ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ ಲೋಕಾರ್ಪಣೆ ಮಾಡಿದ ‘ವಂದೇ ಭಾರತ್ ಎಕ್ಸಪ್ರೆಸ್’ ರೈಲಿಗೆ ಗ್ರಹಗತಿಯೇ ಸರಿ ಇದ್ದಂತಿಲ್ಲ. ತಿಂಗಳ ಅವಧಿಯಲ್ಲಿ ಇಂದು ಮೂರನೇ ಬಾರಿಗೆ ಅಪಘಾತಕ್ಕೆ ತುತ್ತಾಗುತ್ತಿದ್ದು, ಮೂರು ಬಾರಿಯೂ ಜಾನುವಾರುಗಳೇ ಬಲಿಯಾಗುತ್ತಿವೆ.
ಗಾಂಧಿನಗರ-ಮುಂಬೈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ಇಂದು ಬೆಳಿಗ್ಗೆ ಗುಜರಾತ್‌ನಲ್ಲಿ ಗೂಳಿಗೆ ಡಿಕ್ಕಿ ಹೊಡೆದಿದೆ. ಇದು ಒಂದು ತಿಂಗಳ ಅವಧಿಯಲ್ಲಿ ನಡೆದ ಮೂರನೇ ದುರ್ಘಟನೆಯಾಗಿದೆ. ಡಿಕ್ಕಿಯ ನಂತರ ಸೆಮಿ ಸ್ಪೀಡ್ ರೈಲನ್ನು ಸುಮಾರು 15 ನಿಮಿಷಗಳ ಕಾಲ ನಿಲ್ಲಿಸಲಾಯಿತು. ಈ ಬಾರಿಯೂ ಇಂಜಿನ್ ಕೋಚ್ ನ ಮುಂಭಾಗಕ್ಕೆ ತೀವ್ರ ಹಾನಿಯಾಗಿದೆ. ಈ ತಿಂಗಳ ಆರಂಭದಲ್ಲಿ, ಹೊಸದಾಗಿ ಪ್ರಾರಂಭಿಸಲಾದ ರೈಲು ಮೊದಲ ದಿನ ಗುಜರಾತ್‌ನ ಆನಂದ್ ನಿಲ್ದಾಣದ ಬಳಿ ನಾಲ್ಕು ಎಮ್ಮೆಗಳಿಗೆ ಡಿಕ್ಕಿ ಹೊಡೆದ ಒಂದು ದಿನದ ನಂತರ ಹಸುವಿಗೆ ಡಿಕ್ಕಿ ಹೊಡೆದಿತ್ತು.
ವಂದೇ ಭಾರತ್ ಸರಣಿಯ ಮೂರನೇ ಸೇವೆಯಾದ ಈ ರೈಲನ್ನು ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರದಿಂದ ಅಹಮದಾಬಾದ್‌ನ ಕಲುಪುರ್ ರೈಲು ನಿಲ್ದಾಣದವರೆಗೆ ಪ್ರಯಾಣಿಸಿದರು. ರೈಲು ಕೇವಲ ಎರಡು ನಿಮಿಷಗಳಲ್ಲಿ ಗಂಟೆಗೆ 160 ಕಿಮೀ ತಲುಪುತ್ತದೆ ಮತ್ತು ಇತರ ರೈಲುಗಳಿಗಿಂತ ಉತ್ತಮ ಸವಾರಿ ಸೌಕರ್ಯವನ್ನು ಹೊಂದಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಹಾಗಾಗಿ “ರೈಲು ವಿನ್ಯಾಸ ಮಾಡುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗಿದೆ. ಈ ವೇಗ ಇರುವಾಗ ಜಾನುವಾರುಗಳೊಂದಿಗೆ ಇಂತಹ ಘರ್ಷಣೆಯನ್ನು ತಪ್ಪಿಸಲಾಗುವುದಿಲ್ಲ” ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.