ಬೆಂಗಳೂರು: ವರ್ತೂರಿನಲ್ಲಿರುವ ಬೆಂಗಳೂರು ಜಲಮಂಡಳಿ (BWSSB) ಘಟಕದ ಒಳಚರಂಡಿ ಸಂಸ್ಕರಣಾ ಘಟಕದ (STP) ವೆಟ್ ವೆಲ್‌ಗೆ ಬಿದ್ದು ನಾಪತ್ತೆಯಾಗಿರುವ ಕಾರ್ಮಿಕನಿಗಾಗಿ ರಕ್ಷಣಾ ತಂಡಗಳು ಸುದೀರ್ಘ ಶೋಧ ಕಾರ್ಯವನ್ನು ಮುಂದುವರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಕಾರ್ಮಿಕನನ್ನು ಬಿಹಾರ ಮೂಲದ 27 ವರ್ಷದ ಬ್ರಿಜೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಜೂನ್ 18 ರಂದು ಸಂಜೆ 5 ರಿಂದ 6 ರ ನಡುವೆ ಬಾಲಗೆರೆ ರಸ್ತೆ ಬಳಿಯಿರುವ ಘಟಕದ ವೆಟ್ ವೆಲ್ ಒಳಗಡೆ ಬ್ರಿಜೇಶ್ ಕುಮಾರ್ ಹಾಗೂ ಅವರ ಇಬ್ಬರು ಸಹೋದ್ಯೋಗಿಗಳು ಬಿದ್ದಿದ್ದರು. ಇವರಲ್ಲಿ ಕುಮಾರ್ ಮತ್ತು ಮೇಲ್ವಿಚಾರಣೆ ನಡೆಸುತ್ತಿದ್ದ ಇಂಜಿನಿಯರ್ ಅಗಿಲನ್ ಮೋಹನ್ ಅವರು ಒಳಚರಂಡಿ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದರೆ, ಮೂರನೇ ಕಾರ್ಮಿಕ ಕಾರ್ತಿಕ್ ಎಂಬುವವರು ಹೇಗೋ ಪ್ರಾಣಾಪಾಯದಿಂದ ಪಾರಾಗಿದ್ದರು. ಇಂಜಿನಿಯರ್ ಮೋಹನ್ ಮೃತದೇಹವು ಜೂನ್ 20 ರ ಮುಂಜಾನೆ ಪತ್ತೆಯಾಗಿದ್ದು, ಬ್ರಿಜೇಶ್ ಕುಮಾರ್ ಈವರೆಗೂ ಪತ್ತೆಯಾಗಿಲ್ಲ.
ಬಾವಿಯ ಒಳಗಿದ್ದ ಸಣ್ಣ ಮೆಟ್ಟಿಲುಗಳ ಮೇಲೆ ನಿಂತಿದ್ದಾಗ ಬ್ರಿಜೇಶ್ ಕುಮಾರ್ ಆಕಸ್ಮಿಕವಾಗಿ ಜಾರಿದ್ದರು. ಈ ವೇಳೆ ಕೆಲಸದ ಮೇಲ್ವಿಚಾರಣೆ ನಡೆಸುತ್ತಿದ್ದ ಇಂಜಿನಿಯರ್ ಮೋಹನ್ ಅವರು ಕುಮಾರ್ ಅವರ ಬೆಲ್ಟ್ ಹಿಡಿದು ರಕ್ಷಿಸಲು ಪ್ರಯತ್ನಿಸಿದಾಗ, ನಿಯಂತ್ರಣ ತಪ್ಪಿ ಇಬ್ಬರೂ ಒಳಗಡೆ ಬಿದ್ದಿದ್ದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡಗಳು ಜಂಟಿಯಾಗಿ ನಿರಂತರ ಶೋಧ ಕಾರ್ಯ ಕೈಗೊಂಡಿವೆ.
ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಂತೋಷ್ ಕುಮಾರ್ ಅವರು ನೀಡಿದ ದೂರಿನ ಆಧಾರದ ಮೇಲೆ ವರ್ತೂರು ಪೊಲೀಸರು ‘ವಾಟೆಕ್ ವಬಾಗ್ ಲಿಮಿಟೆಡ್’ (Vatech Wabag Ltd) ಎಂಬ ಖಾಸಗಿ ಕಂಪನಿಯ ವಿರುದ್ಧ ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಧಕ್ಕೆ ತಂದಿರುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೆನ್ನೈ ಮೂಲದ ಈ ಕಂಪನಿಯು ಐದು ವರ್ಷಗಳ ಅವಧಿಗೆ ಈ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ಪಡೆದಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ವೆಟ್ ವೆಲ್‌ನ ಹಿಂಭಾಗದ ಗೇಟ್ ಬಳಿ ಕೆಲಸ ನಡೆಯುತ್ತಿದ್ದಾಗ ಈ ಭೀಕರ ಘಟನೆ ಸಂಭವಿಸಿದೆ.
ಕೆಲಸದ ಅವಧಿಯಲ್ಲಿ ಕಂಪನಿಯು ಜಲಮಂಡಳಿಯ ಸುರಕ್ಷತಾ ನಿಯಮಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಹೀಗಾಗಿ ಇದನ್ನು ಕ್ರಿಮಿನಲ್ ನಿರ್ಲಕ್ಷ್ಯ ಎಂದು ಪರಿಗಣಿಸಿ ಮೊಕದ್ದಮೆ ಹೂಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಕಂಪನಿಗೆ ಈಗಾಗಲೇ ಅಧಿಕೃತ ನೋಟಿಸ್ ಜಾರಿ ಮಾಡಲಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಮತ್ತೊಂದೆಡೆ, ಈ ಭೀಕರ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಜಲಮಂಡಳಿಯು ಮೂವರು ಹಿರಿಯ ಅಧಿಕಾರಿಗಳನ್ನೊಳಗೊಂಡ ವಿಶೇಷ ಸಮಿತಿಯನ್ನು ರಚಿಸಿದೆ.
