Thursday, November 14, 2024

ಸತ್ಯ | ನ್ಯಾಯ |ಧರ್ಮ

ವಾಲ್ಮಿಕಿ ನಿಗಮ ಹಗರಣ: ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ. ಅಕ್ರಮ ವರ್ಗಾವಣೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ 2024ರ ಸೆ. 30ರಂದು ಕಾದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದೆ.

ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ಅರ್ಜಿಯನ್ನು ಸಮರ್ಥಿಸಿ ಪ್ರಕರಣವನ್ನು ಸಿಬಿಐಗೆ ವಹಿಸುವ ವಿಚಾರವಾಗಿ ಬ್ಯಾಂಕಿಂಗ್‌ ನಿಬಂಧನೆಗಳ ಕಾಯ್ದೆ-1949ರ ಸೆಕ್ಷನ್‌ 35ಎಬಗ್ಗೆ ಅಟಾರ್ನಿ ಜನರಲ್‌ ವಾಖ್ಯಾನ ಮಾಡಿರುವುದನ್ನು ಒಪ್ಪಲಾಗದು. ಸೆಕ್ಷನ್‌ 35ಎ ಕೇವಲ ಬ್ಯಾಂಕಿಂಗ್‌ ಸಂಸ್ಥೆಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ನಡೆಸುವುದಕ್ಕೆ ಸಂಬಂಧಿಸಿ ರುತ್ತದೆ. ಯಾವುದೇ ಬ್ಯಾಂಕಿಂಗ್‌ ಸಂಸ್ಥೆಗೆ ತನಿಖೆ ಯನ್ನು ಸಿಬಿಐ ಕೈಗೆ ವರ್ಗಾಯಿಸಲು ಅನುಮತಿ ನೀಡಿದರೆ ಅದು ಸೆಕ್ಷನ್‌ 35ಎಗೆ ಶಾಸನವು ನೀಡದ ಅಧಿಕಾರವನ್ನು ನೀಡಿದಂತಾಗುತ್ತದೆ ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

ವಾಲ್ಮೀಕಿ ಹಗರಣದ ಕುರಿತು ದೂರು ದಾಖ ಲಾದ ಸಂದರ್ಭ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದ ಕೆಲವು ಅಧಿಕಾರಿಗಳು ಆರೋಪಿ ಗಳಾಗಿದ್ದರು ಎಂಬ ಕಾರಣಕ್ಕೆ ಹಗರಣವನ್ನು ಸಿಬಿಐಗೆ ವಹಿಸುವಂತೆ ಬ್ಯಾಂಕ್‌ ಕೋರಿದೆ. ಬ್ಯಾಂಕ್‌ ಮನವಿ ಮಾಡಿದೆ ಎಂಬ ಮಾತ್ರಕ್ಕೆ ಅಟಾರ್ನಿ ಜನರಲ್‌ ಹೇಳಿರುವಂತೆ ಸೆಕ್ಷನ್‌ 35ಎ ವ್ಯಾಖ್ಯಾನವನ್ನು ನ್ಯಾಯಾಲಯವು ಒಪ್ಪಬೇಕಿಲ್ಲ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಪ್ರಕರಣದಲ್ಲಿ ಪ್ರಸ್ತುತ ಮಾಜಿ ಸಚಿವ ನಾಗೇಂದ್ರ ಅವರಿಗೆ ಜಾಮೀನು ದೊರಕಿದೆ. ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಯೋಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಈಗಾಗಲೇ ಈ ಪ್ರಕರಣವನ್ನು ಕರ್ನಾಟಕದ ಸಿಐಡಿ ತನಿಖೆ ನಡೆಸುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page