Home ವಿದೇಶ ಇಸ್ಲಾಮಾಬಾದ್‌ನಲ್ಲಿ ಅಮೆರಿಕಾ–ಇರಾನ್ ಶಾಂತಿ ಮಾತುಕತೆ ಆರಂಭ; ಲೆಬನಾನ್ ವಿಚಾರದಲ್ಲಿ ಭಿನ್ನಾಭಿಪ್ರಾಯ

ಇಸ್ಲಾಮಾಬಾದ್‌ನಲ್ಲಿ ಅಮೆರಿಕಾ–ಇರಾನ್ ಶಾಂತಿ ಮಾತುಕತೆ ಆರಂಭ; ಲೆಬನಾನ್ ವಿಚಾರದಲ್ಲಿ ಭಿನ್ನಾಭಿಪ್ರಾಯ

0

ಇಸ್ಲಾಮಾಬಾದ್: ಕೊಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯಹಾಕುವ ಉದ್ದೇಶದಿಂದ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ಮಹತ್ವದ ಶಾಂತಿ ಮಾತುಕತೆಗಳು ಆರಂಭಗೊಂಡಿವೆ.

ಈ ಮಾತುಕತೆಯಲ್ಲಿ ಇರಾನ್ ಪರವಾಗಿ ಮೊಹಮ್ಮದ್-ಬಾಘೆರ್ ಘಾಲಿಬಾಫ್ ನೇತೃತ್ವ ವಹಿಸಿದ್ದರೆ, ಅಮೆರಿಕಾ ಪರವಾಗಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾಗವಹಿಸುತ್ತಿದ್ದಾರೆ. ಪಾಕಿಸ್ತಾನ ಈ ಮಾತುಕತೆಗೆ ಮಧ್ಯಸ್ಥಿಕೆ ವಹಿಸುತ್ತಿದ್ದು, ಇಸ್ಲಾಮಾಬಾದ್‌ನ ಹೋಟೆಲ್‌ನಲ್ಲಿ ಎರಡು ದೇಶಗಳ ಪ್ರತಿನಿಧಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕುಳ್ಳಿರಿಸಿ ‘ಪರೋಕ್ಷ ಮಾತುಕತೆ’ ನಡೆಸಲಾಗುತ್ತಿದೆ.

ಈ ಮಾತುಕತೆ ನಡೆಯುತ್ತಿರುವ ಹಿನ್ನೆಲೆ, ಅಮೆರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ದಾಳಿಗಳ ಪರಿಣಾಮವಾಗಿ ತೈಲ ಬೆಲೆ ಏರಿಕೆಯಾಗಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾಕಿಸ್ತಾನದ ಪ್ರಯತ್ನದಿಂದ ಈ ವಾರದ ಆರಂಭದಲ್ಲಿ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿತ್ತು. ಆದರೆ, ಲೆಬನಾನ್ ವಿಚಾರದಲ್ಲಿ ತೀವ್ರ ಭಿನ್ನಾಭಿಪ್ರಾಯ ಉಂಟಾಗಿದೆ. ಇಸ್ರೇಲ್ ಲೆಬನಾನ್ ಮೇಲೆ ನಡೆಸುತ್ತಿರುವ ದಾಳಿಗಳನ್ನು ನಿಲ್ಲಿಸಿ, ಅದನ್ನೂ ಕದನ ವಿರಾಮದ ವ್ಯಾಪ್ತಿಗೆ ತರಬೇಕು ಎಂದು ಇರಾನ್ ಒತ್ತಾಯಿಸುತ್ತಿದೆ. ಆದರೆ, ಅಮೆರಿಕಾ ಮತ್ತು ಇಸ್ರೇಲ್ ಇದಕ್ಕೆ ಒಪ್ಪಿಲ್ಲ.

ಸತತ ಹಿಂಸಾಚಾರದ ನಡುವೆ ಈ ಮಾತುಕತೆ ಯಶಸ್ವಿಯಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದ್ದು, ಯಾವುದೇ ಫಲಿತಾಂಶವಿಲ್ಲದೆ ಮಾತುಕತೆ ಅರ್ಧದಲ್ಲೇ ನಿಲ್ಲುವ ಆತಂಕವೂ ವ್ಯಕ್ತವಾಗಿದೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಳಿತದ ಹಿನ್ನೆಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ.

You cannot copy content of this page

Exit mobile version