Home ಅಪರಾಧ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಎನ್‌ಟಿಎ ಸಂಸ್ಥೆಯ ಮೂವರು ವಿಷಯ ತಜ್ಞರಿಂದಲೇ ಲೀಕ್; 94 ಪುಟಗಳ ಸಿಬಿಐ...

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಎನ್‌ಟಿಎ ಸಂಸ್ಥೆಯ ಮೂವರು ವಿಷಯ ತಜ್ಞರಿಂದಲೇ ಲೀಕ್; 94 ಪುಟಗಳ ಸಿಬಿಐ ಚಾರ್ಜ್‌ಶೀಟ್

0

ದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ ಯುಜಿ (NEET UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಸುದೀರ್ಘ 94 ಪುಟಗಳ ಚಾರ್ಜ್‌ಶೀಟ್ (ದೋಷಾರೋಪಣೆ ಪಟ್ಟಿ) ಸಲ್ಲಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದ ಸಂಗತಿ ಇಲ್ಲಿ ಗಮನಾರ್ಹ.

2026ರ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆಗಳು ಹೇಗೆ ಸೋರಿಕೆಯಾದವು ಎಂಬುದರ ಸಮಗ್ರ ವಿವರವನ್ನು ಸಿಬಿಐ ನೀಡಿದೆ. ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ನಿಯೋಜಿಸಿದ್ದ ಮೂವರು ವಿಷಯ ತಜ್ಞರೇ ಈ ದಂಧೆಯ ಮಾಸ್ಟರ್ ಮೈಂಡ್‌ಗಳು ಎಂದು ಸಿಬಿಐ ಪತ್ತೆಹಚ್ಚಿದೆ. ಇವರು ಪ್ರಶ್ನೆಗಳನ್ನು ನೆನಪಿನಲ್ಲಿಟ್ಟುಕೊಂಡು, ರಹಸ್ಯವಾಗಿ ಚೀಟಿಗಳಲ್ಲಿ ಬರೆದುಕೊಂಡು ಹಾಗೂ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿನ ಸಂಬಂಧಿತ ಪ್ಯಾರಾಗ್ರಾಫ್‌ಗಳನ್ನು ಮಾರ್ಕ್ ಮಾಡುವ ಮೂಲಕ ಪ್ರಶ್ನೆಪತ್ರಿಕೆಯನ್ನು ಲೀಕ್ ಮಾಡಿದ್ದಾರೆ.

ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಂಡದಲ್ಲಿದ್ದ ಪಿ. ವಿ. ಕುಲಕರ್ಣಿ, ಮನೀಶ್ ಮಾಂಧಾರೆ ಮತ್ತು ಮನೀಷಾ ಹವಾಲ್ದಾರ್ ಎಂಬ ಮೂವರು ವಿಷಯ ತಜ್ಞರೇ ಈ ಲೀಕೇಜ್‌ನ ಪ್ರಮುಖ ಸೂತ್ರಧಾರರಾಗಿದ್ದಾರೆ. ಕುಲಕರ್ಣಿ ರಸಾಯನಶಾಸ್ತ್ರ (ಕೆಮಿಸ್ಟ್ರಿ), ಮಾಂಧಾರೆ ಸಸ್ಯಶಾಸ್ತ್ರ (ಬಾಟನಿ) ಹಾಗೂ ಹವಾಲ್ದಾರ್ ಭೌತಶಾಸ್ತ್ರ (ಫಿಸಿಕ್ಸ್) ವಿಷಯ ತಜ್ಞರಾಗಿದ್ದರು. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 13 ಜನರನ್ನು ಬಂಧಿಸಲಾಗಿದೆ. ಎನ್‌ಟಿಎ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವಾಗ ಈ ಮೂವರು ಪ್ರಶ್ನೆಗಳನ್ನು ಕಾಪಿ ಮಾಡಿ ಚೀಟಿಗಳಲ್ಲಿ ಬರೆದುಕೊಂಡಿದ್ದರು.

