Friday, June 14, 2024

ಸತ್ಯ | ನ್ಯಾಯ |ಧರ್ಮ

ಅವಿವಾಹಿತರಿಗೆ ವಿವಾಹಭಾಗ್ಯ ಸ್ಕೀಂ ಬೇಕಂತೆ!

“ಅವಿವಾಹಿತ ಗಂಡಸರನ್ನು ಕಡೆಗಣಿಸಿದೆ ಸರ್ಕಾರ. ಈಗ ಮದುವೆ ಆಗದೆ ನೋಡಿ ನನಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಲಾಸ್, ತಿಂಗಳಿಗೆ ಹತ್ತು ಕೇಜಿ ಅಕ್ಕಿ ಲಾಸ್….. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಜಾರಿಗೆ ಬರುವ ವೇಳೆ ನನಗೆ ಮದುವೆ ಆಗಲೇ ಬೇಕು” ಅಂತ ಹೇಳಿ ಫೋನ್ ಕಟ್ ಮಾಡಿದ…..ಹಿರಿಯ ಪತ್ರಕರ್ತೆ ಚಂದ್ರಾವತಿ ಬಡ್ಡಡ್ಕ ಅವರು ʼಉಚಿತʼ ಗಳ ಬಗ್ಗೆ ಬರೆದ ಲಘುಬರಹ ಇಲ್ಲಿದೆ.

ಚುನಾವಣೆ ಘೋಷಣೆ ಆದಾಗ ಯಾರ್ಯಾರಿಗೆ ಟಿಕೆಟೂ ಎಂದು ಕುತೂಹಲದಿಂದ ಇಣುಕಿದ್ದಾಯ್ತು. ಚುನಾವಣೆ ಮುಗಿದ ಬಳಿಕ ಫಲಿತಾಂಶ ಘೋಷಣೆ ಆಗುತ್ತಿರುವ ವೇಳೆಗೆ ಯಾರು ಲೀಡಿಂಗು, ಯಾರು ಟ್ರೇಲಿಂಗ್, ಛೇ ಅಷ್ಟು ಓಟಿಗಾ, ಹೇ ಪರವಾಗಿಲ್ಲ ಇಷ್ಟು ಡಿಫರೆನ್ಸ್ ಇದ್ದರೆ ಗೆಲ್ತಾರೆ ಅಂತೆಲ್ಲ ಒಮ್ಮೊಮ್ಮೆ ಕುರ್ಚಿಯ ತುದಿಗೆ ಜಾರಿ ಮತ್ತೆ ನಿರಾಳವಾಗಿ…. ಹೀಗೆ, ಒಂದು ಪಕ್ಷ ಗೆದ್ದು ಸರ್ಕಾರ ರಚನೆಯಾಗಿ “ಯಾರು ಗೆದ್ದರೂ ಯಾರು ಸೋತರೂ ನಾನು ತಿನ್ನಬೇಕಿದ್ದರೆ ನಾನು ದುಡೀಬೇಕು” ಎಂಬ ಘೋಷ ವಾಕ್ಯದಂತೆ ನಮ್ಮನಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದೆವು.

