Friday, June 14, 2024

ಸತ್ಯ | ನ್ಯಾಯ |ಧರ್ಮ

ವಿಪಕ್ಷ ನಾಯಕನ ಗೊಂದಲ ಮುಚ್ಚಿಕೊಳ್ಳಲು ಬಿಜೆಪಿ ಅನಗತ್ಯ ರಾಜಕೀಯ : ಸಚಿವ ಕೃಷ್ಣಭೈರೇಗೌಡ

ಬಿಜೆಪಿಯವರ ತಮ್ಮ ಮನೆಯ ಹುಳುಕನ್ನ ಮುಚ್ಚಿಕೊಳ್ಳಲು ಸಣ್ಣಪುಟ್ಟ ವಿಷಯಗಳಲ್ಲೂ ರಾಜಕೀಯ ಬೇರೆಸ್ತಿದ್ದಾರೆ. ಅವರು ಮೊದಲು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಕಲಬುರಗಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯವರು ಹತಾಶರಾಗಿದ್ದಾರೆ. ನಮ್ಮ ಸರ್ಕಾರ ರಾಜ್ಯದ ಜನರ ನಾಡಿ ಮಿಡಿತ ಅರಿತು ಕೆಲಸ ಮಾಡುತ್ತಿದೆ. ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿ ಎರಡೂವರೆ ತಿಂಗಳಾದ್ರು ವಿಧಾನಸಭೆ ಮತ್ತು ಪರಿಷತ್ ಎರಡೂ ಕಡೆಗಳಲ್ಲಿ ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳಲು ಬಿಜೆಪಿಗೆ ಆಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧದ ನಿಲುವನ್ನು ಬಿಜೆಪಿ ತಗೆದುಕೊಂಡಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಸರ್ಕಾರದ ಧ್ಯೆಯೋದ್ದೇಶ ಅರಿತು ಉತ್ತಮ ಆಡಳಿತ ನೀಡಬೇಕು
ಇನ್ನು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾವಾರು ಕಂದಾಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಸಚಿವ ಕೃಷ್ಣ ಬೈರೇಗೌಡರು, ಕಂದಾಯ ಇಲಾಖೆಯು ಸರ್ಕಾರದ‌ ಮಾತೃ ಇಲಾಖೆಯಾಗಿದ್ದು, ಇಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಸಹ ಮಾತೃ ಹೃದಯಿಗಳಾಗಿರಬೇಕು. ಸರ್ಕಾರದ ಉದ್ದೇಶ ಮತ್ತು ಧ್ಯೆಯೋದ್ದೇಶಗಳನ್ನು ಅರಿತು ಜನರಿಗೆ ಉತ್ತಮ ಆಡಳಿತ ನೀಡಬೇಕು ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಭಾಗದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

“ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ಅಡಳಿತದಲ್ಲಿ ಬದಲಾವಣೆ ತರಬೇಕು. ಸರಳೀಕರಣಕ್ಕೆ ಆದ್ಯತೆ ನೀಡಬೇಕು. ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ-ಸಿಬ್ಬಂದಿಗಳು ತಂಡದ ರೂಪದಲ್ಲಿ ಕಾರ್ಯನಿರ್ವಹಿಸಬೇಕು ಎಂದ‌ ಸಚಿವರು, ಕಂದಾಯ ಸಚಿವನಾದ ಮೇಲೆ ಈಗಾಗಲೆ ಬೆಳಗಾವಿ‌ ವಿಭಾಗದ ಪ್ರಗತಿ ಪರಿಶೀಲನೆ ನಡೆಸಿದ್ದು, ಇಂದು‌ ಇಲ್ಲಿ (ಕಲಬುರಗಿ) ನಡೆಸಲಾಗುತ್ತಿದೆ. ಮುಂದೆ ಜಿಲ್ಲಾವಾರು ಸಹ ಪ್ರಗತಿ ಪರಿಶೀಲನೆ ಮಾಡುವುದಾಗಿ ಹೇಳಿದರು.

ಕಷ್ಟದಲ್ಲಿದ್ದವರಿಗೆ ಪರಿಹಾರ ವಿತರಣೆ ಮಾಡುವುದು ಒಳ್ಳೆಯದ್ದೆ. ನೊಂದವರಿಗೆ ಸರ್ಕಾರ ಸಹಾಯ ಹಸ್ತ ಚಾಚುವುದು ಉತ್ತಮ. ಆದರೆ ಇದನ್ನು ದುರಪಯೋಗ ವಾಗಬಾರದು ಎಂಬುದು ನಮ್ಮ‌ ಕಳಕಳಿಯಾಗಿದೆ. ವಿಪತ್ತು ನಿರ್ವಹಣೆ ಹೆಸರಿನಲ್ಲಿ ಹಣ ದುರಪಯೋಗವಾದಲ್ಲಿ ಅದು ಕೆಟ್ಟ ಆಡಳಿತಕ್ಕೆ ಅವಕಾಶ ಮಾಡಿಕೊಡುತ್ತದೆ. ಪರಿಹಾರ ವಿತರಣೆಯ ಕೆಲವೊಂದು ಪ್ರಕರಣದಲ್ಲಿ ಸ್ಯಾಟಲೈಟ್ ಫೋಟೋ ಗಳನ್ನು ಪರೀಕ್ಷಿಸಿ ಜಿಲ್ಲಾಧಿಕಾರಿಗಳು ಪರಿಹಾರ ನೀಡಬೇಕು ಎಂದು ಕಂದಾಯ ಸಚಿವ‌ ಕೃಷ್ಣ ಬೈರೇಗೌಡ ತಿಳಿಸಿದರು.

ವಿಪತ್ತು ನಿರ್ವಹಣೆ ಕೆಲಸ ವಿಳಂಬ ಸಲ್ಲ
ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ 2020-21ನೇ ಸಾಲಿನ ನೆರೆ ಹಾವಳಿಯ ಕಾಮಗಾರಿಗಳು ಇನ್ನು ಪ್ರಗತಿಯಲ್ಲಿರುವುದಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿ, ರಸ್ತೆ, ಶಾಲೆ, ಸೇತುವೆ ದುರಸ್ತಿಗೆ ವಿಪತ್ತು ನಿರ್ವಹಣೆಯಲ್ಲಿ 1-2 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಮಳೆಗಾಲ ಹೋಗಿ ಮತ್ತೆ ಮಳೆಗಾಲ ಬಂದರೂ ಕೆಲಸ ಇನ್ನು ಮುಗಿಯಲ್ಲ ಎಂದರೆ ಏನರ್ಥ. ನೀಡಲಾದ ಅನುದಾನ ಉದ್ದೇಶ ಈಡೇರುತ್ತಾ ಎಂದು ಡಿಸಿಯನ್ನು ತರಾಟೆಗೆ ತೆಗೆದುಕೊಂಡರು.

Related Articles

ಇತ್ತೀಚಿನ ಸುದ್ದಿಗಳು