ದೆಹಲಿ: ಮತ ಧರ್ಮದ ಸ್ವಾತಂತ್ರ್ಯದ ಉಲ್ಲಂಘನೆಯಲ್ಲಿ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ವಿದೇಶಿ ಗುಪ್ತಚರ ಸಂಸ್ಥೆ ‘ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್’ (ರಾ) ಮತ್ತು ಬಿಜೆಪಿಯ ಮಾತೃಸಂಸ್ಥೆ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ (ಆರ್‌ಎಸ್‌ಎಸ್) ಅನ್ನು ಗುರಿಯಾಗಿಸಿಕೊಂಡು ನಿರ್ಬಂಧಗಳನ್ನು ಹೇರಬೇಕೆಂದು ಅಮೆರಿಕ ಸರ್ಕಾರದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (USCIRF) ತನ್ನ 2026ರ ವಾರ್ಷಿಕ ವರದಿಯಲ್ಲಿ ಶಿಫಾರಸು ಮಾಡಿದೆ.
ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಆಯೋಗವು ವರದಿ ನೀಡುತ್ತಿರುವುದು ಇದು ಸತತ ಏಳನೇ ಬಾರಿ. ಆದರೆ, ಭಾರತವನ್ನು ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಾಗುತ್ತಿರುವ ದೇಶ ಎಂದು ಘೋಷಿಸಬೇಕೆಂಬ ಆಯೋಗದ ಶಿಫಾರಸನ್ನು ಅಮೆರಿಕದ ವಿದೇಶಾಂಗ ಇಲಾಖೆಯು ಇದುವರೆಗೆ ಯಾವುದೇ ವರ್ಷವೂ ಪರಿಗಣನೆಗೆ ತೆಗೆದುಕೊಂಡಿಲ್ಲ.
ಮಾರ್ಚ್ 4 ರಂದು ಬಿಡುಗಡೆಯಾದ ತನ್ನ ವರದಿಯಲ್ಲಿ ಆಯೋಗವು, ಧಾರ್ಮಿಕ ಸ್ವಾತಂತ್ರ್ಯದ ವಿಷಯದಲ್ಲಿ ತೀವ್ರವಾದ ಉಲ್ಲಂಘನೆಗಳಿಗೆ ‘ರಾ’ ಮತ್ತು ಆರ್‌ಎಸ್‌ಎಸ್ ಹೊಣೆಗಾರರಾಗಿದ್ದು, ಈ ಉಲ್ಲಂಘನೆಗಳ ಬಗ್ಗೆ ಸಹನೆ ತೋರುತ್ತಿರುವುದಕ್ಕಾಗಿ ಇವುಗಳ ಮೇಲೆ ನಿರ್ಬಂಧ ಹೇರಬೇಕೆಂದು ಅಮೆರಿಕ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅಲ್ಲದೆ, ಭವಿಷ್ಯದಲ್ಲಿ ಭದ್ರತಾ ನೆರವು ಮತ್ತು ದ್ವಿಪಕ್ಷೀಯ ವ್ಯಾಪಾರ ನೀತಿಗಳನ್ನು ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸುಧಾರಣೆಯೊಂದಿಗೆ ಜೋಡಿಸಬೇಕೆಂದು ಟ್ರಂಪ್ ಸರ್ಕಾರವನ್ನು ಆಯೋಗವು ಕೋರಿದೆ. ಅಮೆರಿಕದ ನಾಗರಿಕರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಬೆದರಿಕೆ ಹಾಗೂ ಕಿರುಕುಳ ಮುಂದುವರಿಯುತ್ತಿದೆ ಎಂದು ಉಲ್ಲೇಖಿಸಿರುವ ಆಯೋಗವು, ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟವನ್ನು ಸ್ಥಗಿತಗೊಳಿಸಲು ಶಸ್ತ್ರಾಸ್ತ್ರ ರಫ್ತು ನಿಯಂತ್ರಣ ಕಾಯ್ದೆಯ ಸೆಕ್ಷನ್ 6 ಅನ್ನು ಜಾರಿಗೊಳಿಸುವಂತೆ ಅಮೆರಿಕನ್ ಕಾಂಗ್ರೆಸ್ ಅನ್ನು ಕೋರಿದೆ.
ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸಬೇಕು: ಕಾಂಗ್ರೆಸ್
ಭಾರತದ ಜನರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಆರ್‌ಎಸ್‌ಎಸ್ ಸಂಚಕಾರ ತಂದಿದೆ ಎಂದು ಅಮೆರಿಕ ಸರ್ಕಾರದ ಅಧಿಕೃತ ಆಯೋಗವು ಎಚ್ಚರಿಸಿದೆ ಎಂದು ಕಾಂಗ್ರೆಸ್ ಪಕ್ಷವು ಸೋಮವಾರ ‘ಎಕ್ಸ್’ (X) ನಲ್ಲಿ ತಿಳಿಸಿದೆ. ಮಹಾತ್ಮಾ ಗಾಂಧಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್ ಮೇಲೆ ಸರ್ದಾರ್ ಪಟೇಲ್ ಅವರು ನಿಷೇಧ ಹೇರಿದ್ದನ್ನು ಕಾಂಗ್ರೆಸ್ ಈ ಸಂದರ್ಭದಲ್ಲಿ ನೆನಪಿಸಿದೆ. ಸಂವಿಧಾನವನ್ನು ವಿರೋಧಿಸುವ ಆರ್‌ಎಸ್‌ಎಸ್, ಮನುಸ್ಮೃತಿಯ ಪ್ರಕಾರ ದೇಶ ನಡೆಯಬೇಕು ಎಂದು ಹೇಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದು ಅಸತ್ಯದ ವರದಿ: ಕೇಂದ್ರ ಸರ್ಕಾರ
ಆರ್‌ಎಸ್‌ಎಸ್ ಮತ್ತು ‘ರಾ’ ಮೇಲೆ ನಿರ್ಬಂಧ ಹೇರಲು ಶಿಫಾರಸು ಮಾಡಿರುವ ಅಮೆರಿಕ ಆಯೋಗದ ಇತ್ತೀಚಿನ ವರದಿಯನ್ನು ವಿದೇಶಾಂಗ ವ್ಯವಹಾರಗಳ ಇಲಾಖೆಯು ಸೋಮವಾರ ತಳ್ಳಿಹಾಕಿದೆ. ಆಯೋಗವು ನಿಷ್ಪಕ್ಷಪಾತ ವಾಸ್ತವಗಳಿಗಿಂತ ಹೆಚ್ಚಾಗಿ ಭಾರತದ ಬಗ್ಗೆ ಅಸತ್ಯ ಮತ್ತು ವಕ್ರೀಕೃತ ಕಥನಗಳನ್ನು ತನ್ನ ವರದಿಯಲ್ಲಿ ಚಿತ್ರಿಸಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಟೀಕಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಆಯೋಗವು ಭಾರತದ ವಿರುದ್ಧ ಇಂತಹ ವರದಿಗಳನ್ನು ನೀಡುತ್ತಿದ್ದು, ಇದು ಆಯೋಗದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಗಳು ಮತ್ತು ಅನಿವಾಸಿ ಭಾರತೀಯರ ಮೇಲೆ ಹೆಚ್ಚುತ್ತಿರುವ ಕಿರುಕುಳದತ್ತ ಆಯೋಗವು ಗಮನಹರಿಸಲಿ ಎಂದು ಅವರು ಸಲಹೆ ನೀಡಿದ್ದಾರೆ.
