ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆದ ಭೀಕರ ಯುದ್ಧವು ಜಗತ್ತನ್ನು ಅಕ್ಷರಶಃ ಅಸ್ತವ್ಯಸ್ತಗೊಳಿಸಿದೆ. ಸದ್ಯ ಕದನ ವಿರಾಮದಿಂದ ಉದ್ವಿಗ್ನತೆ ತಾತ್ಕಾಲಿಕವಾಗಿ ಶಮನಗೊಂಡಿದ್ದರೂ, 40 ದಿನಗಳ ಈ ಸಂಘರ್ಷವು ಸೃಷ್ಟಿಸಿದ ಗಾಯಗಳು ಇಡೀ ವಿಶ್ವವನ್ನು ಕಾಡುತ್ತಿವೆ. ಈ ಯುದ್ಧದಿಂದ ಸಾಧಿಸಿದ್ದೇನು? ಎಂಬ ಚರ್ಚೆ ಈಗ ಜಾಗತಿಕವಾಗಿ ಮುನ್ನೆಲೆಗೆ ಬಂದಿದೆ.
ಭಾರೀ ಸಾವು-ನೋವು ಮತ್ತು ಆಸ್ತಿ ನಷ್ಟ: ರಾಯಿಟರ್ಸ್ ವರದಿಯ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಒಂದರಲ್ಲೇ 3 ಸಾವಿರಕ್ಕೂ ಹೆಚ್ಚು ನಾಗರಿಕರು ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ. ಅಮೆರಿಕದ 13 ಸೈನಿಕರು ಮತ್ತು ಇಸ್ರೇಲ್‌ನ ಸುಮಾರು 40 ಮಂದಿ ಮೃತಪಟ್ಟಿದ್ದಾರೆ. ಲೆಬನಾನ್ ಮತ್ತು ಗಲ್ಫ್ ದೇಶಗಳ ಸಾವುಗಳನ್ನೂ ಸೇರಿಸಿದರೆ, ಪಶ್ಚಿಮ ಏಷ್ಯಾದ ಈ ಸಂಘರ್ಷದಲ್ಲಿ ಒಟ್ಟು 7 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇರಾನ್‌ನಲ್ಲಿ 4 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಸಮವಾಗಿದ್ದು, ಇಸ್ರೇಲ್ ಮತ್ತು ಗಲ್ಫ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳಿಗೂ ಭಾರೀ ಹಾನಿಯಾಗಿದೆ. ಒಟ್ಟಾರೆ ಆಸ್ತಿ ನಷ್ಟ ಸುಮಾರು 500 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಅಮೆರಿಕಕ್ಕೆ ಎದುರಾದ ಅನಿರೀಕ್ಷಿತ ಹಿನ್ನಡೆ: ಇರಾನ್ ಮೇಲೆ ಸುಲಭವಾಗಿ ಮೇಲುಗೈ ಸಾಧಿಸಬಹುದು ಎಂಬ ಅಮೆರಿಕದ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಟ್ರಂಪ್ ಸರ್ಕಾರವು ಈ ಯುದ್ಧಕ್ಕಾಗಿ ದಿನಕ್ಕೆ ಸರಾಸರಿ 2 ಬಿಲಿಯನ್ ಡಾಲರ್‌ನಂತೆ 40 ದಿನಗಳಿಗೆ ಒಟ್ಟು 80-100 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ಅಮೆರಿಕದ ಅತ್ಯಾಧುನಿಕ ಎಫ್-35, ಎಫ್-18 ವಿಮಾನಗಳನ್ನು ಇರಾನ್ ಹೊಡೆದುರುಳಿಸಿದೆ. ಇರಾನ್‌ನ ಅಗ್ಗದ ಡ್ರೋನ್ ಅಸ್ತ್ರಗಳು ಅಮೆರಿಕದ ಬಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ವ್ಯವಸ್ಥೆಗಳನ್ನು ಧ್ವಂಸಗೊಳಿಸಿವೆ, ಇದು ಜಾಗತಿಕ ಮಟ್ಟದಲ್ಲಿ ಟ್ರಂಪ್ ಅವರ ಪ್ರತಿಷ್ಠೆಗೆ ಧಕ್ಕೆ ತಂದಿದೆ.
ವಿಶ್ವಕ್ಕೆ ಹೊಸ ‘ಟೋಲ್’ ಬರೆ: ವಿಶ್ವದ ಶೇ. 20ರಷ್ಟು ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯಲ್ಲಿ ಈ ಹಿಂದೆ ಇರಾನ್ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ. ಆದರೆ ಯುದ್ಧದಿಂದಾದ ನಷ್ಟವನ್ನು ಸರಿದೂಗಿಸಲು ಮತ್ತು ಮೂಲಸೌಕರ್ಯಗಳ ಪುನರ್ನಿರ್ಮಾಣಕ್ಕಾಗಿ ಈಗ ಹಾರ್ಮುಜ್ ಮೂಲಕ ಸಾಗುವ ಹಡಗುಗಳಿಗೆ ‘ಟೋಲ್’ ವಿಧಿಸುವುದಾಗಿ ಇರಾನ್ ಘೋಷಿಸಿದೆ. ಇದು ಜಾಗತಿಕ ವ್ಯಾಪಾರದ ಮೇಲೆ ಹೊಸ ಹೊರೆಯಾಗಿ ಪರಿಣಮಿಸಲಿದೆ.
ಇರಾನ್ ನಾಯಕತ್ವಕ್ಕೆ ದೊಡ್ಡ ಪೆಟ್ಟು: ಯುದ್ಧವು ಇರಾನ್‌ನ ಉನ್ನತ ನಾಯಕತ್ವವನ್ನು ಹೈರಾಣಾಗಿಸಿದೆ. ಯುದ್ಧದ ಆರಂಭದ ದಿನವೇ ಸುಪ್ರೀಂ ಲೀಡರ್ ಅಲಿ ಖಮೇನಿ ಮೃತಪಟ್ಟರೆ, ಆ ನಂತರ ಅಲಿ ಲಾರಿಜಾನಿ ಸೇರಿದಂತೆ ಸುಮಾರು 40 ಹಿರಿಯ ಅಧಿಕಾರಿಗಳು ಮತ್ತು 70ಕ್ಕೂ ಹೆಚ್ಚು ಉನ್ನತ ದರ್ಜೆಯ ನಾಯಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಜಾಗತಿಕ ಆರ್ಥಿಕತೆಗೆ ಹೊಡೆತ: ಪಶ್ಚಿಮ ಏಷ್ಯಾದ ಯುದ್ಧವು ಜಾಗತಿಕ ಮಾರುಕಟ್ಟೆಯನ್ನು ನಡುಗಿಸಿದೆ. ತೈಲ ಬೆಲೆಗಳು ದಾಖಲೆ ಮಟ್ಟಕ್ಕೆ ಏರಿದ್ದು, ಹಣದುಬ್ಬರ ನಿಯಂತ್ರಣ ತಪ್ಪಿದೆ. ವಿಮಾನಯಾನ ಸೇವೆಗಳು ರದ್ದಾಗಿ ಪ್ರವಾಸೋದ್ಯಮ ಕುಸಿದಿದೆ. ಒಟ್ಟಾರೆಯಾಗಿ ವಿಶ್ವದ ವಿವಿಧ ದೇಶಗಳಿಗೆ ಈ ಯುದ್ಧದಿಂದ ಸುಮಾರು 700 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
