ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಭದ್ರತೆಯು ಗಾಳಿಯಲ್ಲಿನ ದೀಪದಂತಾಗಿದೆ. ಸೋಮವಾರ ಸಂಜೆ ಜೆಸ್ಸೋರ್ ಜಿಲ್ಲೆಯಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿ ದಾರುಣವಾಗಿ ಹತ್ಯೆಗೀಡಾಗಿದ್ದಾರೆ. ಈ ಘಟನೆಯ ಜೊತೆಗೆ ಝೆನೈಡಾ ಜಿಲ್ಲೆಯಲ್ಲಿ ವಿಧವೆಯೊಬ್ಬರ ಮೇಲೆ ನಡೆದ ಅಮಾನವೀಯ ಕೃತ್ಯ ಸ್ಥಳೀಯವಾಗಿ ಭೀತಿ ಮೂಡಿಸಿದೆ.
ಪತ್ರಕರ್ತ ರಾಣಾ ಪ್ರತಾಪ್ ಹತ್ಯೆ: ಜೆಸ್ಸೋರ್ ಜಿಲ್ಲೆಯ ಮಣಿರಾಮಪುರ ಉಪಜಿಲ್ಲೆಯ ಕೊಪಾಲಿಯಾ ಬಜಾರ್‌ನಲ್ಲಿ ಈ ಘಟನೆ ನಡೆದಿದೆ. 45 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರು ಐಸ್ ಫ್ಯಾಕ್ಟರಿ ಮಾಲೀಕರಾಗಿದ್ದರು ಮತ್ತು ‘ದೈನಿಕ್ ಬಿಡಿ ಖಬರ್’ ಎಂಬ ಸ್ಥಳೀಯ ಪತ್ರಿಕೆಯ ಕಾರ್ಯಕಾರಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು.
ಸೋಮವಾರ ಸಂಜೆ ಮೋಟಾರ್‌ಸೈಕಲ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರನ್ನು ಫ್ಯಾಕ್ಟರಿಯಿಂದ ಹೊರಗೆ ಕರೆದು, ಸಮೀಪದ ಸಂಧಿಯೊಂದಕ್ಕೆ ಕರೆದೊಯ್ದು ತಲೆಗೆ ಸತತವಾಗಿ ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ಪ್ರತಾಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರ ತಲೆಯಲ್ಲಿ ಏಳು ಬುಲೆಟ್‌ಗಳು ಪತ್ತೆಯಾಗಿವೆ.
ಮತ್ತೊಂದು ಆಘಾತಕಾರಿ ಘಟನೆಯಲ್ಲಿ, ಝೆನೈಡಾ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿಧವೆಯೊಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯನ್ನು ಮರಕ್ಕೆ ಕಟ್ಟಿಹಾಕಿ, ಕೂದಲನ್ನು ಕತ್ತರಿಸಿ ಚಿತ್ರಹಿಂಸೆ ನೀಡಲಾಗಿದೆ. ಕಳೆದ ಎರಡು ವರ್ಷಗಳಿಂದ ಆರೋಪಿಗಳು ಅವರಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅವರ ಮೇಲಿನ ದೌರ್ಜನ್ಯ ದೃಢಪಟ್ಟಿದೆ.
