ಚಿಂತಾಮಣಿ ಅ.20: ಮೂಲತಃ ಕೋಲಾರ ಜಿಲ್ಲೆಯ ಗಡಿಗ್ರಾಮವಾದ ಅವಗಾನಪಲ್ಲಿ(ಅವಗಾನಹಳ್ಳಿ) ಗ್ರಾಮದ ಖ್ಯಾತ ಬುರ್ರಕಥೆ ಕಲಾವಿದ ಎ. ಎಲ್ ವೆಂಕಟೇಶ್ ಬುರ್ರಕಥಾ ಕಲಾವಿದರು ಕೋಲಾರ ಜಿಲ್ಲೆ. ಶ್ರೀನಿವಾಸಪುರ ತಾಲೂಕು, ಗೌನಿಪಲ್ಲಿ ಅಂಚೆಯವರಾದ *ಇವರು ಅಲೆಮಾರಿ ಬುಡಕಟ್ಟು ಜನಾಂಗದ ಚನ್ನದಾಸರ ಸಮುದಾಯದವರು. ಪ್ರಸ್ತುತ ಕರ್ನಾಟಕದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕೈವಾರ ತಾತಯ್ಯನ ಮಠದಲ್ಲಿ (ಶ್ರೀ ಯೋಗಿ ನಾರೇಯಣ ಮಠ, ಕೈವಾರ) ಎರಡೂವರೆ ದಶಕಗಳಿಂದ ಆಸ್ಥಾನ ಗಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2026 ನೇ ಸಾಲಿನ ಜನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.
‘ಬುರ್ರ’ ಎಂಬ ಪದವು ‘ತಂಬೂರಿ’ ಯನ್ನು ಸೂಚಿಸುತ್ತದೆ. ಇದು ಪ್ರದರ್ಶಕನ ಭುಜದ ಮೇಲೆ ಧರಿಸುವ ತಂತಿ ವಾದ್ಯವಾಗಿದೆ. ಬುರ್ರಕಥೆಗಳ ಕಥೆಗಳು ಮೂರು ವರ್ಗಗಳಾಗಿ ವಿಂಗಡಣೆಯಾಗಿವೆ. ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ರಾಜಕೀಯ. ಈ ಕಲಾ ರೂಪವನ್ನು ಮೂಲತಃ ಸಾಂಸ್ಕೃತಿಕ ಪಲ್ಲಟಕ್ಕೆ ಒಳಪಡಿಸಿದ್ದರೂ, ಇಂದು ಜನಪ್ರಿಯ ಕಥೆಗಳನ್ನು ಬರೆದು ಇವರು ಪ್ರದರ್ಶಿಸಿ ಸ್ಮರಣೆಯಲ್ಲಿಡುವಲ್ಲಿಯೂ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.
ಬುರ್ರಕಥೆ ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಜನಪ್ರಿಯ ಜಾನಪದ ಕಲೆಯಾಗಿದೆ. ಇದು ಪ್ರಾರ್ಥನೆಗಳು, ಏಕವ್ಯಕ್ತಿ ನಾಟಕ, ನೃತ್ಯ, ಹಾಡುಗಳು, ಕವಿತೆಗಳು ಮತ್ತು ಹಾಸ್ಯಗಳನ್ನು ಒಳಗೊಂಡಿರುವ ಒಂದು ನಿರೂಪಣಾ ಮನರಂಜನೆಯಾಗಿದೆ. ವಿಷಯವು ಹಿಂದೂ ಪೌರಾಣಿಕ ಕಥೆ ಅಥವಾ ಸಮಕಾಲೀನ ಸಾಮಾಜಿಕ ಸಮಸ್ಯೆಯಾಗಿರುತ್ತವೆ ಎಂದು ಅವಗಾನಹಳ್ಳಿಯ ಬುರ್ರಕಥಾ ಕಲಾವಿದ ಎ.ಎಲ್ ವೆಂಕಟೇಶ್ ಹೇಳುತ್ತಾರೆ.
ಇದುವರೆಗೂ 2260 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕಾಶಿ, ಅಯೋಧ್ಯಾ, ಮಥುರಾ, ದ್ವಾರಕಾ, ದೆಹಲಿ, ಸೋಮನಾಥ ಜ್ಯೋತಿರ್ಲಿಂಗ ಹೀಗೆ ಅನೇಕ ಕಡೆಗಳಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಜೊತೆಗೆ ಹ್ಯುಮನ್ ಗ್ಲೋಬಲ್ ಯೂನಿವರ್ಸಿಟಿ ದೆಹಲಿ ಗೌರವ ಡಾಕ್ಟರೇಟ್ ನೀಡಿ ಕೂಡ ಗೌರವಿಸಿದೆ ಎಂದು ಸ್ಮರಿಸುತ್ತಾರೆ.
ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು,* ಡಾ. ಎಂ. ಬೈರೇಗೌಡ ಹಾಗೂ ಡಾ. ವ್ಹಿ.ಎಲ್. ಪಾಟೀಲ ಅವರು ‘ಜಾನಪದ ತಜ್ಞ ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ. ವಾರ್ಷಿಕ ಗೌರವ ಪ್ರಶಸ್ತಿಗೆ 31 ಜಿಲ್ಲೆಗಳಿಂದ 30 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ಇಪ್ಪತೈದು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. *ಮಂಡ್ಯದಲ್ಲಿ ಅಕ್ಟೋಬರ್ ತಿಂಗಳಾಂತ್ಯದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಚನ್ನದಾಸರ ಜನಾಂಗದ ಬುರ್ರಕಥೆ ಕಲಾವಿದ ಎ. ಎಲ್. ವೆಂಕಟೇಶ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ರಿಜಿಸ್ಟ್ರಾರ್ ಶೃತಿ ಎಂ ಅವರು ತಿಳಿಸಿದರು.
ಮಾಹಿತಿ: ಶಿವರಾಜ್ ಮೋತಿ, ವಕೀಲರು
