Home ಅಪರಾಧ 657 ಕೋಟಿ ರೂ. ಬ್ಯಾಂಕ್ ಹಗರಣ: ಮತ್ತೊಬ್ಬ ಐಎಎಸ್ ಅಧಿಕಾರಿ ಪಂಕಜ್ ಅಗರ್ವಾಲನನ್ನು ಬಂಧಿಸಿದ ಸಿಬಿಐ

657 ಕೋಟಿ ರೂ. ಬ್ಯಾಂಕ್ ಹಗರಣ: ಮತ್ತೊಬ್ಬ ಐಎಎಸ್ ಅಧಿಕಾರಿ ಪಂಕಜ್ ಅಗರ್ವಾಲನನ್ನು ಬಂಧಿಸಿದ ಸಿಬಿಐ

0

ದೆಹಲಿ: ಒಟ್ಟು 657 ಕೋಟಿ ರೂಪಾಯಿಗಳ ಬೃಹತ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಯು (ಸಿಬಿಐ) ಮತ್ತೊಬ್ಬರು ಐಎಎಸ್ ಅಧಿಕಾರಿಯನ್ನು ಬಂಧಿಸಿದೆ. 2000ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಪಂಕಜ್ ಅಗರ್ವಾಲ್ ಅವರನ್ನು ಸೋಮವಾರ ರಾತ್ರಿ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಈ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಎರಡನೇ ಐಎಎಸ್ ಅಧಿಕಾರಿ ಇವರಾಗಿದ್ದಾರೆ. ಇದೇ ಪ್ರಕರಣದಲ್ಲಿ ಈಗಾಗಲೇ ರಾಮ್ ಕುಮಾರ್ ಸಿಂಗ್ ಎಂಬ ಐಎಎಸ್ ಅಧಿಕಾರಿಯನ್ನು ಬಂಧಿಸಲಾಗಿತ್ತು. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಹಾಗೂ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಉನ್ನತ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಒಟ್ಟಾಗಿ ಈ ಹಗರಣ ಎಸಗಿದ್ದಾರೆ ಎಂದು ಆಪಾದಿಸಲಾಗಿದೆ.

ಹರ್ಯಾಣ ಸರ್ಕಾರದ 8 ಇಲಾಖೆಗಳು ಹಾಗೂ ಚಂಡೀಗಢ ಆಡಳಿತ ಇಲಾಖೆಯ 2 ಬ್ಯಾಂಕ್ ಖಾತೆಗಳಿಂದ ಕೋಟ್ಯಂತರ ರೂಪಾಯಿ ನಿಧಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪಗಳು ಕೇಳಿಬಂದಿವೆ. ಈ ಬ್ಯಾಂಕ್ ನಿಧಿ ದುರುಪಯೋಗದ ಪ್ರಕರಣದಲ್ಲಿ ಒಟ್ಟು ನಷ್ಟ 657 ಕೋಟಿ ರೂಪಾಯಿ ಎಂದು ಸಿಬಿಐ ಉಲ್ಲೇಖಿಸಿದ್ದರೆ, ಇದೇ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇಡಿ) ಸುಮಾರು 645 ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ತಿಳಿಸಿದೆ.

ಹಗರಣ ನಡೆದ ಸಮಯದಲ್ಲಿ ಪಂಕಜ್ ಅಗರ್ವಾಲ್ ಅವರು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಆಡಳಿತಾತ್ಮಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹರ್ಯಾಣ ಕೃಷಿ ಮಾರುಕಟ್ಟೆ ಮಂಡಳಿಗೆ ಸೇರಿದ ಸುಮಾರು 10 ಕೋಟಿ ರೂಪಾಯಿಗಳನ್ನು ಚಂಡೀಗಢದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಖಾತೆಯಿಂದ ಮಾಯ ಮಾಡಲಾಗಿರುವ ಗಂಭೀರ ಆರೋಪ ಇವರ ಮೇಲಿದೆ.

‘ಅಗ್ರಿಕಲ್ಚರ್ ಮಾರ್ಕೆಟಿಂಗ್ ಡೆವಲಪ್‌ಮೆಂಟ್ ಫಂಡ್’ ಹೆಸರಿನಲ್ಲಿ ಈ ಖಾತೆಯನ್ನು ನಿರ್ವಹಿಸಲಾಗುತ್ತಿತ್ತು ಎನ್ನಲಾಗಿದೆ. ಈ ನಿಧಿಯಿಂದ ‘ಎಸ್ಆರ್ಆರ್ ಪ್ಲಾನಿಂಗ್ ಗುರುಸ್ ಲಿಮಿಟೆಡ್’ ಸಂಸ್ಥೆಗೆ 9.75 ಕೋಟಿ ರೂಪಾಯಿ ಹಾಗೂ ‘ಮನ್ನತ್ ಕಾಂಟ್ರಾಕ್ಟರ್ಸ್’ ಸಂಸ್ಥೆಗೆ 25 ಲಕ್ಷ ರೂಪಾಯಿ ಪಾವತಿಸಲಾಗಿದ್ದು, ಇವು ನಕಲಿ (ಶೆಲ್) ಕಂಪನಿಗಳಾಗಿದ್ದು ಇವುಗಳಿಗೆ ನಿಧಿ ಮರುವರ್ಗಾವಣೆ ಮಾಡಲಾಗಿದೆ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ.

ಈ ಬೃಹತ್ ಬ್ಯಾಂಕ್ ಕುಂಭಕೋಣದಲ್ಲಿ ಒಟ್ಟು 8 ಜನ ಐಎಎಸ್ ಅಧಿಕಾರಿಗಳು ಸದ್ಯ ತನಿಖಾ ಸಂಸ್ಥೆಗಳ ನಿಗಾದಲ್ಲಿದ್ದು, ಇವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನುಳಿದಂತೆ ಮೊಹಮ್ಮದ್ ಶಾಯಿನ್, ಮಣಿ ರಾಮ್ ಶರ್ಮಾ, ಪ್ರದೀಪ್ ಕುಮಾರ್, ವಿನೀತ್ ಗರ್ಗ್, ಸಾಕೇತ್ ಕುಮಾರ್ ಮತ್ತು ಡಿ.ಕೆ. ಬೆಹರಾ ಅವರ ಹೆಸರುಗಳು ಈ ತನಿಖಾ ವ್ಯಾಪ್ತಿಯಲ್ಲಿವೆ ಎನ್ನಲಾಗಿದೆ.

ಇದರೊಂದಿಗೆ, ಪಂಕಜ್ ಅಗರ್ವಾಲ್ ಅವರು ಹರ್ಯಾಣ ಸ್ಕೂಲ್ ಶಿಕ್ಷಾ ಪರಿಯೋಜನಾ ಪರಿಷತ್‌ನ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಶಿಕ್ಷಣ ಇಲಾಖೆಯ ಖಾತೆಯಿಂದ ಸುಮಾರು 50 ಕೋಟಿ ರೂಪಾಯಿಗಳನ್ನು ದಾರಿ ತಪ್ಪಿಸಿದ ಆರೋಪವೂ ಇದೆ. ಹಣಕಾಸು ಇಲಾಖೆಯ ಅಧಿಕೃತ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಹೊಸ ಬ್ಯಾಂಕ್ ಖಾತೆಗಳನ್ನು ತೆರೆದು, ಸರ್ಕಾರಿ ನಿಧಿಯನ್ನು ಇತರ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಪಂಕಜ್ ಅಗರ್ವಾಲ್ ವಿರುದ್ಧ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

You cannot copy content of this page

Exit mobile version