Home ಅಂಕಣ ಸಂಕಷ್ಟದ ಕಾಲದಲ್ಲಿ ನಾವೇನು ಮಾಡಿದ್ದೇವೆ ಎಂಬುದನ್ನು ಸಮಾಜ ಮತ್ತು ಇತಿಹಾಸ ಜಡ್ಜ್‌ ಮಾಡಲಿದೆ: ಪ್ರಬೀರ್ ಪುರಕಾಯಸ್ಥ

ಸಂಕಷ್ಟದ ಕಾಲದಲ್ಲಿ ನಾವೇನು ಮಾಡಿದ್ದೇವೆ ಎಂಬುದನ್ನು ಸಮಾಜ ಮತ್ತು ಇತಿಹಾಸ ಜಡ್ಜ್‌ ಮಾಡಲಿದೆ: ಪ್ರಬೀರ್ ಪುರಕಾಯಸ್ಥ

0

ದೆಹಲಿ ಪೊಲೀಸರು ನ್ಯೂಸ್‌ಕ್ಲಿಕ್ ಮತ್ತು ಅದರ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರ ವಿರುದ್ಧದ ಆರ್ಥಿಕ ವಂಚನೆ ಆರೋಪದ ತನಿಖೆಯನ್ನು ಆರಂಭಿಸಿ ಆರು ವರ್ಷಗಳ ಬಳಿಕ, ಕಳೆದ ತಿಂಗಳು ದೆಹಲಿ ಹೈಕೋರ್ಟ್ ಈ ಪ್ರಕರಣವನ್ನು ಸಮರ್ಥನೀಯವಲ್ಲ ಎಂದು ಹೇಳಿದೆ. ತನಿಖೆಯನ್ನು ಮುಂದುವರಿಸಲು ಅವಕಾಶ ನೀಡುವುದು “ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗಕ್ಕೆ” ಕಾರಣವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಪ್ರಕರಣವು 2020ರ ಆಗಸ್ಟ್‌ನಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (Economic Offences Wing) ದಾಖಲಿಸಿದ ಎಫ್‌ಐಆರ್‌ನಿಂದ ಆರಂಭವಾಗಿತ್ತು. ಕೆಲವೇ ದಿನಗಳಲ್ಲಿ, ಆ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ (ED) ತನ್ನದೇ ಆದ ಹಣ ಅಕ್ರಮ ವರ್ಗಾವಣೆ ತನಿಖೆಯನ್ನು ಆರಂಭಿಸಿತು. ವಿದೇಶದಿಂದ ನ್ಯೂಸ್‌ಕ್ಲಿಕ್‌ಗೆ ಬಂದ ಹಣದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿತ್ತು.

2021ರಲ್ಲಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಉಲ್ಲಂಘನೆಗಳಾಗಿವೆ ಎಂದು ಆರೋಪಿಸಿ, ಜಾರಿ ನಿರ್ದೇಶನಾಲಯವು ಪುರಕಾಯಸ್ಥ ಅವರ ಮನೆ ಮತ್ತು ಸುದ್ದಿ ಜಾಲತಾಣದ ಕಚೇರಿ ಮೇಲೆ ದಾಳಿ ನಡೆಸಿತ್ತು.

ಈ ವರ್ಷದ ಮೇ 29ರಂದು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನೀನಾ ಬನ್ಸಲ್ ಕೃಷ್ಣ ಅವರು ಪೊಲೀಸ್ ಎಫ್‌ಐಆರ್ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಪ್ರಕರಣ ಎರಡನ್ನೂ ರದ್ದುಗೊಳಿಸಿದರು. ಈ ತೀರ್ಪನ್ನು ಜೂನ್ 10ರಂದು ಸಾರ್ವಜನಿಕವಾಗಿ ಲಭ್ಯಗೊಳಿಸಲಾಯಿತು. ಪ್ರಕರಣದ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ.

