Friday, April 26, 2024

ಸತ್ಯ | ನ್ಯಾಯ |ಧರ್ಮ

ಟಿಪ್ಪೂ ಸುಲ್ತಾನ್‌ ಹುಟ್ಟಿದ ನಿಖರವಾದ ದಿನಾಂಕ ಡಿಸೆಂಬರ್‌ 01 : ಸಂಶೋಧನೆ

ಮೈಸೂರು ಹುಲಿ ಬಿರುದಾಂಕಿತ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪೂ ಸುಲ್ತಾನ್‌ ಹುಟ್ಟಿದ ದಿನಾಂಕ ನವೆಂಬರ್‌ 20 ಎಂದೇ ನಂಬಿಕೊಂಡು ಬರಲಾಗಿದೆ. ಆದರೆ ಈ ಕುರಿತು ಆಳವಾದ ಸಂಶೋಧನೆ ನಡೆದು ಟಿಪ್ಪೂ ನಿಜವಾದ ಹುಟ್ಟಿದ ದಿನ ಡಿಸೆಂಬರ್‌ 01 ಎಂಬುದು ದೃಢಪಟ್ಟಿದೆ.

ಈ ಸಂಶೋಧನೆ ಕೈಗೊಂಡಿದ್ದವರು ಇತಿಹಾಸ ಸಂಶೋಧಕ ನಿಧಿನ್‌ ಓಲಿಕೇರ. ಶಿವಮೊಗ್ಗದವರಾದ ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದಲ್ಲಿ ಸಿಕ್ಕಿದ್ದ ರಾಕೆಟ್ಗಳ ಕುರಿತು 2019ರ ಏಪ್ರಿಲ್‌ನಲ್ಲಿ ಸಂಶೋಧನೆ ಕೈಗೊಂಡಿದ್ದರು. ಇದರ ಭಾಗವಾಗಿ ಲಂಡನ್ ಗೆ ತೆರಳಿದಾಗ ಅಲ್ಲಿಯ ಬ್ರಿಟಿಶ್‌ ಗ್ರಂಥಾಲಯದಲ್ಲಿ ಅವರಿಗೆ ಒಂದು ಅಮೂಲ್ಯ ಹಸ್ತಪ್ರತಿಯೊಂದು ಕಣ್ಣಿಗೆ ಬೀಳುತ್ತದೆ. ಪರ್ಷಿಯನ್ ಭಾಷೆಯಲ್ಲಿ ಇರುವ ಈ ಹಸ್ತಪ್ರತಿಯ ಹೆಸರು “ಫತೇ ಉಲ್ ಮುಜಾಹಿದ್ದೀನ್”. ಇದು ಟಿಪ್ಪು ಸುಲ್ತಾನನು ತಾನೇ ಬರೆಸಿದ್ದ ಮಿಲಿಟರಿ ಕೈಪಿಡಿಯಾಗಿದ್ದು ಇದರಲ್ಲಿ ಟಿಪ್ಪುವಿನ ಹಸ್ತಾಕ್ಷರ ಮತ್ತು ಮುದ್ರೆಯನ್ನು ಕಾಣಬಹುದಾಗಿದೆ. ಈ ಸೈನಿಕ ಕೈಪಿಡಿಯು ಟಿಪ್ಪೂ ತನ್ನ ಸೈನ್ಯದಲ್ಲಿ ಇದ್ದ ಎಲ್ಲಾ ಸೇನಾಧಿಕಾರಿಗಳಿಗೆ ಕಡ್ಡಾಯವಾಗಿ ಓದಲು ತಯಾರಿಸಿದ ಕೈಪಿಡಿಯಾಗಿತ್ತು. ಈ ಕೈಪಿಡಿಯ ನಾಲ್ಕನೇ ಅಧ್ಯಾಯದಲ್ಲಿ ಕೆಲವು ಪ್ರಮುಖ ದಿನಾಂಕವನ್ನು ದಾಖಲಿಸಿದ್ದು ಆ ದಿನಗಳಂದು ಸೈನ್ಯವು ತೋಪ್ ಸಲಾಮಿ (ಗನ್ ಸೆಲ್ಯೂಟ್) ನೀಡಬೇಕೆಂದು ಟಿಪ್ಪು ಆದೇಶವನ್ನು ನೀಡಿರುತ್ತಾನೆ. ಈ ವಿಶೇಷ ದಿನಾಂಕಗಳಲ್ಲಿ ಒಂದು ಟಿಪ್ಪುವಿನ ಜನ್ಮ ದಿನಾಂಕಕ್ಕೆ ಸಂಬಂಧಿಸಿದುದಾಗಿದ್ದು ಅದರ ಕನ್ನಡ ಸಾರಾಂಶ ಏನೆಂದರೆ – “ದೇವರ ಆಶೀರ್ವಾದದಿಂದ ಜನ್ಮ ದಿನಾಂಕದಂದು ಆಚರಿಸುವ ಸಂತೋಷದ ಆಚರಣೆ. ಜಕ್ರಿ ಮಾಸದ ಹದಿನಾಲ್ಕನೆಯ ದಿನ ವರ್ಷ 1165 ಹಿಜ್ರಿ – ಪ್ರತಿ ವರ್ಷ ಈ ದಿನದಂದು ಸೂರ್ಯೋದಯ ಆದ ಹತ್ತು ಗಂಟೆಗಳ ನಂತರ ಮೂವತ್ತೊಂದು ತೋಪಿನ ಸಲಾಮಿಯನ್ನು ನೀಡಬೇಕು ಮತ್ತು ಇದರಲ್ಲಿ ಮೈಸೂರು ಸಂಸ್ಥಾನದ ಸಮಸ್ತ ಪ್ರಜೆಗಳು ಪಾಲ್ಗೊಳ್ಳಬೇಕು” ಎಂದಾಗಿದೆ.