ಅಷ್ಟರಲ್ಲಿ ಮೊನ್ನೆ ನಮ್ಮ ಉದಯ ಫೋನ್ ಮಾಡಿದ್ದ. ಅವನು ಫೋನ್ ಮಾಡಿದಾಗ ನನಗೆ ಉತ್ತರಿಸಲಾಗಲಿಲ್ಲ. ಹಾಗಾಗಿ ಕಾಲ್ ತಿರುಗಿಸಬೇಕಲ್ಲವೇ, ನಂಗೆ ಪುರ್ಸೋತ್ತಾದಾಗ ಅವನ ನಂಬರ್ ಒತ್ತಿದೆ. ಅತ್ತಲಿಂದ ಎಂಗೇಜ್. ಅರ್ಧಗಂಟೆ ಬಿಟ್ಟು ಪುನಃ ಕರೆದಾಗಲೂ “ನೀವು ತಲುಪಲು ಪ್ರಯತ್ನಿಸುತ್ತಿರುವ ಚಂದಾದಾರರು ಬೇರೊಂದು ಕರೆಯಲ್ಲಿ ನಿರತರಾಗಿದ್ದಾರೆ” ಎಂಬುದಾಗಿ ಮೊಬೈಲಿಣಿ ಹೇಳಿದಳು. ಹೇ, ಇವನು ಯಾರತ್ರ ಇಷ್ಟೊತ್ತು ಮಾತಾಡುವುದು, ಮದುವೆಗಾಗಿ ವಧು ಅನ್ವೇಷಣೆಯಲ್ಲಿದ್ದ ಇವನಿಗೆ ಯಾವುದಾದರೂ ಸಂಧಾನ ಫಲಿಸಿತಾ ಎಂಬ ಯೋಚನೆ ಫಕ್ಕನೆ ಸುಳಿಯಿತು. ಮತ್ತೂ ಬಿಡದೆ ಕಾಲ್ ಮಾಡಿದೆ. ಮತ್ತೂ ಎಂಗೇಜ್! ಫೋನ್ ಮಾಡಲು ಹೊರಟವಳಿಗೆ ಯಾರ ಬಳಿಯಾದರೂ ಮಾತಾಡಲೇ ಬೇಕೆಂಬ ಹುಕಿ ಹುಟ್ಟಿತ್ತು. ಹಾಗಾಗಿ ಬೆಂಗಳೂರು ಅತ್ತೆಗೆ ಫೋನಿಸುವಾ ಅಂತ ಅವರ ನಂಬರ್ ಒತ್ತುತ್ತಿರಬೇಕಿದ್ದರೆ ಇತ್ತಲಿಂದ ಉದಯ ಕಾಲಿಂಗ್!

ಹೇ ಎಂತ ಮಾರಾಯಾ ಮದುವೆಗೆ ಹುಡುಗಿ ಪಕ್ಕಾ ಆಯ್ತಾ ಹೇಗೆ? ಅಷ್ಟೊತ್ತಿಂದ ನಿನ್ನ ಫೋನ್ ಎಂಗೇಜ್ ಬರ್ತಿದೆ ಅಂತ ನಾನು ಇತ್ತಲಿಂದ ಕೇಳಿದ್ದೇ ತಡ, ಎಂತ ಅಕ್ಕಾ ಈ ಸರ್ಕಾರ ಹೀಗೆ ಮಾಡುದಾ ಅವಿವಾಹಿತರ ವಿರೋಧಿ ಸರ್ಕಾರ, ನಮ್ಮ ಕಷ್ಟಸುಖ ಕೇಳುವವರು ಯಾರೂ ಇಲ್ಲ, ನಾವೆಲ್ಲ ದ್ವಿತೀಯ ದರ್ಜೆ ಪ್ರಜೆಗಳಾಗಿದ್ದೇವೆ……… ಬ್ಲಾ…. ಬ್ಲಾ…. ಬ್ಲಾ…. ಅಂತ ಅವನ ಅಸಮಾಧಾನವನ್ನೆಲ್ಲ ನನ್ನ ಮೇಲೆ ಕಕ್ಕಿದ. ಅಲ್ಲ ಮಾರಾಯ, ನಿನ್ನ ಮದುವೆಗೂ ಸರ್ಕಾರಕ್ಕೂ ಏನು ಸಂಬಂಧ? ಇಷ್ಟಕ್ಕೂ ನಿನಗಾದ ಅನ್ಯಾಯವೇನು? ಎಂದು ಪ್ರಶ್ನಿಸಿ ಸ್ವಲ್ಪ ಸಮಾಧಾನ ಮಾಡಿಕೋ….. ನಿಧಾನ ನಿಧಾನ… ಹೀಗೆ ಸಿಟ್ಟು ಮಾಡಿಕೊಂಡು ರಕ್ತದ ಒತ್ತಡ ಹೆಚ್ಚಿಸಿಕೊಳ್ಳಬೇಡ, ಸಿಟ್ಟು ಮಾಡಿಕೊಂಡರೆ ಹಲವು ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ, ಮುಖದ ಸೌಂದರ್ಯ ಹಾಳಾಗುತ್ತದೆ ಎಂದೆಲ್ಲ ನೆನಪಿಗೆ ಬಂದುದನ್ನೆಲ್ಲ ಒಟ್ಟಿಗೆ ಹೇಳಿ ಅವನನ್ನು ಸ್ವಲ್ಪ ಶಾಂತವಾಗಿಸಲು ಪ್ರಯತ್ನಿಸಿದೆ.