ಇ-ಮೇಲ್ ಸಂದರ್ಶನದಲ್ಲಿ ಪುರಕಾಯಸ್ಥ ಅವರು ಜೈಲಿನಲ್ಲಿದ್ದ ತಮ್ಮ ಸಮಯ, ತಮ್ಮ ಗುರಿಗಳು, ಯುವ ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳು ಮತ್ತು ಇನ್ನಿತರ ವಿಷಯಗಳ ಕುರಿತು ‘ದಿ ವೈರ್’ ಜೊತೆ ಮಾತನಾಡಿದ್ದಾರೆ. ಅದರ ಸಂಪಾದಿತ ಭಾಗಗಳು ಕನ್ನಡಾನುವಾದವನ್ನು ಇಲ್ಲಿ ಪ್ರಕಟಿಸಲಾಗಿದೆ.

  • ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ಅವಧಿಯಲ್ಲಿಯೂ ಹಾಗೂ ಕೆಲವು ವಿಶ್ಲೇಷಕರು ‘ಘೋಷಿಸದ ತುರ್ತು ಪರಿಸ್ಥಿತಿ’ ಎಂದು ಬಣ್ಣಿಸಿರುವ ಅವಧಿಯಲ್ಲಿಯೂ ನೀವು ಜೈಲಿನಲ್ಲಿದ್ದಿರಿ. ಈ ಎರಡೂ ಸಂದರ್ಭಗಳು, ಅವುಗಳಲ್ಲಿನ ಸಾಮ್ಯತೆಗಳು ಮತ್ತು ವ್ಯತ್ಯಾಸಗಳ ಬಗ್ಗೆ ಮಾತನಾಡಬಹುದೇ?

“ಮೊದಲು ವ್ಯತ್ಯಾಸಗಳ ಬಗ್ಗೆ ಮಾತನಾಡೋಣ. ಆ ಸಮಯದಲ್ಲಿ ತುರ್ತು ಪರಿಸ್ಥಿತಿ ಯಾವಾಗ ಕೊನೆಗೊಳ್ಳುತ್ತದೆ ಅಥವಾ ಅದು ಕೊನೆಗೊಳ್ಳುತ್ತದೆಯೇ ಇಲ್ಲವೇ ಎಂಬುದೇ ನಮಗೆ ತಿಳಿದಿರಲಿಲ್ಲ. ಅನೇಕ ಹೊಸದಾಗಿ ಸ್ವತಂತ್ರಗೊಂಡ ದೇಶಗಳಂತೆ ಭಾರತವೂ ಸರ್ವಾಧಿಕಾರಿ ಆಡಳಿತ ವ್ಯವಸ್ಥೆಗೆ ಬದಲಾಗಿದೆಯೇ ಎಂಬ ಪ್ರಶ್ನೆಯಿತ್ತು? ನಿಮಗೆ ತಿಳಿದಿರುವಂತೆ, 1976ರಲ್ಲಿ ಬಂದ ಪ್ರಸಿದ್ಧ ಸುಪ್ರೀಂ ಕೋರ್ಟ್ ತೀರ್ಪು — ಎಡಿಎಂ ಜಬಲ್ಪುರ್ ವಿರುದ್ಧ ಶಿವಕಾಂತ್ ಶುಕ್ಲಾ ಪ್ರಕರಣ —ದ ನಂತರದ ಕಾನೂನು ಸ್ಥಿತಿ ಏನೆಂದರೆ, ನಮ್ಮ ಮೂಲಭೂತ ಹಕ್ಕುಗಳು ಸಂವಿಧಾನದಲ್ಲಿ ಖಾತರಿಪಡಿಸಲ್ಪಟ್ಟಿದ್ದವು, ಆದರೆ ಅವುಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ತುರ್ತು ಪರಿಸ್ಥಿತಿ ಅಥವಾ ನಮ್ಮ ಬಂಧನ ಯಾವಾಗ ಕೊನೆಗೊಳ್ಳುತ್ತದೆ ಎಂಬುದೇ ತಿಳಿಯದ ಅನಿಶ್ಚಿತತೆಯು ಅನೇಕರನ್ನು ಮಾನಸಿಕವಾಗಿ ಕುಗ್ಗಿಸಿತು.”

