ಬೆಂಗಳೂರು: ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯಲ್ಲಿ ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತುಮಕೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿ ಅಥವಾ ಪ್ರತ್ಯೇಕ ವಿಮಾನ ನಿಲ್ದಾಣವಾಗಲಿ ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ‘ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನೀತಿ’ಯ ಅಡಿಯಲ್ಲಿ ತುಮಕೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆಯೇ ಮತ್ತು ಈ ಕುರಿತು ಸರ್ಕಾರದ ನಿಲುವೇನು ಎಂದು ಶಾಸಕರು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಸಚಿವರು, ಗ್ರೀನ್‌ಫೀಲ್ಡ್ ನೀತಿಯ ಪ್ರಕಾರ ಹಾಲಿ ಇರುವ ನಾಗರಿಕ ವಿಮಾನ ನಿಲ್ದಾಣದಿಂದ 150 ಕಿ.ಮೀ ವೈಮಾನಿಕ ವ್ಯಾಪ್ತಿಯೊಳಗೆ ಹೊಸ ವಿಮಾನ ನಿಲ್ದಾಣಕ್ಕೆ ಸಾಮಾನ್ಯವಾಗಿ ಅನುಮತಿ ಇರುವುದಿಲ್ಲ. ಆದಾಗ್ಯೂ, ಹಾಲಿ ವಿಮಾನ ನಿಲ್ದಾಣದ ಮೇಲಾಗುವ ಪರಿಣಾಮಗಳನ್ನು ಪರಿಗಣಿಸಿ ನಿರ್ದಿಷ್ಟ ಪ್ರಸ್ತಾವನೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದ ನಂತರವಷ್ಟೇ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ವಿವರಿಸಿದರು.
ತುಮಕೂರು ಜಿಲ್ಲೆಗೆ ಪ್ರತ್ಯೇಕ ವಿಮಾನ ನಿಲ್ದಾಣದ ಪ್ರಸ್ತಾವನೆಯೂ ಇಲ್ಲದಿರುವುದರಿಂದ ಮುಂಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಹಿಂದೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ತಮ್ಮ ತವರು ಜಿಲ್ಲೆಯಾದ ತುಮಕೂರಿನ ಬಳಿ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರಲಿ ಎಂಬ ಇಂಗಿತ ವ್ಯಕ್ತಪಡಿಸಿದ್ದರು. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಕೇಂದ್ರ ಸಚಿವ ವಿ. ಸೋಮಣ್ಣ ಕೂಡ ಇದೇ ಅಭಿಪ್ರಾಯ ಹಂಚಿಕೊಂಡಿದ್ದರು.
