Home ಅಪರಾಧ ಜಾಮೀನು ಷರತ್ತು ಉಲ್ಲಂಘಿಸಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್‌ಗೆ ಬಹಿರಂಗ ಸವಾಲು ಹಾಕಿದ ಸ್ವತಂತ್ರ...

ಜಾಮೀನು ಷರತ್ತು ಉಲ್ಲಂಘಿಸಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್‌ಗೆ ಬಹಿರಂಗ ಸವಾಲು ಹಾಕಿದ ಸ್ವತಂತ್ರ ಭಾರದ್ವಾಜ್

0

ದಲಿತ ವ್ಯಕ್ತಿಯೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ಹಿಂದುತ್ವ ಕಾರ್ಯಕರ್ತ ಸ್ವತಂತ್ರ ಭಾರದ್ವಾಜ್, ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ಭೀಮ್ ಆರ್ಮಿ ಮುಖ್ಯಸ್ಥ ಹಾಗೂ ಸಂಸದ ಚಂದ್ರಶೇಖರ್ ಆಜಾದ್ ಅವರಿಗೆ ಬಹಿರಂಗ ಸವಾಲು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೀದಿಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಪ್ರದರ್ಶನ ನೀಡಬಾರದು ಹಾಗೂ ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ನ್ಯಾಯಾಲಯ ನಿರ್ಬಂಧ ವಿಧಿಸಿದ್ದರೂ ಈ ಪ್ರಚೋದನಕಾರಿ ವಿಡಿಯೋ ಹೊರಬಿದ್ದಿದೆ.

ತಾವು ಜೈಲಿನಲ್ಲಿದ್ದಾಗ ತಮ್ಮ ಬೆಂಬಲಿಗರ ವಾಹನಗಳ ಮೇಲೆ ನಡೆದಿದೆ ಎನ್ನಲಾದ ದಾಳಿಯ ಬಗ್ಗೆ ಪ್ರಸ್ತಾಪಿಸಿರುವ ಭಾರದ್ವಾಜ್, ಸಮುದಾಯವೊಂದರ ವಿರುದ್ಧ ನಿಂದನೀಯ ಪದಗಳನ್ನು ಬಳಸಿ ಬೆದರಿಕೆ ಹಾಕಿದ್ದಾರೆ. ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಉದ್ದೇಶಿಸಿ ಅವಹೇಳನಕಾರಿಯಾಗಿ ಮಾತನಾಡಿದ್ದು, ತನ್ನೊಂದಿಗೆ ನೇರವಾಗಿ ಮುಖಾಮುಖಿಯಾಗುವಂತೆ ಬಹಿರಂಗ ಸವಾಲು ಎಸೆದಿದ್ದಾರೆ. ಜತೆಗೆ, ಪೊಲೀಸ್ ಠಾಣೆಯೊಳಗಿನ ಘಟನೆಗಳನ್ನು ಉಲ್ಲೇಖಿಸಿ ದರ್ಪದ ಮಾತುಗಳನ್ನಾಡಿದ್ದಾರೆ.

ದೆಹಲಿ ನ್ಯಾಯಾಲಯವು ಭಾರದ್ವಾಜ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು, ಸಾರ್ವಜನಿಕ ಶಾಂತಿ ಕದಡಬಾರದು ಮತ್ತು ಜಾಮೀನನ್ನು ಯಾವುದೇ ವಿಜಯೋತ್ಸವದ ಟ್ರೋಫಿಯಂತೆ ಬಿಂಬಿಸಬಾರದು ಎಂದು ಸ್ಪಷ್ಟ ಎಚ್ಚರಿಕೆ ನೀಡಿತ್ತು. ನಿಯಮಿತ ಜಾಮೀನು ಅರ್ಜಿಯ ವಿಚಾರಣೆ ಬಾಕಿ ಇರುವಾಗಲೇ ಈ ರೀತಿಯ ಜಾತಿನಿಂದನೆ ಮತ್ತು ಬೆದರಿಕೆ ವಿಡಿಯೋ ಬಿಡುಗಡೆಯಾಗಿರುವುದು ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ಮೂಡಿಸಿದೆ.

ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಆ ಬಗ್ಗೆ ಪಾಡ್‌ಕ್ಯಾಸ್ಟ್ ಒಂದರಲ್ಲಿ ಸಮರ್ಥಿಸಿಕೊಂಡಿದ್ದ ಆರೋಪದ ಮೇಲೆ ಈತನನ್ನು ಈ ಹಿಂದೆ ಬಂಧಿಸಲಾಗಿತ್ತು. ಸದ್ಯ ಜಾಮೀನು ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿರುವ ಈ ಹೊಸ ವಿಡಿಯೋದ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

You cannot copy content of this page

Exit mobile version