ಚಿಕ್ಕಮಗಳೂರು, ಮೇ 2: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಶನಿವಾರ ಕಟ್ಟುನಿಟ್ಟಿನ ಭದ್ರತೆಯಲ್ಲಿ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರ ಗೆಲುವು ಮತ್ತಷ್ಟು ಬಲವಾಗಿದೆ. ಮರು ಎಣಿಕೆಯ ಬಳಿಕ ಅವರ ಗೆಲುವಿನ ಅಂತರ 201 ಮತಗಳಿಂದ 203ಕ್ಕೆ ಏರಿಕೆಯಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಲ್ಲಿ ಫಲಿತಾಂಶ ಪ್ರಕಟವಾಗಿದ್ದ ಹಿನ್ನೆಲೆ, ಅಂಚೆ ಮತಗಳ ಎಣಿಕೆಯಲ್ಲಿ ಗೊಂದಲಗಳ ಆರೋಪ ಕೇಳಿಬಂದಿತ್ತು. ಕೆಲ ಅಭ್ಯರ್ಥಿಗಳು ಎಣಿಕೆಯ ವೇಳೆ ಗೈರಾಗಿದ್ದುದರ ಜೊತೆಗೆ, ಮತಪತ್ರ ಸಂಗ್ರಹಿಸಿದ್ದ ಟ್ರಂಕ್‌ಗಳ ಸ್ಥಿತಿಗೆ ಸಂಬಂಧಿಸಿದ ಅನುಮಾನಗಳು ವ್ಯಕ್ತವಾಗಿದ್ದರಿಂದ ಮರು ಎಣಿಕೆಗೆ ಆದೇಶಿಸಲಾಗಿತ್ತು.
ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನಲ್ಲಿ ಮರು ಎಣಿಕೆ ಕಾರ್ಯ ಆರಂಭಗೊಂಡಿದ್ದು, ಒಟ್ಟು 20 ಟ್ರಂಕ್‌ಗಳಲ್ಲಿ ಸಂಗ್ರಹಿಸಲಾಗಿದ್ದ 1,822 ಅಂಚೆ ಮತಗಳನ್ನು ಕ್ರಮಬದ್ಧವಾಗಿ ಪರಿಶೀಲಿಸಲಾಯಿತು. ಈ ವೇಳೆ ಕೆಲವು ಟ್ರಂಕ್‌ಗಳು ಹಾನಿಗೊಳಗಾಗಿರುವುದು ಬೆಳಕಿಗೆ ಬಂದಿದ್ದು, ಒಂದು ಟ್ರಂಕ್‌ಗೆ ಸೀಲ್ ಇಲ್ಲದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಯಿತು. ಇದರಿಂದ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಕ್ಷದ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಪರಿಸ್ಥಿತಿಯನ್ನು ಸಮಾಧಾನಗೊಳಿಸಲು ಚುನಾವಣಾ ಆಯೋಗ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಮತಪತ್ರಗಳ ಭದ್ರತೆ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು. ಬಳಿಕ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಮರು ಎಣಿಕೆ ಪ್ರಕ್ರಿಯೆ ಮುಂದುವರಿಯಿತು.
ಎಣಿಕೆ ವೇಳೆ 279 ತಿರಸ್ಕೃತ ಮತಗಳನ್ನು ಬೇರ್ಪಡಿಸಿ, ಉಳಿದ ಮತಗಳನ್ನು ತಲಾ 25ರ ಬಂಡಲ್‌ಗಳಾಗಿ ವಿಂಗಡಿಸಿ ಎಣಿಕೆ ನಡೆಸಲಾಯಿತು. ಒಟ್ಟು 1,822 ಅಂಚೆ ಮತಗಳಲ್ಲಿ 3 ನೋಟಾ ಮತಗಳು ಸೇರಿವೆ.
ಮರು ಎಣಿಕೆಯ ಅಂತಿಮ ಫಲಿತಾಂಶದಂತೆ, ರಾಜೇಗೌಡ ಅವರ ಗೆಲುವಿನ ಅಂತರ 2 ಮತಗಳಿಂದ ಹೆಚ್ಚಾಗಿ 203ಕ್ಕೆ ತಲುಪಿದೆ. ಇದರೊಂದಿಗೆ ಕ್ಷೇತ್ರದಲ್ಲಿ ಹಲವು ದಿನಗಳಿಂದ ಮುಂದುವರಿದಿದ್ದ ರಾಜಕೀಯ ವಿವಾದ ಮತ್ತು ಕಾನೂನು ಹೋರಾಟಕ್ಕೆ ತೆರೆ ಬಿದ್ದಂತಾಗಿದೆ.