ಈ ಹಸ್ತಪ್ರತಿಯಲ್ಲಿ ನಮೂದಿಸಿರುವ ಹಿಜ್ರಿ 1165 ಎಂಬ ಇಸವಿ ಸಂಶೋಧಕ ನಿಧಿನ್ ಓಲಿಕೆರ ಅವರ ಗಮನ ಸೆಳೆಯುತ್ತದೆ. ಏಕೆಂದರೆ ಇಲ್ಲಿಯವರೆಗೂ ಇದ್ದ ತಿಳುವಳಿಕೆ ಪ್ರಕಾರ ಟಿಪ್ಪು ಹುಟ್ಟಿದ ವರ್ಷ ಹಿಜ್ರಿ 1163 ಎಂದು ಭಾವಿಸಿದ್ದು ಆಂಗ್ಲ ಕ್ಯಾಲೆಂಡರ್ ಪ್ರಕಾರ ಅದು 20 ನವೆಂಬರ್ 1750 ಆಗುತ್ತದೆ. ಈ ತಾರೀಖಿನಿಂದೇ ಟಿಪ್ಪೂ ಜನಿಸಿದ್ದರು ಎಂದೇ ನಂಬಿಕೊಂಡು ಬರಲಾಗಿದೆ. ಈ ದಿನಾಂಕವನ್ನು ನೀಡಿದ್ದವರು ಯಾರು ಎಂದು ಶೋಧಿಸಿದಾಗ ಅದಕ್ಕೆ ಸಿಕ್ಕ ಉತ್ತರ ಮೀರ್ ಹುಸೇನ್ ಕಿರ್ಮಾನಿ. ಕಿರ್ಮಾನಿ ಟಿಪ್ಪುವಿನ ಮರಣಾನಂತರದಲ್ಲಿ (3 ವರ್ಷಗಳ ನಂತರ) ಹೈದರಿನ ಜೀವನಚರಿತ್ರೆ ಆಧರಿಸಿ ಬರೆದಿದ್ದ ಪುಸ್ತಕ ‘ನಿಶಾನ್ ಇ ಹೈದರ್’ ನಲ್ಲಿ ಈ ದಿನಾಂಕವನ್ನು ನೀಡಿರುತ್ತಾನೆ.