ಒಂದೆರಡು ಸೆಕುಂಡು ಸುಧಾರಿಸಿಕೊಂಡವ ಕೊಂಚ ತಣ್ಣಗಾದಂತೆ ಕಂಡ, ಅಲ್ಲಲ್ಲ ಕೇಳಿದ. ಅಲ್ಲಕ್ಕಾ ಮತ್ತೆಂತ ಈ ಸರ್ಕಾರ ಇಷ್ಟೊಂದು ಗ್ಯಾರಂಟಿಗಳನ್ನು ಕೊಟ್ಟಿದೆ; ಅವಿವಾಹಿತ ಹುಡುಗರನ್ನು ಗಣನೆಗೆ ತೆಗೆದುಕೊಂಡಿದೆಯಾ ಅಂತ ಕೇಳಿದ. ಗೊತ್ತಿಲ್ಲ ಅಂದೆ. ನಾನು ಅವಿವಾಹಿತ ಹುಡುಗ ಅಲ್ವಲ್ಲಾ, ಹಾಗಾಗಿ. ಇದು ಪಕ್ಕಾ ಅವಿವಾಹಿತ ಗಂಡಸರ ವಿರೋಧಿ ಸರ್ಕಾರ ಅಂತ ಮತ್ತೆ ರೋದನೆ ಶುರುವಿಕ್ಕಿದ. ಅಲ್ಲ ಈ ಸರ್ಕಾರ ಬಡವರ ಬಂಧು ಸರ್ಕಾರ. ಬಡವರಿಗಾಗಿ, ಬಡವರ ಏಳಿಗೆಗಾಗಿ ಹಲವು ಗ್ಯಾರಂಟಿ ಯೋಜನೆಗಳ ಭರವಸೆ ಕೊಟ್ಟಿತ್ತು ಮತ್ತು ಈಗ ಜಾರಿಗೊಳಿಸುವ ಪ್ರಯತ್ನದಲ್ಲಿದೆ. ನೀನೂ ಬಡವನಲ್ಲವೇ ಎನ್ನುತ್ತಾ ಅವನನ್ನೂ ಬಡವನಾಗಿಸಲು ಪ್ರಯತ್ನಿಸಿದೆ.

ನೋಡ್ಯಕ್ಕ ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ತಿಂಗಳಿಗೆ, ರಾಜ್ಯದೊಳಗೆ ಎಲ್ಲೇ ಪ್ರಯಾಣಿಸಿದರೂ ಬಸ್ಸು ಪ್ರಯಾಣ ಉಚಿತ, ವಿದ್ಯುತ್ ಉಚಿತ, ತಲೆಗೆ ಹತ್ತು ಕೇಜಿ ಅಕ್ಕಿ ಉಚಿತ, ಪದವೀಧರರಿಗೆ ತಿಂಗಳಿಗೆ ಮೂರು ಸಾವಿರ ಭತ್ಯೆ ಅಂತೆ. ಇದು ನನಗೆ ಸಿಕ್ಕುತ್ತಾ? ಇದರಿಂದ ನನಗೇನಾದರೂ ಅನುಕೂಲ ಇದೆಯಾ ಎಂದು ನನ್ನನ್ನು ಜೋರಿನಿಂದ ಪ್ರಶ್ನಿಸಿದ. ಸಿಕ್ಕದೆ ಏನು, ನಿನ್ನ ಅಮ್ಮನಿಗೂ ಅಕ್ಕನಿಗೂ ಬೇರೆಬೇರೆ ಮನೆ ಮಾಡಿದ್ರೆ ನಾಲ್ಕು ಸಾವಿರ ಸಿಗಬಹುದು ಅಂತ ಲೆಕ್ಕ ಹಾಕಿ ಹೇಳಿದೆ. ನಿಮ್ಮ ತಲೆ, ನನಗೆ ಹುಡುಗಿಯೊಂದು ಸಿಕ್ಕಿ ನಾನೊಬ್ಬ ಸಂಸಾರಿಯಾಗಿರುತ್ತಿದ್ದರೆ ನನ್ನ ಹೆಂಡತಿಗೂ ಎರಡು ಸಾವಿರ ರೂಪಾಯಿ, ಅಕ್ಕಿ, ಇನ್ನಿತರ ಸವಲತ್ತುಗಳು ಸಿಗುತ್ತಿರಲಿಲ್ಲವಾ? ಈಗ ನೋಡಿ ನಾನು ಅವಿವಾಹಿತನಾದ ಕಾರಣಕ್ಕೆ ನಂಗೆ ಎಷ್ಟು ಲಾಸ್ ಆಯಿತು ಅಂತ ಅವನ ಸಮಸ್ಯೆಯನ್ನು ಬಿಡಿಸಿ ಹೇಳಿದ. ಅದ್ಕೇ ನಾನೇನು ಮಾಡ್ಬೇಕೀಗ ಅಂತ ಅವನನ್ನೇ ಕೇಳಿದೆ. ಒಂದು ವಧುವಿದ್ದರೆ ಹೇಳಿ ಅಂತ ಮೂರು ವರ್ಷದಿಂದ ಗೋಗರೆಯುತ್ತಿದ್ದೇನೆ ಅಕ್ಕನಾಗಿ ತಮ್ಮನಿಗೆ ಒಂದು ಹುಡುಗಿ ನೋಡಲು ಆಗಿಲ್ಲವಲ್ಲಾ ಅಂತ ನನ್ನನ್ನು ದೂಷಿಸಿದ. ಈಗ ಈ ಯೋಜನೆಗಳು ಜಾರಿಯಾಗಲು ಇರುವ ಗ್ಯಾಪಲ್ಲಿ ರಪ್ಪ ಒಂದು ಹುಡುಗಿ ಹುಡ್ಕಿ ಮದ್ವೆ ಆಗು ಅಂತ ಸಲಹೆ ಕೊಟ್ಟೆ. ಈಗ ನಾನಾದರೂ ಇಷ್ಟು ಅಲ್ಪ ಅವಧಿಯಲ್ಲಿ ಇವನಿಗೆ ಹೆಣ್ಣು ಹುಡುಕಲು ಎಲ್ಲಿಗೆ ಹೋಗಲೀ? ದಮ್ಮಯ್ಯ ನಮ್ಮ ಉದಯನಿಗೊಂದು ಹೆಣ್ಣು ಕೊಡಿ (ಮದುವೆಗೆ) ಎಂಬುದಾಗಿ ಸಾರ್ವಜನಿಕವಾಗಿ ದಮ್ಮಯ್ಯ ಹಾಕುವುದೊಂದೇ ನನಗೆ ಉಳಿದಿರುವ ದಾರಿ.

