Home ಬೆಂಗಳೂರು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ಇಲಾಖೆ ದಾಳಿ; ಇಲ್ಲಿಯವರೆಗೂ ಸಿಕ್ಕ ಹಾಳಾದ ಪದಾರ್ಥಗಳಿವು

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ಇಲಾಖೆ ದಾಳಿ; ಇಲ್ಲಿಯವರೆಗೂ ಸಿಕ್ಕ ಹಾಳಾದ ಪದಾರ್ಥಗಳಿವು

0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ವೀಕೆಂಡ್‌ನಲ್ಲಿ ನಡೆಸಿದ ದಿಢೀರ್ ತಪಾಸಣೆಯಲ್ಲಿ ಕೊಳೆತ ಮಾಂಸ, ಹಾಳಾದ ಮೀನು, ಅವಧಿ ಮೀರಿದ ಹಾಲು-ಮೊಸರು ಸೇರಿದಂತೆ ಹಲವು ಆಹಾರ ಪದಾರ್ಥಗಳು ಪತ್ತೆಯಾಗಿವೆ.

ಆಹಾರ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡಗಳು ನಗರದ ವಿವಿಧೆಡೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದು, ಯುಬಿ ಸಿಟಿ, ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಸುತ್ತಮುತ್ತಲಿನ ಪ್ರತಿಷ್ಠಿತ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಅಡುಗೆಮನೆ, ಆಹಾರ ಸಂಗ್ರಹಣಾ ಕೊಠಡಿ ಹಾಗೂ ಶೀತಲೀಕರಣ ವ್ಯವಸ್ಥೆಗಳನ್ನು ಪರಿಶೀಲಿಸಿದವು.

ತಪಾಸಣೆ ವೇಳೆ ಕೆಲವು ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ನೀಡಲು ಸಂಗ್ರಹಿಸಿಟ್ಟಿದ್ದ ಕೊಳೆತ ಕೋಳಿ ಮತ್ತು ದನದ ಮಾಂಸ ಪತ್ತೆಯಾಗಿದ್ದು, ಕೆಲವು ಮಾಂಸಕ್ಕೆ ಫಂಗಸ್ ಕೂಡ ಹಿಡಿದಿರುವುದು ಕಂಡುಬಂದಿದೆ. ಇದರೊಂದಿಗೆ ಹಾಳಾದ ಮೀನು, ತರಕಾರಿಗಳು ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಯುಬಿ ಸಿಟಿಯಲ್ಲಿ 132 ಕೆಜಿ ಆಹಾರ ಜಪ್ತಿ
ಯುಬಿ ಸಿಟಿಯ ಸ್ಕೈ ಲೌಂಜ್ ಹಾಗೂ ಹೋಟೆಲ್ ಸ್ಕೈ ಅಡುಗೆಮನೆಯಲ್ಲಿ ಸುಮಾರು 45 ಕೆಜಿ ಕೊಳೆತ ಕೋಳಿ ಮತ್ತು ಬೀಫ್ ಪತ್ತೆಯಾಗಿದೆ. ಅಲ್ಲದೆ 6 ಕೆಜಿ ತರಕಾರಿ ಕಟ್ಲೆಟ್, 15 ಲೀಟರ್ ಬಳಸಿದ ಅಡುಗೆ ಎಣ್ಣೆ ಹಾಗೂ ಸುಮಾರು 10 ದಿನಗಳ ಹಿಂದೆ ಅವಧಿ ಮುಗಿದಿದ್ದ ಹಾಲು ಮತ್ತು ಮೊಸರು ಕೂಡ ಪತ್ತೆಯಾಗಿದೆ.

ಒಟ್ಟು 132 ಕೆಜಿ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿರುವ ಅಧಿಕಾರಿಗಳು, ಅಡುಗೆಮನೆಯಲ್ಲಿ ಕಂಡುಬಂದ ಅನೈರ್ಮಲ್ಯದ ಹಿನ್ನೆಲೆಯಲ್ಲಿ ಕಿಚನ್‌ನ್ನು ಸೀಜ್ ಮಾಡಿ ಬಂದ್ ಮಾಡಿದ್ದಾರೆ.

ಯುಬಿ ಸಿಟಿಯಲ್ಲಿನ ಇತರ ಕೆಲವು ರೆಸ್ಟೋರೆಂಟ್‌ಗಳಲ್ಲೂ ಅವಧಿ ಮೀರಿದ ಅಣಬೆ ಹಾಗೂ ಸೂಕ್ತ ಲೇಬಲ್ ಇಲ್ಲದ ಕೇಕ್‌ಗಳು ಪತ್ತೆಯಾಗಿದ್ದು, ಸಂಬಂಧಪಟ್ಟ ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಇತರ ಹೋಟೆಲ್‌ಗಳಲ್ಲೂ ಆಹಾರ ಪದಾರ್ಥ ವಶ
ರಾಯಲ್ ಚೈನ್ ಹೋಟೆಲ್‌ನಲ್ಲಿ 50 ಕೆಜಿ ಬಾತುಕೋಳಿ ಮಾಂಸ ಹಾಗೂ 5 ಕೆಜಿ ಹಾಳಾದ ಮೀನು ಸೇರಿದಂತೆ ಒಟ್ಟು 55 ಕೆಜಿ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ.

ಸೆನ್ಚೆಜ್ ಹೋಟೆಲ್‌ನಲ್ಲಿ ಮೀನು, ಕೇಕ್, ಆಲೂಗಡ್ಡೆ ಮತ್ತು ಟ್ಯಾಕೋಸ್ ಸೇರಿದಂತೆ ಸುಮಾರು 7 ಕೆಜಿ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಟೆಸ್ಕಾನ್ ಹೋಟೆಲ್‌ನಲ್ಲಿ 5 ಕೆಜಿ ಅವಧಿ ಮೀರಿದ ಅಣಬೆ ಹಾಗೂ ಮದ್ರಾಸ್ ಕಿಚನ್‌ನಲ್ಲಿ 5 ಕೆಜಿ ಹಾಳಾದ ಹಸಿರು ಬಟಾಣಿ ಪತ್ತೆಯಾಗಿದೆ.

ಇದರ ಜತೆಗೆ ನಗರದ ಪ್ರತಿಷ್ಠಿತ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲೂ ಅಧಿಕಾರಿಗಳು ತಪಾಸಣೆ ನಡೆಸಿ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.

ನಿಯಮ ಉಲ್ಲಂಘನೆಗೆ ಕಾನೂನು ಕ್ರಮ
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಸಂಗ್ರಹಣೆ ಹಾಗೂ ತಯಾರಿಕೆಯ ವೇಳೆ ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿರುವ ಸಂಸ್ಥೆಗಳ ವಿರುದ್ಧ ನೋಟಿಸ್ ಸೇರಿದಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಷ್ಠಿತ ಹೋಟೆಲ್‌ಗಳಲ್ಲಿಯೇ ಅವಧಿ ಮೀರಿದ ಹಾಗೂ ಹಾಳಾದ ಆಹಾರ ಪದಾರ್ಥಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಎದುರಾಗಿವೆ.

You cannot copy content of this page

Exit mobile version