾ ಬ್ಯಾನರ್ಜಿ ಪಾಳಯವು ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಭಿನ್ನಮತೀಯರಿಗೆ ಇಂತಹ ಸಭೆ ಕರೆಯಲು ಅಥವಾ ಪಕ್ಷದ ಸಾಂಸ್ಥಿಕ ರಚನೆಯನ್ನು ಬದಲಾಯಿಸಲು ಯಾವುದೇ ಕಾನೂನಾತ್ಮಕ ಹಕ್ಕಿಲ್ಲ ಎಂದು ಹಿರಿಯ ನಾಯಕ ಕುನಾಲ್ ಘೋಷ್ ಸ್ಪಷ್ಟಪಡಿಸಿದ್ದಾರೆ.

You cannot copy content of this page

Exit mobile version