“ಈ ಬಾರಿ ನಾವು ನ್ಯಾಯಾಲಯಗಳ ಮೊರೆ ಹೋಗಲು ಸಾಧ್ಯವಾಯಿತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಮುಂತಾದ ಕಠಿಣ ಕಾನೂನುಗಳಿಂದ ಈ ಪ್ರಕ್ರಿಯೆಗೆ ನಿರ್ಬಂಧಗಳಿದ್ದರೂ, ನ್ಯಾಯಾಂಗ ಪರಿಹಾರಗಳ ಅವಕಾಶ ಇನ್ನೂ ಇದೆ. ನಾವು ನ್ಯಾಯಾಲಯಗಳನ್ನು ಸಂಪರ್ಕಿಸಬಹುದಾಗಿತ್ತು ಮತ್ತು ಅದು ನಮಗೆ ಭರವಸೆ ನೀಡಿತು.

ಇದರ ಇನ್ನೊಂದು ಮುಖವೆಂದರೆ, ಕಾನೂನಿನ ಪ್ರಕಾರ ನಾವು ಹಿಂದಿನ ತುರ್ತು ಪರಿಸ್ಥಿತಿಯ ಸಮಯದಲ್ಲಿದ್ದಂತೆ ಈಗ ರಾಜಕೀಯ ಕೈದಿಗಳಲ್ಲ. ವ್ಯವಸ್ಥೆಯ ದೃಷ್ಟಿಯಲ್ಲಿ, ಅಪರಾಧದ ಆರೋಪ ಎದುರಿಸುತ್ತಿರುವ ಇತರ ಯಾವುದೇ ವ್ಯಕ್ತಿಯಂತೆ ನಾವು ಕೂಡ ‘ವಿಚಾರಣಾಧೀನ ಕೈದಿಗಳು’. ಆದರೆ ನಮ್ಮ ಮೇಲೆ ಹೊರಿಸಲಾದ ಆರೋಪಗಳು ಗಂಭೀರ ಸ್ವರೂಪದ ಅಪರಾಧಗಳಿಗೆ ಸಂಬಂಧಿಸಿದ್ದವು. ಹಿಂದಿನ ಕಾಲದಲ್ಲಿ ನಮ್ಮ ಕುಟುಂಬದವರು ನಮ್ಮನ್ನು ಸುಲಭವಾಗಿ ಭೇಟಿಯಾಗಬಹುದಾಗಿತ್ತು. ಆದರೆ ಈಗ ಭೇಟಿಗಾಗಿ (ಮುಲಾಖಾತ್‌ಗಾಗಿ) ಅನುಮತಿ ಪಡೆಯುವ ಪ್ರಕ್ರಿಯೆಯೂ, ಆ ಭೇಟಿಗಳೇ ಕುಟುಂಬಗಳಿಗೆ ಹೆಚ್ಚು ಕಷ್ಟಕರವಾಗಿದ್ದವು.”

  • ನೀವು ಜೈಲಿನಲ್ಲಿದ್ದ ಅವಧಿಯಲ್ಲಿನ ನಿಮ್ಮ ಮನಸ್ಸಿನಲ್ಲಿ ಉಳಿದಿರುವ ಘಟನೆಗಳ ಬಗ್ಗೆ ಮಾತನಾಡಬಹುದೇ?

“ಈ ಸಂದರ್ಶನವನ್ನು ನನ್ನ ಆತ್ಮಚರಿತ್ರೆ ಬರೆಯಲು ಬಳಸಲು ನಾನು ಬಯಸುವುದಿಲ್ಲ! ನನ್ನ ಮನಸ್ಸಿನಲ್ಲಿ ಉಳಿದಿರುವುದು ಜೈಲಿನಲ್ಲಿರುವ ಜನರ ಸಹನಶಕ್ತಿ ಮತ್ತು ಇಂತಹ ಯಾವುದೇ ಬಂಧನವು ಉಂಟುಮಾಡುವ ಮಾನವೀಯ ಬೆಲೆ. ಇಂತಹ ಅನುಭವಗಳು ಜನರನ್ನು ಅವರು ಎಂದಿಗೂ ಸಿದ್ಧರಾಗಿರದ ರೀತಿಯಲ್ಲಿ ಪರೀಕ್ಷಿಸುತ್ತವೆ. ನನ್ನೊಂದಿಗೆ ಇದ್ದ ಒಬ್ಬ ಸಹ ಕೈದಿ ಹೇಳಿದ ಮಾತು ಹೀಗಿತ್ತು — ‘ಕೊನೆಗೆ, ನಾವು ನಮ್ಮ ಆತ್ಮಗೌರವವನ್ನು ಉಳಿಸಿಕೊಂಡೇ ಹೊರಬರಲು ಬಯಸುತ್ತೇವೆ.’”