ಎನ್‌ಟಿಎ ಕೇಂದ್ರದ ಪ್ರಶ್ನೆ ಸಿದ್ಧಪಡಿಸುವ ಮತ್ತು ಭಾಷಾಂತರ (ಟ್ರಾನ್ಸ್‌ಲೇಷನ್) ವಿಭಾಗಕ್ಕೆ ಈ ಮೂವರಿಗೂ ಪ್ರವೇಶವಿತ್ತು. ಯಾವುದೇ ಡಿಜಿಟಲ್ ಸಾಕ್ಷ್ಯಗಳು ಸಿಗದಂತೆ ತಾಂತ್ರಿಕ ಸಾಧನಗಳನ್ನು ಬಳಸದೆ ತಪಾಸಣೆಯಿಂದ ತಪ್ಪಿಸಿಕೊಂಡಿದ್ದರು. ನಂತರ ತಮಗೆ ನಿಕಟವಾಗಿದ್ದ ಕೋಚಿಂಗ್ ಸೆಂಟರ್‌ಗಳು ಮತ್ತು ಮಧ್ಯವರ್ತಿಗಳ ಮೂಲಕ ಈ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಲುಪಿಸಿದ್ದರು. ಆರ್ಥಿಕ ಲಾಭ ಗಳಿಸಲು ಹಾಗೂ ತಮ್ಮ ಬಳಿ ಬರುವ ಟ್ಯೂಷನ್ ವಿದ್ಯಾರ್ಥಿಗಳ ರಿಸಲ್ಟ್ ಹೆಚ್ಚಿಸಲು ಇವರು ಈ ರೀತಿ ಮಾಡಿದ್ದಾರೆ ಎಂದು ಸಿಬಿಐ ತಿಳಿಸಿದೆ. ಖಾಸಗಿ ತರಬೇತಿ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಈ ಲೀಕ್ ಆದ ಪ್ರಶ್ನೆಗಳನ್ನು ಅಭ್ಯಾಸ ಮಾಡಿಸಲಾಗಿತ್ತು. ಕಷ್ಟವಿಲ್ಲದ ಸರಳ ಪ್ರಶ್ನೆಗಳನ್ನು ನೆನಪಿಟ್ಟುಕೊಂಡು, ಬಳಿಕ ತಮ್ಮ ಹೋಟೆಲ್ ಕೊಠಡಿಗೆ ಬಂದು ಕಾಗದದ ಮೇಲೆ ಬರೆದುಕೊಳ್ಳುತ್ತಿದ್ದರು.

ಎನ್‌ಟಿಎ ಭದ್ರತಾ ಲೋಪಗಳೂ ತನಿಖೆಯಲ್ಲಿ ಬಹಿರಂಗವಾಗಿವೆ. ಎನ್‌ಟಿಎ ಕೇಂದ್ರದಲ್ಲಿ ಸರಿಯಾದ ತಪಾಸಣೆ (ಫ್ರಿಸ್ಕಿಂಗ್) ನಡೆಯುತ್ತಿರಲಿಲ್ಲ. ಪ್ರಕರಣದ ಎರಡನೇ ಆರೋಪಿ (A2) ಪಿ. ವಿ. ಕುಲಕರ್ಣಿ ಮೂರು ಸೆಟ್‌ಗಳ ಪ್ರಶ್ನೆಪತ್ರಿಕೆಗಳ ಭಾಷಾಂತರ ಕೆಲಸವನ್ನೂ ಮಾಡಿದ್ದ. ಕೇವಲ ಮೂರು ದಿನಗಳಲ್ಲಿ ಆತ 135 ಪ್ರಶ್ನೆಗಳನ್ನು ಭಾಷಾಂತರಿಸಿದ್ದ ಎಂದು ಸಿಬಿಐ ಹೇಳಿದೆ. ಬಂಧಿತ 13 ಆರೋಪಿಗಳಲ್ಲಿ ಎನ್‌ಟಿಎ ವಿಷಯ ತಜ್ಞರು, ಕೋಚಿಂಗ್ ಸೆಂಟರ್ ಸಿಬ್ಬಂದಿ, ಮಧ್ಯವರ್ತಿಗಳು ಹಾಗೂ ಲಾಭ ಪಡೆದ ವಿದ್ಯಾರ್ಥಿಗಳು ಸೇರಿದ್ದಾರೆ. ಸಿಬಿಐ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಸುಮಾರು 20,000 ಪುಟಗಳ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ್ದು, 360 ಸಾಕ್ಷಿಗಳನ್ನು ಉಲ್ಲೇಖಿಸಿದೆ. ಪ್ರಸ್ತುತ 13 ಆರೋಪಿಗಳೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮೇ 12 ರಂದು ಸಿಬಿಐ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿಕೊಂಡು, 72 ಅಧಿಕಾರಿಗಳ ತನಿಖಾ ತಂಡವನ್ನು ರಚಿಸಿತ್ತು. 8 ಸೈಬರ್ ಫೊರೆನ್ಸಿಕ್ ತಜ್ಞರೂ ತನಿಖೆಗೆ ನೆರವಾಗಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ 92 ಕಡೆಗಳಲ್ಲಿ ದಾಳಿ ನಡೆಸಿ ಡಿಜಿಟಲ್ ಸಾಧನಗಳು ಹಾಗೂ ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು. ಮೇ 13 ರಂದು ಮೊದಲ ಆರೋಪಿಯನ್ನು ಬಂಧಿಸಲಾಗಿತ್ತು. ಆರ್ಥಿಕ ವಹಿವಾಟಿನ ಕೋನದಲ್ಲೂ ತನಿಖೆ ನಡೆಸಲಾಗಿದ್ದು, ಹಲವು ಬ್ಯಾಂಕ್ ಖಾತೆಗಳು, ಲಾಕರ್‌ಗಳು ಹಾಗೂ ಡಿಮ್ಯಾಟ್ ಖಾತೆಗಳನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿದೆ.

You cannot copy content of this page

Exit mobile version