Home ಅಪರಾಧ ಪೊಲೀಸ್ ವಶದಲ್ಲಿದ್ದ ದಲಿತ ಯುವಕ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಹಲ್ಲೆ ನಡೆಸಿ...

ಪೊಲೀಸ್ ವಶದಲ್ಲಿದ್ದ ದಲಿತ ಯುವಕ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಹೊರಿಸಿದ ಕುಟುಂಬಸ್ಥರು

0

ಪ್ರತಾಪಗಢ: ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಪಟ್ಟಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದ ದಲಿತ ಯುವಕನೊಬ್ಬ ಶೌಚಾಲಯದಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಆದರೆ, ಪೊಲೀಸರು ವಿಚಾರಣೆ ವೇಳೆ ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಪಟ್ಟಿ ಕೊತ್ವಾಲಿ ವ್ಯಾಪ್ತಿಯ ಮೋಲ್ನಾಪುರ ಗ್ರಾಮದ ನಿವಾಸಿ ಲಲ್ಲು ರಾಮ್ ಗೌತಮ್ ಎಂಬುವರ 22 ವರ್ಷದ ಪುತ್ರ ಅರ್ಜುನ್ ಗೌತಮ್ ಅಲಿಯಾಸ್ ಶೈಲೇಶ್ ಮೃತಪಟ್ಟ ಯುವಕ. 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಕರೆದೊಯ್ದ ಆರೋಪದ ಮೇಲೆ ಮೂರು ತಿಂಗಳ ಹಿಂದೆಯಷ್ಟೇ ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಇಬ್ಬರನ್ನೂ ಪೊಲೀಸರು ಪತ್ತೆಹಚ್ಚಿದ್ದರು. ಆದರೆ, ಕಳೆದ ಆಗಸ್ಟ್ 17 ರಂದು ಬಾಲಕಿ ಮತ್ತೆ ಮನೆಯಿಂದ ನಾಪತ್ತೆಯಾಗಿದ್ದಳು. ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿತ್ತು.

ಮೂರು ದಿನಗಳ ಹಿಂದೆಯಷ್ಟೇ ಬಾಲಕಿಯನ್ನು ಮತ್ತೆ ಪತ್ತೆಹಚ್ಚಿದ್ದ ಪೊಲೀಸರು, ಆಕೆಯ ಹೇಳಿಕೆ ಆಧರಿಸಿ ಅರ್ಜುನ್ ಗೌತಮ್‌ನನ್ನು ವಿಚಾರಣೆಗಾಗಿ ಭಾನುವಾರ ಪಟ್ಟಿ ಠಾಣೆಗೆ ಕರೆತಂದಿದ್ದರು. ಬಾಲಕಿಯನ್ನು ‘ಒನ್ ಸ್ಟಾಪ್ ಸೆಂಟರ್’ಗೆ ಕಳುಹಿಸಿ ಅರ್ಜುನ್‌ನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿತ್ತು. ಸೋಮವಾರ ಬೆಳಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ಠಾಣೆಯ ಶೌಚಾಲಯಕ್ಕೆ ಹೋದ ಅರ್ಜುನ್, ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದ. ಬಹಳ ಹೊತ್ತಾದರೂ ಆತ ಹೊರಬಾರದ ಕಾರಣ ಅನುಮಾನಗೊಂಡ ಸಿಬ್ಬಂದಿ ಬಾಗಿಲು ಮುರಿದು ನೋಡಿದಾಗ, ಕಂಬಳಿಯನ್ನು ಹರಿದು ಮಾಡಿದ ನೇಣಿನಿಂದ ಆತ ಶವವಾಗಿ ನೇತಾಡುತ್ತಿರುವುದು ಕಂಡುಬಂದಿದೆ.

ಘಟನೆಯಿಂದ ಠಾಣೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಎಸ್ಪಿ ದೀಪಕ್ ಭೂಕರ್, ಹೆಚ್ಚುವರಿ ಎಸ್ಪಿ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಅರ್ಜುನ್‌ನನ್ನು ಬಲವಂತವಾಗಿ ಕರೆದೊಯ್ದು ವಿಚಾರಣೆ ನೆಪದಲ್ಲಿ ತೀವ್ರವಾಗಿ ಥಳಿಸಿದ್ದರಿಂದಲೇ ಆತ ಮೃತಪಟ್ಟಿದ್ದಾನೆ ಎಂದು ಆತನ ತಂದೆ ಲಲ್ಲು ರಾಮ್ ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಕುಮಾರ್, “ಯುವಕನ ವಿರುದ್ಧದ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಆತ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಲ್ಲೆಯಿಂದ ಸಾವನ್ನಪ್ಪಿದ್ದಾನೆ ಎಂಬ ಆರೋಪ ನಿರಾಧಾರವಾಗಿದ್ದು, ಘಟನೆಯ ಬಗ್ಗೆ ಸಮಗ್ರ ಮತ್ತು ಆಳವಾದ ತನಿಖೆ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.

You cannot copy content of this page

Exit mobile version