ಉದಯ ಹೇಳಿದ್ದರಲ್ಲೂ ಲಾಜಿಕ್ ಇದೆ ಅಲ್ವಾ. ಎಲ್ಲಾರ ಕಷ್ಟ ಅರಿತ ಸರ್ಕಾರ ಅವಿವಾಹಿತರ ಸಂಕಷ್ಟವನ್ನೂ ಒಂಚೂರು ಅರ್ಥಮಾಡಿಕೊಳ್ಳಬೇಕಿತ್ತು. ಸಾಮಾನ್ಯ ಹುಡುಗರಿಗೆ, ಕೃಷಿಕರಿಗೆ, ಹಳ್ಳಿಯಲ್ಲಿ ನೆಲೆಸಿರುವವರಿಗೆ ಮದುವೆಗೆ ಹುಡುಗಿ ಸಿಕ್ಕುತ್ತಿಲ್ಲಾ ಎಂಬ ಬೊಬ್ಬೆಯನ್ನು ಕೇಳುತ್ತಲೇ ಬಂದಿರುವಾಗ ಅವರೂ ಈ ನಿಟ್ಟಿನಲ್ಲಿ ಬಡವರ ಸಾಲಿಗೆ ಬರುತ್ತಾರೆ ಎಂಬುದೇ ಅವನ ಸ್ಟ್ರಾಂಗ್ ವಾದ. ಇಷ್ಟೆಲ್ಲ ಸ್ಕೀಂಗಳನ್ನು ಯೋಜಿಸಿರುವ ಸರ್ಕಾರ ಅವಿವಾಹಿತ ಗಂಡುಗಳ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತೋರಿದೆ ಎಂಬುದನ್ನು ಒತ್ತಿಒತ್ತಿ ಹೇಳಿದ. ಅವನ ಮಾತುಗಳು ನನ್ನ ಮೇಲೆ ಪ್ರಭಾವ ಬೀರಿದವು. ಹೌದಲ್ವೇ… ಸರ್ಕಾರ ಅವಿವಾಹಿತರಿಗೆ ವಿವಾಹ ಭತ್ಯೆ ಯೋಜನೆ ತಂದಿದ್ದರೆ ಚೆಂದಾಗಿತ್ತು ಅಂತ ನನಗೆ ಅನ್ನಿಸ ಹತ್ತಿತು. ಅಲ್ಲ ಮಾರಾಯ ಚುನಾವಣಾ ಪೂರ್ವ ಪ್ರಣಾಳಿಕೆ ತಯ್ಯಾರಿ ವೇಳೆ ನೀನು ಪಕ್ಷಗಳ ಮುಂದೆ ಅವಿವಾಹಿತರ ಕಷ್ಟ ತೋಡಿಕೊಳ್ಳಬೇಕಿತ್ತು. ಈ ಗ್ಯಾರಂಟಿ ಪಕ್ಷದ ಮುಂದೆ ಸ್ವಲ್ಪ ಗಮನಹರಿಸುವಂತೆ ಅವಿವಾಹಿತರ ಸಂಘವು ಸಂಘಟಿತ ಪ್ರಯತ್ನ ಮಾಡಬೇಕಿತ್ತು ಅಂತ ಅವನ ಬಾಯಿ ಮುಚ್ಚಿಸಲು ಪ್ರಯತ್ನಿಸಿದೆ. ಆದರೂ ಅವನು ಎತ್ತಿದ ಪಾಯಿಂಟ್ ಸರಿ ಉಂಟಲ್ವಾ. ಅವಿವಾಹಿತ ಗಂಡಸರಿಗೆ ‘ವಿವಾಹ ಭತ್ಯೆ’ ಅಂತ ಪ್ಲಾನ್ ಮಾಡ್ತಿದ್ದರೆ ವರ್ಕೌಟ್ ಆಗ್ತಿತ್ತೋ ಏನೋ…. ವಿವಾಹ ಭತ್ಯೆ ಅಂತ ತಿಂಗಳಿಗೆ ಎರಡೋ… ಮೂರೋ ಸಾವಿರ ಕೊಡುತ್ತಿದ್ದರೆ, ಅದನ್ನು ಕಂಡಾದರೂ ಯಾವುದಾದರೂ ಹುಡುಗಿ ಒಲಿಯುತ್ತಿದ್ದಳೋ ಏನೋ ಎಂಬುದು ಅವನ ದೂರದ ಆಸೆ. ಅವನ ಆಸೆ ನಗಣ್ಯ ಅಂತ ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ.