  • ಈ ಅನುಭವವು ಮಾಧ್ಯಮ ವಲಯದೊಳಗಿನ ಒಗ್ಗಟ್ಟು ಮತ್ತು ಬೆಂಬಲದ ಬಗ್ಗೆ ನಿಮ್ಮ ಅರ್ಥೈಸಿಕೆಯನ್ನು ಬದಲಾಯಿಸಿತೇ? ನಿರೀಕ್ಷಿಸದ ರೀತಿಯಲ್ಲಿ ನಿಮ್ಮ ಬೆಂಬಲಕ್ಕೆ ನಿಂತವರು ಇದ್ದರೇ? ಅಥವಾ ನೀವು ಬೆಂಬಲ ನಿರೀಕ್ಷಿಸಿದ್ದರೂ ಮೌನವಾಗಿದ್ದವರು ಇದ್ದರೇ?

“ಮತ್ತೆ ನನ್ನ ಆತ್ಮಚರಿತ್ರೆಯ ವಿಷಯಕ್ಕೆ! ನಾನು ಈಗಾಗಲೇ ಹೇಳಿದಂತೆ, ಇಂತಹ ಎಲ್ಲಾ ‘ತುರ್ತು ಪರಿಸ್ಥಿತಿಗಳು’ — ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ — ರಾಜ್ಯದ ಗಮನಕ್ಕೆ ಬರುವ ಪ್ರತಿಯೊಬ್ಬರನ್ನೂ ಪರೀಕ್ಷಿಸುತ್ತವೆ. ಕೊನೆಗೆ, ಸಮಾಜ ಮತ್ತು ಬಹುಶಃ ಇತಿಹಾಸವೂ ಕೂಡ ಎಲ್ಲವೂ ಸಾಮಾನ್ಯವಾಗಿರುವಾಗ ನೀವು ಏನು ಮಾಡಿದ್ದೀರಿ ಎಂಬುದನ್ನು ಅಲ್ಲ, ಪರಿಸ್ಥಿತಿ ಸಾಮಾನ್ಯವಾಗಿರದಾಗ ನೀವು ಏನು ಮಾಡಿದ್ದೀರಿ ಎಂಬುದನ್ನು ಮೌಲ್ಯಮಾಪನ ಮಾಡುತ್ತದೆ.”

  • 2023ರ ಬಂಧನದ ನಂತರ ನಿಮ್ಮ ದೈನಂದಿನ ಜೀವನ ಯಾವ ರೀತಿಯಲ್ಲಿ ಶಾಶ್ವತವಾಗಿ ಬದಲಾಗಿದೆ?

“2021ರ ಇಡಿ ದಾಳಿ ಮತ್ತು ಅದರ ನಂತರದ ಪರಿಣಾಮಗಳು, ಹಾಗೆಯೇ 2023ರ ಬಂಧನದ ಪರಿಣಾಮಗಳನ್ನು ನಿಭಾಯಿಸಲು ಈಗ ಹೆಚ್ಚು ಸಮಯ ಕಳೆಯಬೇಕಾಗಿದೆ. ಕಾನೂನು ಪ್ರಕರಣಗಳು ಮತ್ತು ಇತರ ವಿಚಾರಣೆಗಳಿಗೆ ಹೆಚ್ಚಿನ ಸಮಯ ಹೋಗುತ್ತಿದೆ. ಆ ಸಮಯವನ್ನು ನಾನು ಇನ್ನಷ್ಟು ಪ್ರಾಡಕ್ಟಿವ್ ಕೆಲಸಗಳಿಗೆ ಬಳಸಲು ಬಯಸಿದ್ದೆ.”

