ವಾಷಿಂಗ್ಟನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ವಿರುದ್ಧ ನಿರ್ಬಂಧಗಳನ್ನು ಹೇರಬೇಕು ಹಾಗೂ ಆ ಸಂಘಟನೆಯ ನಾಯಕರಿಗೆ ಯಾವುದೇ ರಾಜತಾಂತ್ರಿಕ ಸೌಲಭ್ಯಗಳನ್ನು ನೀಡಬಾರದು ಅಥವಾ ಉನ್ನತ ಮಟ್ಟದ ಸಭೆಗಳನ್ನು ನಡೆಸಬಾರದು ಎಂದು ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಲಹಾ ಮಂಡಳಿಯ (ಯುಎಸ್‌ಸಿಐಆರ್‌ಎಫ್) ಅಧಿಕಾರಿಗಳು ಅಮೆರಿಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಆರೆಸ್ಸೆಸ್ ಸದಸ್ಯರಾಗಿದ್ದಾರೆ ಎಂದು ಹೇಳಿರುವ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (ಯುಎಸ್‌ಸಿಐಆರ್‌ಎಫ್) ಅಧ್ಯಕ್ಷ ಆಸಿಫ್ ಮಹಮೂದ್, ಆರೆಸ್ಸೆಸ್ ಅಡಿಯಲ್ಲಿ ಬರುವ ಹಲವು ಉಪ-ಸಂಘಟನೆಗಳು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಸಿವೆ ಎಂದು ಆರೋಪಿಸಿದ್ದಾರೆ.
ಆಗಸ್ಟ್ 29 ರಂದು ನ್ಯೂಯಾರ್ಕ್‌ನಲ್ಲಿ ‘ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಆ್ಯಂಡ್ ಡೈಲಾಗ್’ (AHEAD) ಆಯೋಜಿಸಿರುವ ‘ಯೂನಿವರ್ಸಲ್ ಒನ್‌ನೆಸ್ ಸೆಲೆಬ್ರೇಷನ್ಸ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೆರಿಕಕ್ಕೆ ಭೇಟಿ ನೀಡಲಿರುವ ಬೆನ್ನಲ್ಲೇ ಮಹಮೂದ್ ಈ ಹೇಳಿಕೆ ನೀಡಿದ್ದಾರೆ.
ಆರೆಸ್ಸೆಸ್ ನಾಯಕರು ಭಾರತ ಸರ್ಕಾರದೊಂದಿಗೆ ಗುರುತಿಸಿಕೊಂಡಿದ್ದರೂ ಸಹ, ಅವರಿಗೆ ರಾಜತಾಂತ್ರಿಕ ಸೌಜನ್ಯಗಳನ್ನು ನೀಡಬಾರದು ಅಥವಾ ಉನ್ನತ ಮಟ್ಟದ ಸಭೆಗಳ ಮೂಲಕ ಗೌರವಿಸಬಾರದು ಎಂದು ಯುಎಸ್‌ಸಿಐಆರ್‌ಎಫ್ ಕಮಿಷನರ್ ಜೀನ್ ಮಿಲ್ಸ್ ತಿಳಿಸಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗೆ ಕಾರಣರಾದ ಆರೆಸ್ಸೆಸ್ ಸದಸ್ಯರ ಮೇಲೆ ನಿರ್ಬಂಧ ಹೇರುವತ್ತ ಅಮೆರಿಕ ಸರ್ಕಾರ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಯುಎಸ್‌ಸಿಐಆರ್‌ಎಫ್ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಈ ಹೇಳಿಕೆಗಳನ್ನು ಹಂಚಿಕೊಂಡಿದೆ.
“ಪ್ರಧಾನಿ ನರೇಂದ್ರ ಮೋದಿ ಆರೆಸ್ಸೆಸ್ ಸದಸ್ಯರಾಗಿದ್ದಾರೆ. ಈ ಸಂಘಟನೆಯ ಜಾಲದಲ್ಲಿರುವ ಉಪ-ಗುಂಪುಗಳು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಿವೆ. ಈಗ ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಅಮೆರಿಕ ಭೇಟಿಗೆ ಯೋಜಿಸುತ್ತಿದ್ದಾರೆ,” ಎಂದು ಮಹಮೂದ್ ಹೇಳಿದ್ದಾರೆ.
ಮೋಹನ್ ಭಾಗವತ್ ಅವರ ಈ ಭೇಟಿಯನ್ನು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮೇಲಿನ ಹಿಂಸಾಚಾರದಿಂದ ಪ್ರತ್ಯೇಕಿಸಿ ನೋಡಲಾಗದು ಎಂದು ‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’ ಸಂಘಟನೆ ಅಭಿಪ್ರಾಯಪಟ್ಟಿದೆ. ಏಕತೆಯ ಆಚರಣೆಯು ಧಾರ್ಮಿಕ ಪ್ರಾಬಲ್ಯದ ರಾಜಕೀಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಆ ಸಂಸ್ಥೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಕಳೆದ ಮಾರ್ಚ್‌ನಲ್ಲಿ ಬಿಡುಗಡೆಯಾದ ಯುಎಸ್‌ಸಿಐಆರ್‌ಎಫ್ ವಾರ್ಷಿಕ ವರದಿಯಲ್ಲೂ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಆರೆಸ್ಸೆಸ್ ಮತ್ತು ರಾ (RAW) ಸಂಸ್ಥೆಗಳ ವಿರುದ್ಧ ನಿರ್ದಿಷ್ಟ ನಿರ್ಬಂಧಗಳನ್ನು ವಿಧಿಸಲು ಶಿಫಾರಸು ಮಾಡಿತ್ತು.
ಆದರೆ ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದ ಭಾರತದ ವಿದೇಶಾಂಗ ಸಚಿವಾಲಯ, “ಯುಎಸ್‌ಸಿಐಆರ್‌ಎಫ್ ನಿರಂತರವಾಗಿ ಭಾರತದ ವಿರುದ್ಧ ಪೂರ್ವಗ್ರಹ ಪೀಡಿತ ಮತ್ತು ಸಂಶಯಾಸ್ಪದ ಮೂಲಗಳನ್ನು ಆಧರಿಸಿದ ವರದಿಗಳನ್ನು ನೀಡುತ್ತಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಗಳು ಹಾಗೂ ಭಾರತೀಯ ಸಮುದಾಯದ ಮೇಲಿನ ಬೆದರಿಕೆಗಳ ಬಗ್ಗೆ ಯುಎಸ್‌ಸಿಐಆರ್‌ಎಫ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ತಿರುಗೇಟು ನೀಡಿದ್ದರು.
