ವಡೋದರಾ: ಗುಜರಾತ್‌ನ ವಡೋದರಾದಲ್ಲಿರುವ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯವು ಪ್ರಧಾನಿ ನರೇಂದ್ರ ಮೋದಿ ಅವರ “ಪರಿಣಾಮಕಾರಿ ನಾಯಕತ್ವ” ಮತ್ತು ಆರ್‌ಎಸ್‌ಎಸ್ ಇತಿಹಾಸದ ಕುರಿತು ‘ಮೋದಿ ತತ್ವ’ (Modi Tattva) ಎಂಬ ಪಠ್ಯದ ಭಾಗವನ್ನು ತನ್ನ ಸಮಾಜಶಾಸ್ತ್ರ ವಿಭಾಗದ ಪಠ್ಯಕ್ರಮದಲ್ಲಿ ಪರಿಚಯಿಸಿದೆ. ಈ ನಾಯಕತ್ವವು ಸಮಾಜದ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಅಧ್ಯಯನ ನಡೆಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಎರಡು ವರ್ಷಗಳ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿ (MA Sociology) ಕಾರ್ಯಕ್ರಮದಲ್ಲಿ ‘ದೇಶಪ್ರೇಮದ ಸಮಾಜಶಾಸ್ತ್ರ’ (Sociology of Patriotism) ಎಂಬ ಹೊಸ ಪಠ್ಯವನ್ನು ಸೇರಿಸಲಾಗಿದ್ದು, ಇದು ‘ಮೋದಿ ತತ್ವ’ದ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಸಯಾಜಿರಾವ್ ಗಾಯಕ್ವಾಡ್ III ರಂತಹ ಸಮಾಜ ಸುಧಾರಕರ ಕಾರ್ಯಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವ ಗುರಿಯನ್ನು ಹೊಂದಿದೆ ಎಂದು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೀರೇಂದ್ರ ಸಿಂಗ್ ತಿಳಿಸಿದ್ದಾರೆ.
“ರಾಜಕೀಯ ಕ್ಷೇತ್ರ ಮತ್ತು ನಾಯಕತ್ವದ ಪಾತ್ರದಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ಚರ್ಚಿಸುವುದು ಅನಿವಾರ್ಯವಾಗಿದೆ. ಸಮಾಜಶಾಸ್ತ್ರಜ್ಞ ಮ್ಯಾಕ್ಸ್ ವೆಬರ್ ಅವರ ‘ಆಕರ್ಷಕ ನಾಯಕತ್ವ’ದ (Charismatic Leadership) ಸಿದ್ಧಾಂತವನ್ನು ನಾವು ಮಹಾತ್ಮಾ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರಲ್ಲಿ ಕಂಡಿದ್ದೇವೆ, ಅದೇ ರೀತಿಯ ನಾಯಕತ್ವವು ಪ್ರಧಾನಿ ಮೋದಿ ಅವರಲ್ಲಿಯೂ ಕಂಡುಬರುತ್ತಿದೆ. ಇದು ವೈಜ್ಞಾನಿಕವಾಗಿ ವಿಚಾರಣೆ ನಡೆಸಬೇಕಾದ ವಿಷಯವಾಗಿದೆ” ಎಂದು ಸಿಂಗ್ ಪ್ರತಿಪಾದಿಸಿದ್ದಾರೆ.
‘ಮೋದಿ ತತ್ವ’ವು ಮಾಧ್ಯಮ ಮತ್ತು ಡಿಜಿಟಲ್ ರಾಷ್ಟ್ರೀಯತೆ, ಪೌರತ್ವ ಮತ್ತು ಭಿನ್ನಾಭಿಪ್ರಾಯ, ಹಾಗೂ ಜಾಗತೀಕರಣ ಮತ್ತು ಗುರುತಿನ ರಾಜಕೀಯದಂತಹ ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ. ಪ್ರಧಾನಿಯವರು ಏಕೆ ಇಷ್ಟೊಂದು ಪ್ರಸಿದ್ಧರಾಗುತ್ತಿದ್ದಾರೆ, ಅವರ ಸ್ವೀಕಾರಾರ್ಹತೆ ಇಷ್ಟೊಂದು ವ್ಯಾಪಕವಾಗಿರಲು ಕಾರಣವೇನು ಮತ್ತು ಭಾರತದಲ್ಲಿ ದೀರ್ಘಕಾಲದವರೆಗೆ ಅಧಿಕಾರದಲ್ಲಿರಲು ಅವರಲ್ಲಿರುವ ವಿಶೇಷತೆ ಏನು ಎಂಬ ಬಗ್ಗೆ ಈ ಪಠ್ಯಕ್ರಮವು ವೈಜ್ಞಾನಿಕವಾಗಿ ಚರ್ಚಿಸಲಿದೆ. ನೋಟು ಅಮಾನ್ಯೀಕರಣ, ಡಿಜಿಟಲ್ ಕ್ರಾಂತಿ, ಫಾಸ್ಟ್ಯಾಗ್ ಮತ್ತು ಜಲಶಕ್ತಿ ಸಚಿವಾಲಯದಂತಹ ಅವರ ನೀತಿಗಳು ಜನರ ಆಶೋತ್ತರಗಳನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂಬುದು ಇಲ್ಲಿನ ಪ್ರಮುಖ ಚರ್ಚಾ ವಿಷಯವಾಗಲಿದೆ.
ಈ ಪಠ್ಯಕ್ರಮವು ನಾಲ್ಕು ಪತ್ರಿಕೆಗಳನ್ನು ಹೊಂದಿರಲಿದ್ದು, ಪ್ರತಿಯೊಂದಕ್ಕೂ 15 ಗಂಟೆಗಳ ಬೋಧನಾ ಅವಧಿ ಇರಲಿದೆ. ಹಳ್ಳಿಗಳಲ್ಲಿ ಸಾರ್ವಜನಿಕ ಯೋಜನೆಗಳ ಮೇಲ್ವಿಚಾರಣೆ ನಡೆಸುವಾಗ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯವೈಖರಿಯನ್ನು ಗಮನಿಸಿದ ವಿದ್ಯಾರ್ಥಿಗಳು ಮತ್ತು ಸಂಶೋಧಕರು, ಆ ಗುಂಪಿನ ಬಗ್ಗೆ ವೈಜ್ಞಾನಿಕ ಸಮಾಜಶಾಸ್ತ್ರೀಯ ವಿಚಾರಣೆಯ ಅಗತ್ಯವಿದೆ ಎಂದು ಮನಗಂಡ ನಂತರ ಈ ಪಠ್ಯವನ್ನು ರೂಪಿಸಲಾಗಿದೆ ಎಂದು ಸಿಂಗ್ ವಿವರಿಸಿದ್ದಾರೆ. ಈ ಪಠ್ಯವು ರಾಷ್ಟ್ರಪ್ರೇಮ, ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಹಿಂದೂ ಸ್ವರಾಜ್ಯದ ಬಗ್ಗೆ ಮೊದಲು ಮಾತನಾಡಿದ ಛತ್ರಪತಿ ಶಿವಾಜಿ ಮಹಾರಾಜರ ಸುಧಾರಣೆಗಳನ್ನೂ ಒಳಗೊಂಡಿರಲಿದೆ.
