ಅನಗತ್ಯ ಹಸ್ತಕ್ಷೇಪ ಮಾಡುವುದು ಒಕ್ಕೂಟ ವ್ಯವಸ್ಥೆಗೆ ಶೋಭೆಯಲ್ಲ – ತಮಿಳುನಾಡಿಗೆ ಸಿಎಂ ತಿರುಗೇಟು

ಬೆಂಗಳೂರು : ತಮಿಳುನಾಡು (Tamil Nadu) ರಾಜಕೀಯ ನಾಯಕರ ಹೇಳಿಕೆಗಳಿಗೆ ಕರ್ನಾಟಕದ (Karnataka) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತೀವ್ರ ಪ್ರತಿಕ್ರಿಯೆ ನೀಡಿದ್ದು, ರಾಜ್ಯಗಳ ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವುದು ಒಕ್ಕೂಟ ವ್ಯವಸ್ಥೆಗೆ ಶೋಭೆಯಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ನಮ್ಮ ದೇಶದಲ್ಲಿ ಒಕ್ಕೂಟ ವ್ಯವಸ್ಥೆ ಇದೆ. ಹೀಗಿರುವಾಗ ಯಾವುದೇ ಒಂದು ರಾಜ್ಯ ಮತ್ತೊಂದು ರಾಜ್ಯದ ಆಡಳಿತ ಅಥವಾ ವಿಚಾರಗಳಲ್ಲಿ ಮೂಗು ತೂರಿಸುವುದು ಸರಿಯಲ್ಲ. ಪನ್ನೀರ್ ಸೆಲ್ವಂ ಆಗಲಿ ಅಥವಾ ಬೇರೆ ಯಾರೇ ಆಗಲಿ, ಪ್ರತಿಯೊಬ್ಬರಿಗೂ ಕನಿಷ್ಠ ರಾಜಕೀಯ ಸಂಸ್ಕೃತಿ ಮತ್ತು ಸೌಜನ್ಯ ಇರಬೇಕು. ತಮಿಳುನಾಡಿನ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಲ್ಲಿ ನಾನು ಯಾವುದೇ ರೀತಿಯಲ್ಲೂ ಭಾಗಿಯಾಗಲು ಬಯಸುವುದಿಲ್ಲ, ಹಸ್ತಕ್ಷೇಪ ಮಾಡುವುದೂ ಇಲ್ಲ ಎಂದಿದ್ದಾರೆ.

ಪ್ರತಿಯೊಂದು ರಾಜ್ಯಕ್ಕೂ ಅದರದ್ದೇ ಆದ ನೂರಾರು ಸವಾಲುಗಳು ಮತ್ತು ಸಮಸ್ಯೆಗಳಿರುತ್ತವೆ. ಆಯಾ ರಾಜ್ಯದ ನಾಯಕರು ತಮ್ಮ ಗಡಿಯಲ್ಲಿನ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ನಮ್ಮ ರಾಜ್ಯದ ಹಿತಾಸಕ್ತಿ, ಅಸ್ಮಿತೆ ಮತ್ತು ಪಾವಿತ್ರ್ಯತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಅವರು ತಮ್ಮ ಕೆಲಸವನ್ನು ಮಾಡಲಿ, ನಾವು ನಮ್ಮ ಕೆಲಸವನ್ನು ಮಾಡುತ್ತೇವೆ ಎಂದು ಶಿವಕುಮಾರ್ ನೇರವಾಗಿಯೇ ತಿರುಗೇಟು ನೀಡಿದ್ದಾರೆ.

ಇದೇ ವೇಳೆ, ಈ ವಿಚಾರವಾಗಿ ತನಿಖೆಗೆ ಆಗ್ರಹಿಸಿರುವ ತಮಿಳುನಾಡು ಸಿಎಂ ವಿಜಯ್ ಅವರ ಹೇಳಿಕೆಯ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಅದು ಅವರ ಸಾಮಾನ್ಯ ರಾಜಕೀಯ ಮಾತು ಅಷ್ಟೇ. ಅವರು ಅವರ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲಿ, ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ಅನಗತ್ಯವಾಗಿ ಬೇರೆ ರಾಜ್ಯದ ವಿಷಯಗಳಲ್ಲಿ ತಲೆಹಾಕುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು