ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಚಂಡಮಾರುತ ಮತ್ತು ಅಕಾಲಿಕ ಮಳೆಗೆ ಕನಿಷ್ಠ 60 ಜನರು ಬಲಿಯಾಗಿದ್ದಾರೆ. ಭದೋಹಿ, ಫತೇಪುರ್ ಮತ್ತು ಬದೌನ್ ಸೇರಿದಂತೆ ಐದು ಜಿಲ್ಲೆಗಳಲ್ಲಿ ವರುಣನ ಆರ್ಭಟಕ್ಕೆ ವ್ಯಾಪಕ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾವಾರು ಮಾಹಿತಿ ಪ್ರಕಾರ, ಭದೋಹಿಯಲ್ಲಿ 16, ಫತೇಪುರ್‌ನಲ್ಲಿ 9, ಬದೌನ್‌ನಲ್ಲಿ 5, ಚಂದೌಲಿಯಲ್ಲಿ 2 ಮತ್ತು ಸೋನ್‌ಭದ್ರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಬಿರುಗಾಳಿಯ ತೀವ್ರತೆಗೆ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ಅನೇಕ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ಒದಗಿಸುವಂತೆ ಆದೇಶಿಸಿದ್ದಾರೆ. ಮಳೆ ಮತ್ತು ಮಿಂಚಿನಿಂದ ಹಾನಿಗೊಳಗಾದ ಕುಟುಂಬಗಳಿಗೆ 24 ಗಂಟೆಯೊಳಗೆ ಪರಿಹಾರ ಕಾರ್ಯಗಳು ಪೂರ್ಣಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಭದೋಹಿ ಮತ್ತು ಬದೌನ್‌ನಲ್ಲಿ ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು. ಬದೌನ್ ಜಿಲ್ಲೆಯಲ್ಲಿ ಗುಡಿಸಲಿನ ಗೋಡೆ ಕುಸಿದು ಇಬ್ಬರು ಅಪ್ರಾಪ್ತ ಬಾಲಕಿಯರು ಮೃತಪಟ್ಟರೆ, ಮರ ಬಿದ್ದು ಟ್ರಕ್ ಚಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.
ಕಂದಾಯ ಮತ್ತು ಕೃಷಿ ಇಲಾಖೆಗಳು ವಿಮಾ ಕಂಪನಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಬೆಳೆ ಹಾಗೂ ಆಸ್ತಿ ಹಾನಿಯ ವರದಿಯನ್ನು ಸಲ್ಲಿಸುವಂತೆ ಸಿಎಂ ಆದೇಶಿಸಿದ್ದಾರೆ. ಪರಿಹಾರ ಕಾರ್ಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
