Home ಅಪರಾಧ ದೊಡ್ಡಬಳ್ಳಾಪುರ: ಲಾಡ್ಜ್‌ನಲ್ಲಿ ಐಡಿ ಕಾರ್ಡ್ ಟ್ಯಾಗ್‌ ಬಳಸಿ ಪತ್ನಿಯ ಬರ್ಬರ ಹತ್ಯೆ, ಪತಿ ಪರಾರಿ

ದೊಡ್ಡಬಳ್ಳಾಪುರ: ಲಾಡ್ಜ್‌ನಲ್ಲಿ ಐಡಿ ಕಾರ್ಡ್ ಟ್ಯಾಗ್‌ ಬಳಸಿ ಪತ್ನಿಯ ಬರ್ಬರ ಹತ್ಯೆ, ಪತಿ ಪರಾರಿ

0

ದೊಡ್ಡಬಳ್ಳಾಪುರದ ಲಾಡ್ಜ್ ಒಂದರಲ್ಲಿ 23 ವರ್ಷದ ಯುವತಿಯೊಬ್ಬಳನ್ನು ಆಕೆಯ ಪತಿಯೇ ಐಡಿ ಕಾರ್ಡ್ ಟ್ಯಾಗ್‌ನಿಂದ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೊಲೆಯ ನಂತರ ಆರೋಪಿ ಪತಿಯು ಮೃತಳ ಮೊಬೈಲ್ ಫೋನ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ಗೌರಿಬಿದನೂರು ತಾಲೂಕಿನ ನಾಗರಗೆರೆ ಗ್ರಾಮದ ನಿವಾಸಿ ವಿದ್ಯಾ (23) ಕೊಲೆಯಾದ ದುರ್ದೈವಿ. ಮುಡುಗೆರೆ ಗ್ರಾಮದ ನಿವಾಸಿ ಆನಂದ್ ಕೊಲೆ ಆರೋಪಿ. ವಿದ್ಯಾ ಮತ್ತು ಆನಂದ್ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದು, ದೊಡ್ಡಬಳ್ಳಾಪುರದ ಗಾಂಧಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಆರು ತಿಂಗಳಿಂದ ದಂಪತಿ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಪತಿಯೊಂದಿಗೆ ಜಗಳವಾಡಿದ್ದ ವಿದ್ಯಾ, ಆತನನ್ನು ತೊರೆದು ಬೆಂಗಳೂರಿನ ಪಿಜಿ (PG) ವಸತಿಗೆ ತೆರಳಿದ್ದರು.

ಈ ಸಂಬಂಧ ಆನಂದ್ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ. ಪೊಲೀಸರು ವಿದ್ಯಾ ಅವರನ್ನು ಪತ್ತೆಹಚ್ಚಿ, ಸುಮಾರು 20 ದಿನಗಳ ಹಿಂದೆ ದಂಪತಿಗೆ ಕೌನ್ಸೆಲಿಂಗ್ ನಡೆಸಿ ಆನಂದ್ ಜತೆ ಕಳುಹಿಸಿಕೊಟ್ಟಿದ್ದರು.

ಬುಧವಾರ ರಾತ್ರಿ ಆನಂದ್ ತನ್ನ ಪತ್ನಿ ವಿದ್ಯಾಳನ್ನು ದೊಡ್ಡಬಳ್ಳಾಪುರದ ಸಮೃದ್ಧಿ ಹೋಟೆಲ್ ಮೇಲಿರುವ ಎಸ್‌ಜಿಎಸ್ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದನು. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ದಂಪತಿ ರಾತ್ರಿ 11:48ರ ಸುಮಾರಿಗೆ ಒಟ್ಟಿಗೆ ಕೋಣೆಗೆ ತೆರಳಿದ್ದರು. ಆದರೆ, ರಾತ್ರಿ 1 ಗಂಟೆಯ ಸುಮಾರಿಗೆ ಆನಂದ್ ಒಬ್ಬನೇ ಕೋಣೆಗೆ ಬೀಗ ಹಾಕಿ ಲಾಡ್ಜ್‌ನಿಂದ ಹೊರಟು ಹೋಗಿದ್ದಾನೆ. ಕೋಣೆಗೆ ಬೀಗ ಹಾಕಿದ್ದರಿಂದ ಅವರ ವಸ್ತುಗಳು ಒಳಗೇ ಇರಬಹುದು ಎಂದು ಭಾವಿಸಿದ್ದ ಸಿಬ್ಬಂದಿ ಯಾವುದೇ ಅನುಮಾನ ವ್ಯಕ್ತಪಡಿಸಿರಲಿಲ್ಲ. 24 ಗಂಟೆ ಕಳೆದ ನಂತರವೂ ಆತ ಬಾರದಿದ್ದಾಗ ಸಿಬ್ಬಂದಿ ಫೋನ್ ಸಂಪರ್ಕಿಸಲು ಯತ್ನಿಸಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.

ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕೋಣೆಯ ಬೀಗ ಒಡೆದು ಪರಿಶೀಲಿಸಿದಾಗ ವಿದ್ಯಾ ಶವವಾಗಿ ಪತ್ತೆಯಾಗಿದ್ದಾಳೆ. ಕುತ್ತಿಗೆಗೆ ಐಡಿ ಕಾರ್ಡ್ ಟ್ಯಾಗ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಆನಂದ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

You cannot copy content of this page

Exit mobile version