ಮುಂದುವರಿದು ಮಾತನಾಡಿದ ಅವ ಹೇಳುತ್ತಾ ಹೋದ, “ಅವಿವಾಹಿತ ಗಂಡಸರನ್ನು ಕಡೆಗಣಿಸಿದೆ ಸರ್ಕಾರ, ಈಗ ಮದುವೆ ಆಗದೆ ನೋಡಿ ನನಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಲಾಸ್, ತಿಂಗಳಿಗೆ ಹತ್ತು ಕೇಜಿ ಅಕ್ಕಿ ಲಾಸ್….. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಜಾರಿಗೆ ಬರುವ ವೇಳೆ ನನಗೆ ಮದುವೆ ಆಗಲೇ ಬೇಕು” ಅಂತ ಹೇಳಿ ಫೋನ್ ಕಟ್ ಮಾಡಿದ. ಅಲ್ಲ ಹದಿನೈದು ದಿನದಲ್ಲಿ ಮದುವೆ ಆಗಬೇಕೆಂದರೆ, ಅದೂ ಸಹ ಸಂಪ್ರದಾಯ ಬದ್ಧವಾಗಿ ಹುಡುಗಿ ಹುಡುಕಿ……. ಅವನಿಗೆ ಜಾತಿಯ ಹುಡುಗಿಯೇ ಬೇಕಂತೆ. ನೀನು ಎಂತ ಮಾರಾಯ, ಜಾತಿ ಹುಡುಗಿಯೇ ಬೇಕು ಅಂದ್ರೆ ಕಷ್ಟ ಉಂಟು. ನಮ್ಮದು ಜಾತ್ಯತೀತ ರಾಷ್ಟ್ರ ಅಲ್ಲವೋ ಅನ್ನುತ್ತಾ ಸಮಾಜವಾದ ಮಾತನಾಡಿದೆ. ನೀವೆಂತ ಹೇಳ್ತೀರಿ….. ಜಾತ್ಯತೀತತೆ ಅಂದರೆ ಅತೀ ಜಾತೀಯತೆ ಅಂತ. ಈಗ ನೋಡೀ……. ಪ್ರತಿ ಜಾತಿಯವರು ನಮಗೆ ಎಮ್ಮೆಲ್ಯೇ ಸೀಟು ಬೇಕು, ನಮ್ಮ ಜಾತಿಗೆ ಮಂತ್ರಿ ಬೇಕು ಅಂತ ಕೇಳುದಿಲ್ವಾ ಅನ್ನುತ್ತಾ ಅವನ ತಲೆಬಿಸಿ ನಡುವೆಯೂ ನನಗೆ ಜಾತ್ಯತೀತತೆಯ ಡೆಫಿನಿಶನ್ ಹೇಳಿಕೊಟ್ಟ.

