Home ಇನ್ನಷ್ಟು ಕೋರ್ಟು - ಕಾನೂನು ಉತ್ತರ ಪ್ರದೇಶ ಸರ್ಕಾರ ಗೂಂಡಾ ಕಾಯ್ದೆಯನ್ನು ದಬ್ಬಾಳಿಕೆಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ: ಅಲಹಾಬಾದ್ ಹೈಕೋರ್ಟ್ ಕಳವಳ

ಉತ್ತರ ಪ್ರದೇಶ ಸರ್ಕಾರ ಗೂಂಡಾ ಕಾಯ್ದೆಯನ್ನು ದಬ್ಬಾಳಿಕೆಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ: ಅಲಹಾಬಾದ್ ಹೈಕೋರ್ಟ್ ಕಳವಳ

0

ಉತ್ತರ ಪ್ರದೇಶ ಸರ್ಕಾರವು ನ್ಯಾಯಾಲಯಗಳ ನಿರಂತರ ಎಚ್ಚರಿಕೆಗಳ ನಡುವೆಯೂ ‘ಯುಪಿ ಕಂಟ್ರೋಲ್ ಆಫ್ ಗೂಂಡಾಸ್ ಆಕ್ಟ್, 1970’ ಅನ್ನು ದಮನಕಾರಿ ಮತ್ತು ದಬ್ಬಾಳಿಕೆಯ ಅಸ್ತ್ರವಾಗಿ ನಿರಂತರವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅಲಹಾಬಾದ್ ಹೈಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ. ಗೋಂಡಾ ಜಿಲ್ಲಾಧಿಕಾರಿ ಜಾಹಿದ್ ಅಲಿ ಎಂಬುವವರನ್ನು ‘ಗೂಂಡಾ’ ಎಂದು ಘೋಷಿಸಿ, ಆರು ತಿಂಗಳ ಕಾಲ ಜಿಲ್ಲೆಯಿಂದ ಗಡೀಪಾರು ಮಾಡಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುವ ವೇಳೆ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಗೂಂಡಾ ಕಾಯ್ದೆಯು ಸಮಾಜಘಾತುಕರನ್ನು ನಿಯಂತ್ರಿಸುವ ಅತ್ಯಂತ ಪ್ರಬಲ ಅಸ್ತ್ರವಾಗಿದ್ದು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಸ್ಪಷ್ಟ ಭಂಗ ಉಂಟಾಗುವ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಇದನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಎಂದು ನ್ಯಾಯಾಲಯ ಪುನರುಚ್ಚರಿಸಿದೆ. ಯಾವುದೇ ವ್ಯಕ್ತಿಯ ಮೇಲಿನ ಅಪರಾಧ ಸಾಬೀತಾಗುವ ಮೊದಲೇ ಶಿಕ್ಷೆ ವಿಧಿಸುವುದು ಈ ಕಾಯ್ದೆಯ ಉದ್ದೇಶವಲ್ಲ; ನಿರಪರಾಧಿಗಳ ವಿರುದ್ಧ ಇದನ್ನು ದೌರ್ಜನ್ಯದ ಸಾಧನವಾಗಿ ಬಳಸಬಾರದು ಎಂದು ನ್ಯಾಯಾಲಯಗಳು ಪದೇಪದೇ ನೆನಪಿಸುತ್ತಿದ್ದರೂ, ಸರ್ಕಾರ ಅದೇ ಹಾದಿಯಲ್ಲಿ ಮುಂದುವರಿದಿದೆ ಮತ್ತು ಪ್ರಸ್ತುತ ಪ್ರಕರಣವು ಈ ಕಾಯ್ದೆಯ ದುರುಪಯೋಗಕ್ಕೆ ಅತ್ಯಂತ ಸ್ಪಷ್ಟ ನಿದರ್ಶನವಾಗಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಪೊಲೀಸರು ದಾಖಲಿಸಿದ್ದ ಎರಡು ಪ್ರಕರಣಗಳ ಪೈಕಿ ಒಂದರಲ್ಲಿ ಜಾಹಿದ್ ಅಲಿ ಈಗಾಗಲೇ ಖುಲಾಸೆಗೊಂಡಿದ್ದರು ಎಂಬುದನ್ನು ಗಮನಿಸಿದ ಹೈಕೋರ್ಟ್, ಖುಲಾಸೆಯಾದ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ವ್ಯಕ್ತಿಯನ್ನು ಗೂಂಡಾ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಪೊಲೀಸರಿಗೆ ಆತನ ಖುಲಾಸೆಯ ಮಾಹಿತಿ ಇದ್ದರೂ, ಜಿಲ್ಲಾಧಿಕಾರಿಗಳ ಮುಂದೆ ತಪ್ಪು ಚಿತ್ರಣ ನೀಡುವ ಉದ್ದೇಶದಿಂದಲೇ ಹಳೆಯ ಪ್ರಕರಣವನ್ನು ಪ್ರಸ್ತಾಪಿಸಲಾಗಿದೆ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ಮೇಲ್ಮನವಿ ವಿಚಾರಣೆ ನಡೆಸಿದ ಕಮಿಷನರ್ ಕೂಡ ಈ ಅಂಶವನ್ನು ಸೂಕ್ತವಾಗಿ ಪರಿಶೀಲಿಸದೆ ಆದೇಶ ಎತ್ತಿಹಿಡಿದಿರುವುದು ತಪ್ಪು ಎಂದು ತಿಳಿಸಿತು. 2020 ರಲ್ಲಿ ದಾಖಲಾದ ಒಂದೇ ಒಂದು ಹಳೆಯ ಪ್ರಕರಣದ ಆಧಾರದ ಮೇಲೆ, ಆರು ವರ್ಷಗಳ ಸುದೀರ್ಘ ಅಂತರದ ನಂತರ 2026 ರಲ್ಲಿ ಒಬ್ಬ ವ್ಯಕ್ತಿಯನ್ನು ಗೂಂಡಾ ಎಂದು ಘೋಷಿಸಿ ಗಡೀಪಾರು ಮಾಡುವುದಕ್ಕೆ ಯಾವುದೇ ತಾರ್ಕಿಕ ಸಂಬಂಧವಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಗೋಂಡಾ ಜಿಲ್ಲಾಧಿಕಾರಿ ಮತ್ತು ದೇವಿಪಟಣ ಮಂಡಲ ಕಮಿಷನರ್ ಹೊರಡಿಸಿದ್ದ ಎರಡೂ ಆದೇಶಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿತು.

You cannot copy content of this page

Exit mobile version