Home ದೇಶ ಉದ್ಘಾಟನೆಗೂ ಮುನ್ನವೇ ಬಿರುಕು ಬಿಟ್ಟು ಕುಸಿದ ಪ್ರತಿಷ್ಠಿತ ರಸ್ತೆ: ಯುಪಿಯ ‘ಡಬಲ್ ಎಂಜಿನ್’ ಸರ್ಕಾರದ ಕಾಮಗಾರಿ...

ಉದ್ಘಾಟನೆಗೂ ಮುನ್ನವೇ ಬಿರುಕು ಬಿಟ್ಟು ಕುಸಿದ ಪ್ರತಿಷ್ಠಿತ ರಸ್ತೆ: ಯುಪಿಯ ‘ಡಬಲ್ ಎಂಜಿನ್’ ಸರ್ಕಾರದ ಕಾಮಗಾರಿ ವಿರುದ್ಧ ಆಕ್ರೋಶ

0

ಲಖನೌ: ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿ ನಿರ್ಮಿಸಲಾಗುತ್ತಿರುವ ‘ರಾಮ್ ವನ್ ಗಮನ ಪಥ್’ (Ram Van Gaman Path) ರಸ್ತೆ ಉದ್ಘಾಟನೆಗೂ ಮುನ್ನವೇ ಹಲವೆಡೆ ಬಿರುಕು ಬಿಟ್ಟು ಕುಸಿದುಬಿದ್ದಿದೆ. ಮುಂದಿನ ತಿಂಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಮಾರ್ಗವನ್ನು ಲೋಕಾರ್ಪಣೆಗೊಳಿಸಬೇಕಿದ್ದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದ್ದು, ಕಾಮಗಾರಿಯ ಗುಣಮಟ್ಟ ಮತ್ತು ಭ್ರಷ್ಟಾಚಾರದ ಕುರಿತು ಯೋಗಿ ಸರ್ಕಾರದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ.

ಪ್ರಯಾಗ್‌ರಾಜ್ ಸಮೀಪದ ಶೃಂಗವೇರಪುರ ಧಾಮದ ಬಳಿ ರಸ್ತೆಯು ಭಾರೀ ಪ್ರಮಾಣದಲ್ಲಿ ಕುಸಿದಿದೆ. ಲಖನೌ-ಗಂಗಾ ಸೇತುವೆಯ ನಡುವಿನ ಕೇವಲ 100 ಮೀಟರ್ ವ್ಯಾಪ್ತಿಯಲ್ಲಿಯೇ ನಾಲ್ಕು ಪ್ರಮುಖ ಕಡೆಗಳಲ್ಲಿ ರಸ್ತೆಯು ಬಾಯ್ತೆರೆದು ಬಿರುಕು ಬಿಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗದಲ್ಲಿ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸಾಧಾರಣ ಮಳೆಗಾಲದ ಮಳೆಗೇ ನೂತನ ರಸ್ತೆ ಈ ಮಟ್ಟಕ್ಕೆ ಧ್ವಂಸವಾಗಿರುವುದನ್ನು ಕಂಡು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ಹೊರಹಾಕಿದ್ದು, ಇಡೀ ಕಾಮಗಾರಿಯ ಕುರಿತು ಉನ್ನತ ಮಟ್ಟದ ತಾಂತ್ರಿಕ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಅಯೋಧ್ಯೆಯಿಂದ ಚಿತ್ರಕೂಟದವರೆಗೆ ಪ್ರಮುಖ ಪೌರಾಣಿಕ ಮತ್ತು ಆಧ್ಯಾತ್ಮಿಕ ತಾಣಗಳನ್ನು ಬೆಸೆಯುವ ನಿಟ್ಟಿನಲ್ಲಿ ಸುಮಾರು 210 ಕಿಲೋಮೀಟರ್ ಉದ್ದದ ಈ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ರಸ್ತೆ ಕುಸಿತದ ಬಗ್ಗೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಕಾರ್ಯನಿರ್ವಾಹಕ ಎಂಜಿನಿಯರ್, ಮಳೆಯ ಕಾರಣದಿಂದ ಈ ಹಾನಿ ಉಂಟಾಗಿದೆ ಎಂದು ಸಮಜಾಯಿಷಿ ನೀಡಿದ್ದು, ಹಾಳಾದ ರಸ್ತೆಯ ಭಾಗವನ್ನು ಶೀಘ್ರವೇ ದುರಸ್ತಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

You cannot copy content of this page

Exit mobile version