ಈ ನಡುವೆ ನಮ್ಮ ಈ ‘ಗ್ಯಾರೆಂಟಿ’ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಅವನು ಇನ್ನೊಂದು ಕಂಡೀಶನ್ ಹಾಕಿದ್ದಾನೆ. ಮೊದಲೆಲ್ಲ ತುಂಬ ವಯಸ್ಸಿನ ಅಂತರ ಇರುವ ಹುಡುಗಿ ಬೇಡ ಅಂತಿದ್ದ. ಈಗ ಮಾತ್ರ 2022 -23ರ ಬ್ಯಾಚಿನ ಪದವೀಧರ ಹುಡುಗಿಯೇ ಆಗಬೇಕೂಂತ ಹಠ ಹಿಡಿಯುತ್ತಿದ್ದಾನೆ. ನಿರುದ್ಯೋಗಿಗಳಿಗೆ ಸಿಗುವ ಮೂರು ಸಾವಿರ ಸಿಕ್ಕರೆ ಅವಳ ಖರ್ಚುವೆಚ್ಚ ಅದರಲ್ಲಿ ಹೋದೀತು ಅಂತೆ. ಜಾಸ್ತಿ ಲೆಕ್ಕ ಹಾಕ್ಬೇಡ ಮಾರಾಯ, ನೀನೇನಾದರೂ ಹೇಳಿದರೆ, ಅವಳಿಗೇನಾದರೂ ಕಿರಿಕಿರಿಯಾದರೆ ಎದ್ದು ನಡೆದಾಳು. ಬಸ್ಸ್ ಸಹ ಫ್ರೀ ಅಂದೆ.

