ಯುನೈಟೆಡ್ ಕಿಂಗ್‌ಡಮ್ (UK) ದೇಶದಲ್ಲಿ ದಾರುಣ ಘಟನೆಯೊಂದು ನಡೆದಿದೆ. 20 ವರ್ಷದ ಭಾರತೀಯ ಯುವತಿ (Indian woman) ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ವೆಸ್ಟ್‌ಮಿಡ್‌ಲ್ಯಾಂಡ್ (West Midland) ಎನ್ನುವಲ್ಲಿ ಶನಿವಾರ ಸಂಜೆ ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜನಾಂಗೀಯ ದ್ವೇಷವೇ ಈ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. “ಇದು ಒಬ್ಬ ಯುವತಿ ಮೇಲೆ ನಡೆದ ಅತ್ಯಂತ ಭೀಕರವಾದ ದಾಳಿ. ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಯ ಪತ್ತೆಗಾಗಿ ಶೋಧ ನಡೆಸುತ್ತಿದ್ದೇವೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ರೋನನ್ ಟೈರರ್ ತಿಳಿಸಿದರು.
ಈ ಸಂಬಂಧ ಆರೋಪಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಆರೋಪಿಯನ್ನು ಗುರುತಿಸಿದರೆ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಸಂತ್ರಸ್ತೆ ಪಂಜಾಬಿ ಯುವತಿ ಎಂದು ಸಿಖ್ ಫೆಡರೇಷನ್ ಯುಕೆ ಬಹಿರಂಗಪಡಿಸಿದೆ.
ದುಷ್ಕರ್ಮಿ ಆಕೆಯ ಮನೆಯ ಬಾಗಿಲನ್ನು ಒಡೆದು ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದೆ. ಕಳೆದ ತಿಂಗಳು ಸಹ ಒಬ್ಬ ಸಿಖ್ ಮಹಿಳೆಯ ಮೇಲೆ ದುಷ್ಕರ್ಮಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಆ ಘಟನೆ ಮರೆಯುವ ಮುನ್ನವೇ ಮತ್ತೊಬ್ಬ ಯುವತಿ ಮೇಲೆ ನಡೆದಿರುವ ಈ ದಾಳಿ ಸ್ಥಳೀಯವಾಗಿ ಆತಂಕಕ್ಕೆ ಕಾರಣವಾಗಿದೆ.