  • ನಿಮ್ಮ ರಾಜಕೀಯ ಪಯಣವನ್ನು ಹಿಂತಿರುಗಿ ನೋಡಿದಾಗ, ಯೌವನದಲ್ಲಿ ನೀವು ಬಹಳ ಬಲವಾಗಿ ನಂಬಿದ್ದ ಯಾವುದಾದರೂ ಒಂದು ವಿಚಾರವನ್ನು ನಂತರದ ಅನುಭವಗಳು ಮರುಪರಿಶೀಲಿಸುವಂತೆ ಮಾಡಿವೆಯೇ? ಹಾಗೆಯೇ, ಹಿಂದೆ ನೀವು ತಿರಸ್ಕರಿಸಿದ್ದ ಯಾವುದಾದರೂ ವಿಚಾರವನ್ನು ಕಾಲಕ್ರಮೇಣ ಮೆಚ್ಚಿಕೊಳ್ಳಲು ಕಲಿತಿದ್ದೀರಾ?

“ಮತ್ತೆ ನನ್ನ ಆತ್ಮಚರಿತ್ರೆಗೆ ಸಂಬಂಧಿಸಿದ ಪ್ರಶ್ನೆ! ನಿಮ್ಮ ಪ್ರಶ್ನೆಗಳು ನನ್ನ ಭವಿಷ್ಯದ ಕೆಲಸವನ್ನು ಸ್ವಲ್ಪ ಸುಲಭಗೊಳಿಸುತ್ತವೆ ಎಂದು ಒಪ್ಪಿಕೊಳ್ಳಲೇಬೇಕು! ಸಂಕ್ಷಿಪ್ತವಾಗಿ ಹೇಳುವುದಾದರೆ, ಜೀವನದ ಬಗ್ಗೆ ನನ್ನ ದೃಷ್ಟಿಕೋನ ತುಂಬಾ ಸರಳವಾಗಿದೆ. ನೀವು ಯಾವುದನ್ನು ನಂಬುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ಸಮಯ ಕಳೆಯಿರಿ, ಆದರೆ ಪ್ರತಿದಿನವೂ ನಿಮ್ಮ ನಂಬಿಕೆಗಳನ್ನು ಮರುಪರಿಶೀಲಿಸಲು ಆರಂಭಿಸಬೇಡಿ. ವಿಸ್ತೃತವಾಗಿ ಹೇಳುವುದಾದರೆ, ನಮ್ಮೆಲ್ಲರಿಗೂ ಸಮಾಜದ ಕಡೆಗೆ ಒಂದು ಜವಾಬ್ದಾರಿ ಇದೆ ಎಂದು ನಾನು ನಂಬುತ್ತೇನೆ. ಆ ಜವಾಬ್ದಾರಿಯನ್ನು ಸಮಾಜ ಮತ್ತು ಕಾನೂನುಗಳ ಮಿತಿಯೊಳಗೆ ಇದ್ದುಕೊಂಡೇ ನಾವು ನಿಭಾಯಿಸಬೇಕು.”

  • ಸ್ವತಂತ್ರ ಮಾಧ್ಯಮಗಳಿಗೆ ಅವಕಾಶಗಳು ಕಡಿಮೆಯಾಗುತ್ತಿರುವ ಮತ್ತು ಇಂದಿನ ದಿನಗಳಲ್ಲಿ ಅಪಾಯಗಳು ಹೆಚ್ಚುತ್ತಿರುವ ನಡುವೆಯೂ ಪತ್ರಿಕೋದ್ಯಮಕ್ಕೆ ಬರಲು ಬಯಸುವ ಯುವಕರಿಗೆ ನೀವು ಏನು ಹೇಳುತ್ತೀರಿ?