ಈ ಉದಯನ ಕತೆಯಂತೆ ಎಲ್ಲಿ ಹೋದರೂ ಈಗ ಹೊಸ ಸರ್ಕಾರ ಮತ್ತು ಅದರ ಗ್ಯಾರಂಟಿಯದ್ದೇ ಮಾತು. ತಪ್ಪಿದರೆ ಮಳೆ ಯಾಕೆ ಇನ್ನೂ ಬಂದಿಲ್ಲ, ಈ ಉರಿಬಿಸಿಲನ್ನು ಎಷ್ಟು ಸಮಯಾಂತ ತಡ್ಕೊಳ್ಳೂದೂಂತ ಜನರ ಮಾತು. ಮೊನ್ನೆ ನಮ್ಮ ಸಂಬಂಧಿಕರ ಮೆಹೆಂದಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿಗೆ ಬಂದಿದ್ದ ನಮ್ಮೊಬ್ಬ ದೊಡ್ಡಪ್ಪನ ಮಗ ಅಣ್ಣ ಅಪರೂಪದಲ್ಲಿ ಕಂಡ ನನ್ನ ಹತ್ತಿರ ಕುಳಿತು ಮಾತನಾಡುತ್ತಾ ಮಾತನ್ನು ಕರೆಂಟ್ ಅಪೇರ್ಸ್‌ಗೆ ತಿರುಗಿಸಿದರು. ನೀನೇನೇ ಹೇಳು, ಈ ಸರ್ಕಾರ ಗಂಡಸರಿಗೆ ಅನ್ಯಾಯ ಮಾಡಿದೆ ಅಂತ ಜೋರಲ್ಲಿ ಚರ್ಚೆಗೆ ನಾಂದಿ ಹಾಡಿದರು. ಗಂಡಸರಿಗಾದ ಅನ್ಯಾಯ ಏನು ಎಂಬುದಾಗಿ ಅವರನ್ನು ಪ್ರಶ್ನಿಸಿದೆ. ನೋಡು ಎರಡು ಸಾವಿರ ರೂಪಾಯಿ ಮನೆ ಯಜಮಾನಿಗೆ, ವಿದ್ಯುತ್ ಮನೆಗೆ, ಅಕ್ಕಿ ಸಂಸಾರಕ್ಕೆ, ಉಚಿತ ಬಸ್ ಟಿಕೆಟ್ ಮಹಿಳೆಯರಿಗೆ ಮಾತ್ರ, ನಮಗೇನಿದೆ ಎಂದು ಪ್ರಶ್ನಿಸಿದರು. ಸುಮ್ಮನೆ ಅವರ ಮುಖ ನೋಡಿ ಕುಳಿತೆ. ನೋಡು ಈಗ ನಾನು ನನ್ನ ಹೆಂಡತಿ ಬಸ್ಸಲ್ಲಿ ಹೋಗಬೇಕಾದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು. ಅಂತ ಸಂದರ್ಭದಲ್ಲಿ ನಿಮಗೆ ಟಿಕೆಟ್ ತಕೊಂಡ್ರಾಯ್ತು ಅಂತ ಪರಿಹಾರ ಸೂಚಿಸಿದೆ. ಹಾ….. ಮೊದಲೇ ನನ್ನ ಹೆಂಡತಿ ಘಟವಾಣಿ, ಇನ್ನಂತೂ ಕೇಳುವುದೇ ಬೇಡಾ. ಎಲ್ಲಾದರೂ ಹೊರಡುವ ವೇಳೆ ಮುಚ್ಚಿಕೊಂಡು ಮನೆಯಲ್ಲಿ ಬಿದ್ದಿರಿ, ನಾನೂ ಮಗಳೂ ಹೋಗುತ್ತೇವೆ ಅಂತ ನನ್ನನ್ನು ಮೂಲೆ ಗುಂಪು ಮಾಡುವುದು ಸಹ ಗ್ಯಾರಂಟಿ ಅಂದ್ರು. ಮೊದಲೇ ಅವಳಿಗೆ ತಿರುಗಾಡುವುದು ಅಂದರೆ ಇಷ್ಟ. ಇನ್ನು ಧರ್ಮಾರ್ಥ ಪ್ರಯಾಣ ಅಂದರೆ ಕೇಳಬೇಕೇ….. ಗಂಜಿ ಕುಡೀಬೇಕಿದ್ದರೆ ನಾನೇ ಬೇಯಿಸಿಕೊಳ್ಳಬೇಕೇನೋ ಇನ್ಮುಂದೆ ಅಂತ ಅವರ ವ್ಯಥೆಯನ್ನು ತೋಡಿಕೊಂಡರು. ಹಾಗೆಲ್ಲ ಏನೂ ಆಗುದಿಲ್ಲ ಅಣ್ಣಾ ಈ ರಣರಣ ಬಿಸಿಲಿಗೆ ಯಾರು ತಿರುಗಾಡಲು ಹೋಗ್ತಾರೇಂತ ಅವರನ್ನು ಸಮಾಧಾನಿಸಲು ಪ್ರಯತ್ನಿಸಿದೆ.

ಅಲ್ಲ ಈ ಸರ್ಕಾರ ಗಂಡಸರಿಗೂ ಏನಾದರೂ ಉಚಿತ ಕೊಡಬಾರದಿತ್ತಾ. ಬಡ ಗಂಡಸರು ಮೈಮುರಿದು ಬಿಸಿಲು ಮಳೆ ಲೆಕ್ಕಿಸದೆ ಕೆಲಸ ಮಾಡುವಾಗ ನಮಗೂ ಒಂಚೂರು ನಿರಾಳ ಆಗುವಂತದ್ದು ಏನಾರೂ ಬೇಡ್ವಾ… ಅವರು ಖುಷಿಯಿಂದ ಇರ್ಬಾರ್ದಾ? ಆಧಾರ್ ಕಾರ್ಡ್ ತೋರಿಸಿ ಒಂದೊಂದು ಕ್ವಾಟ್ರು ನಮ್ಮ ‘ಗಂಡಸರ ತವರಿನಲ್ಲಿ’ ಪಡೆದುಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದರೆ ಏನಾಗ್ತಿತ್ತು. ಸಂಜೆ ವೇಳೆ ಮತ್ತು ರಜಾ ದಿನಗಳಲ್ಲಿ ಒಂಚೂರು ಹಾಕ್ಕೊಂಡ್ರೆ ಮನಸ್ಸಿಗೆ ಉಲ್ಲಾಸ, ಮೈ ಹಗುರವಾಗುತ್ತೆ ಗೊತ್ತಾ ಅಂತಾ ಹೇಳಿದ್ರು. ಇಷ್ಟೆಲ್ಲ ಆರ್ಥಿಕ ಹೊರೆ ಹೊರುವ ಸರ್ಕಾರಕ್ಕೆ ಗಂಡಸರಿಗೆ ಎರಡು ದಿನಕ್ಕೊಂದೋ ವಾರಕ್ಕೆ ಇಂತಿಷ್ಟೂ ಅಂತ ಕ್ವಾಟ್ರು ಕೊಡ್ತಿದ್ದರೆ ಏನಾಗ್ತಿತ್ತು? ಇದು ಪುರುಷರ ವಿರೋಧಿ ಸರ್ಕಾರ ಅಂತ ಮಾತು ಮುಗಿಸಿದರು.

