ತೆಲಂಗಾಣದ ಗದ್ವಾಲ್ ಜಿಲ್ಲೆಯ ರೇಪಲ್ಲೆ ಗ್ರಾಮದಲ್ಲಿ ಅಂತರ್‌ಜಾತಿ ವಿವಾಹವಾದ ಕಾರಣಕ್ಕಾಗಿ ದಲಿತ ಕುಟುಂಬವೊಂದರ ಮನೆಯನ್ನು ಟ್ರ್ಯಾಕ್ಟರ್ ಮತ್ತು ಇತರ ಸಲಕರಣೆಗಳಿಂದ ಧ್ವಂಸಗೊಳಿಸಿರುವ ಅಮಾನವೀಯ ಘಟನೆ ನಡೆದಿದೆ.ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ದಲಿತ ಮಾದಿಗ ಸಮುದಾಯಕ್ಕೆ ಸೇರಿದ ಯುವಕ ಮತ್ತು ಬೋಯಾ ಸಮುದಾಯದ ಯುವತಿ ಸೆಪ್ಟೆಂಬರ್ 9 ರಂದು ಹೈದರಾಬಾದ್‌ನ ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿದ್ದರು.ಮದುವೆಯ ನಂತರ ದಂಪತಿ ರಕ್ಷಣೆ ಕೋರಿ ಮಾಸಾಬ್ ಟ್ಯಾಂಕ್ ಪೊಲೀಸರನ್ನು ಸಂಪರ್ಕಿಸಿದ್ದರು.ಆದರೆ ಮರುದಿನವೇ ಯುವತಿಯ ಕುಟುಂಬದ ಸುಮಾರು 15 ಮಂದಿ ರೇಪಲ್ಲೆ ಗ್ರಾಮಕ್ಕೆ ತೆರಳಿ, ಯುವಕನ ಕುಟುಂಬದ ಮನೆಯನ್ನು ಗುದ್ದಲಿ ಹಾಗೂ ಟ್ರ್ಯಾಕ್ಟರ್ ಬಳಸಿ ಕೆಡವಿ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಘಟನೆ ಸಂಬಂಧ ಪೊಲೀಸರು ಅದೇ ದಿನ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ದಲಿತ ಬಹುಜನ ರಂಗ (DBF), ಮಾನವ ಹಕ್ಕುಗಳ ವೇದಿಕೆ (HRF) ಮತ್ತು ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯನ್ನು (ASA) ಒಳಗೊಂಡ ಸತ್ಯಶೋಧನಾ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಈ ಕೃತ್ಯದಲ್ಲಿ ಭಾಗಿಯಾದ ಮತ್ತು ಘಟನೆಗೆ ಪ್ರಚೋದನೆ ನೀಡಿದ ಪ್ರತಿಯೊಬ್ಬರನ್ನೂ ಕೂಡಲೇ ಬಂಧಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.ಜತೆಗೆ, ಸಂತ್ರಸ್ತ ಕುಟುಂಬವು ಮತ್ತೆ ಮನೆ ನಿರ್ಮಿಸಿಕೊಳ್ಳಲು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಸೂಕ್ತ ಪರಿಹಾರವನ್ನು ಮಂಜೂರು ಮಾಡುವಂತೆ ಅಧಿಕಾರಿಗಳನ್ನು ಆಗ್ರಹಿಸಿದೆ.