“ಇಂದಿನ ಯುವಕರಿಗೆ ತಮಗೆ ಏನು ಬೇಕು ಎಂಬುದು ತಿಳಿದಿದೆ ಮತ್ತು ತಮ್ಮ ಗುರಿಗಳನ್ನು ಸಾಧಿಸಲು ಅಗತ್ಯವಾದ ಸಾಧನಗಳೂ ಅವರ ಬಳಿ ಇವೆ ಎಂದು ನಾನು ಭಾವಿಸುತ್ತೇನೆ. ಕೆಲವು ಅವಕಾಶಗಳು ಕಡಿಮೆಯಾಗುತ್ತಿರಬಹುದು, ಆದರೆ ಹೊಸ ಅವಕಾಶಗಳೂ ತೆರೆದುಕೊಳ್ಳುತ್ತಿವೆ. ನಮ್ಮಂತಹ ಹಿರಿಯರ ಮುಂದಿರುವ ಸವಾಲು ಎಂದರೆ, ನಾವು ಹಿಂದೆ ಹೇಗೆ ಹೋರಾಡಿದ್ದೇವೆ ಮತ್ತು ಅವರು ಏನು ಮಾಡಬೇಕು ಎಂದು ನಾವು ಭಾವಿಸುತ್ತೇವೆ ಎಂಬುದರ ಬಗ್ಗೆ ಉಪದೇಶ ನೀಡದೆ, ಯುವಕರಿಗೆ ನಮ್ಮಿಂದ ಏನು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು. ಹೌದು, ನಾವು ನಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದು ಮತ್ತು ನಾವು ಏಕೆ ಹಾಗೆ ಮಾಡಿದೆವು ಎಂಬುದನ್ನು ವಿವರಿಸಬಹುದು. ನಂತರ ಅವರಿಗೆ ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಲು ಬಿಡಬೇಕು — ನಮ್ಮ ಅನುಭವದಲ್ಲಿ ಉಪಯುಕ್ತವಾದುದನ್ನು ಅವರು ಸ್ವೀಕರಿಸಬಹುದು. ಅಥವಾ ಬೇಡ!”

  • ಹಾಸ್ಯವು ರಾಜಕೀಯ ಪ್ರತಿರೋಧದ ಒಂದು ಪ್ರಮುಖ ಭಾಗವಾಗಿದೆ. ದಾಳಿಗಳು, ನ್ಯಾಯಾಲಯದ ಪ್ರಕರಣಗಳು ಮತ್ತು ಜೈಲುವಾಸದ ನಡುವೆಯೂ ನೀವು ನಿಮ್ಮ ಹಾಸ್ಯಪ್ರಜ್ಞೆ ಮತ್ತು ಆಶಾವಾದವನ್ನು ಹೇಗೆ ಉಳಿಸಿಕೊಂಡಿದ್ದೀರಿ?

“ಹಿಂದಿನ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನನ್ನ ಹಿರಿಯ ಸಹ ಕೈದಿಯೊಬ್ಬರು ಹೀಗೆ ಹೇಳಿದ್ದರು ಎಂದು ನನಗೆ ನೆನಪಿದೆ — ‘ನೀವು ನಗುತ್ತಾ ಪ್ರತಿರೋಧಿಸಬಹುದು ಅಥವಾ ಅಳುತ್ತಾ ಪ್ರತಿರೋಧಿಸಬಹುದು. ಆಯ್ಕೆ ನಿಮ್ಮದು!’ ಆಗಲೂ ನಾನು ಹಾಸ್ಯ ಮತ್ತು ಆಶಾವಾದವನ್ನು ಉತ್ತಮ ಆಯ್ಕೆಯೆಂದು ಭಾವಿಸಿದ್ದೆ. ಮತ್ತು ನಾನು ಮೊದಲೇ ಹೇಳಿದಂತೆ, ಒಮ್ಮೆ ನೀವು ಜೀವನದ ಕೆಲವು ಆಯ್ಕೆಗಳನ್ನು ಮಾಡಿಕೊಂಡ ನಂತರ, ಅವುಗಳನ್ನು ಮತ್ತೆ ಮತ್ತೆ ಮರುಪರಿಶೀಲಿಸುವ ಅಗತ್ಯವಿಲ್ಲ. ಇದರಿಂದ ಸಾಕಷ್ಟು ಸಮಯ ಮತ್ತು ಮಾನಸಿಕ ಒತ್ತಡ ಉಳಿಯುತ್ತದೆ!”

ದಿ ವೈರ್‌ ಪ್ರಕಟಿಸಿದ ಸಂದರ್ಶನವನ್ನು ಇಲ್ಲಿ ಓದಿ: ‘Society, History Judge What You Did When Things Were Not Normal’: Prabir Purkayastha

You cannot copy content of this page

Exit mobile version