ಅವತ್ತು ಕೊರೋನಾ ಸಮಯದಲ್ಲಿ ಬೊಕ್ಕಸ ತುಂಬಿಸಲು ನೆರವಾದದ್ದು ಇದೇ ಕ್ವಾಟ್ರು ಪ್ರಿಯರು. ಆ ಸಂದರ್ಭದಲ್ಲಿ ನಮ್ಮನ್ನು ಕುಡುಕರು ಅನ್ನಬಾರದು ಇಕಾನಮಿ ವಾರಿಯರ್ಸ್ ಅಂತನ್ನಬೇಕೆಂಬ ಒಕ್ಕೊರಲಿನ ಬೇಡಿಕೆ ಇಟ್ಟಿದ್ದರು. ಬಹುಶಃ ಇಂತಹ ಇಕಾನಮಿ ವಾರಿಯರ್ಸ್‌ಗೆ ಉಚಿತ ಕೊಟ್ಟು ಅವರನ್ನು ಅವಮಾನಿಸುವುದು ಸರ್ಕಾರಕ್ಕೆ ಸರಿ ಎಂದೆನಿಸಿರಲಿಕ್ಕಿಲ್ಲ. ಹಾಗಾಗಿ ಮನೆ ಯಜಮಾನಿಗೆ ಆರ್ಥಿಕ ಸಹಾಯಕ್ಕೆ ಮುಂದಾಗಿರಬಹುದು.

ಇತ್ತ ಖಜಾನೆ ತುಂಬಿಸಲು ಹಲವು ಮಾರ್ಗಗಳನ್ನು ಹಿಡಿದಿರುವ ಸರ್ಕಾರ ಇಕಾನಮಿ ವಾರಿಯರ್ಸ್ ಮೊರೆ ಹೋಗಿದ್ದು, ಬಾಟಲಿಗೆ ಹತ್ತಿಪ್ಪತ್ತು ರೂಪಾಯಿ ಏರಿಸಿದೆಯಂತೆ. ನಮಗೇನೂ ಉಚಿತವಿಲ್ಲ ಎಂಬ ಅಸಮಾಧಾನದಿಂದಿದ್ದ ಕ್ವಾಟ್ರು ಪ್ರಿಯರು ಈಗಾಗಲೇ ಹಾಹಾಕಾರ ಹಾಕುತ್ತಿದ್ದಾರಂತೆ!

ಚಂದ್ರಾವತಿ ಬಡ್ಡಡ್ಕ

ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಇವರು ಈಗ ಸ್ವತಂತ್ರವಾಗಿ ಮಾಧ್ಯಮಗಳಲ್ಲಿ ಅಂಕಣ ಬರವಣಿಗೆ, ಅನುವಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ, ಅರೆಭಾಷೆ, ಹಾಗೂ ತುಳುವಿನ ಅವರ ಲಘು ಬಿಗು ಬರಹಗಳು ಓದುಗರ ಅಪಾರ ಮೆಚ್ಚುಗೆಯನ್ನು ಗಳಿಸಿವೆ. 

ಇದನ್ನೂ ಓದಿಬಡವರ ಬಗ್ಗೆ ಯಾಕಿಷ್ಟು ದ್ವೇಷ?!

 

Related Articles

ಇತ್ತೀಚಿನ ಸುದ್ದಿಗಳು