ಟಿಪ್ಪುವಿಗೆ ಸಂಬಂದಿಸಿದ ಇನ್ನಷ್ಟು ದಾಖಲೆಗಳನ್ನು ಹುಡುಕುವಾಗ ನಿಧಿನ್ ಓಲಿಕೆರ ಅವರಿಗೆ ಇನ್ನೂ ಎರಡು ಮಹತ್ವಪೂರ್ಣ ಹಸ್ತಪ್ರತಿಗಳು ಸಿಕ್ಕಿದ್ದವು. ಮೂರನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಮೈಸೂರಿನ ಶಿಬಿರವನ್ನು ಸ್ವಾಧೀನ ಪಡಿಸಿಕೊಂಡಾಗ ಟಿಪ್ಪುವಿಗೆ ಸಂಬಂಧಿಸಿದ ಪರ್ಶಿಯನ್ ಭಾಷೆಯ ಅಮೂಲ್ಯ ಹಸ್ತಪ್ರತಿಯೊಂದು ಸಿಕ್ಕಿರುತ್ತದೆ. ಇದರಲ್ಲಿ ಇರುವ ಪುಟ ಸಂಖ್ಯೆ 42ರಲ್ಲಿ ನಮೂದಿಸಿರುವ ರೇಗುಲೇಷನ್ 71ರಲ್ಲಿ ಟಿಪ್ಪುವಿನ ಜನ್ಮ ದಿನಾಂಕದ ಬಗ್ಗೆ ಮಾಹಿತಿ ಇರುತ್ತದೆ. ಇದರೊಂದಿಗೆ ಬ್ರಿಟೀಷ್ ಮ್ಯೂಸಿಯಂನಲ್ಲಿ ಟಿಪ್ಪುವಿನ ಜನ್ಮ ತಾರೀಖಿಗೆ ಸಂಬಂಧಿಸಿದಂತೆ ಟಿಪ್ಪುವಿನ ಮರಣಾನಂತರ ಅವನ ಅರಮನೆಯಿಂದ ಸ್ವಾಧೀನ ಪಡಿಸಿಕೊಂಡ ಒಂದು ಹಸ್ತಪ್ರತಿ ಟಿಪ್ಪುವಿನ ಜನ್ಮ ರಹಸ್ಯವನ್ನು ಬೇಧಿಸಲು ಸಹಾಯಕವಾಗುತ್ತದೆ. ಈ ಹಸ್ತಪ್ರತಿಯಲ್ಲಿ ಟಿಪ್ಪುವಿನ ಜನ್ಮ ತಾರೀಖನ್ನು ಉಲ್ಲೇಖ ಮಾಡಿರುವ ಟಿಪ್ಪಣಿಯ ಫೋಟೋ ಪ್ರತಿಯನ್ನು ಲಂಡನ್ ಬ್ರಿಟೀಷ್ ಮ್ಯೂಸಿಯಮ್ಮಿನ ಕ್ಯುರೇಟರ್ ಉರ್ಸುಲಾ ಸಿಮ್ಸ್ ವಿಲಿಯಮ್ಸ್ ಅವರಿಂದ ನಿಧಿನ್ ಪಡೆದುಕೊಂಡಿದ್ದರು. ಈ ಮೇಲ್ಕಂಡ ಎಲ್ಲಾ ದಾಖಲೆ ಹಾಗೂ ಪುರಾವೆಗಳನ್ನು ಪರೀಕ್ಷಿಸಿದ ಮೇಲೆ ಟಿಪ್ಪುವಿನ ಜನ್ಮ 1165 ಹಿಜ್ರಿ ವರ್ಷದ ತುಳುವಿ ಮಾಸದ ಹದಿನಾಲ್ಕನೇಯ (14) ತಾರೀಖಿನಂದು ಎಂದು ಸ್ಪಷ್ಟಪಡಿಸುತ್ತದೆ. ಇನ್ನೂ ಈ 14ನೇ ತುಳುವಿ ಎಂದರೇನು ಎಂದು ಕಂಡುಹಿಡಿಯಲು ನಿಧಿನ್ ಧೀರ್ಘಕಾಲ ಸಂಶೋಧನೆ ಮಾಡಬೇಕಾಗಿ ಬಂತು.

ಇಂಗ್ಲೆಂಡಿನ ವಿಕ್ಟೋರಿಯಾ ಮ್ಯೂಸಿಯಂ ನಲ್ಲಿ ಸಂಶೋಧಕ ನಿಧಿನ್‌ ಓಲಿಕೇರ

ಏನಿದು ಟಿಪ್ಪೂ ಅನುಸರಿಸಿದ ಮೌಲೂದಿ ಪಂಚಾಂಗ?

ಟಿಪ್ಪೂ ಸುಲ್ತಾನನು ಮೈಸೂರಿನ ರಾಜ್ಯಭಾರದ ಚುಕ್ಕಾಣಿ ಹಿಡಿದ ಐದನೇ ವರ್ಷದಲ್ಲಿ ಮೌಲೂದಿ ಪಂಚಾಂಗವನ್ನು ಪ್ರಾರಂಭಿಸುತ್ತಾನೆ. ಮುಸಲ್ಮಾನರು ಚಂದ್ರನ ಗ್ರಹಗತಿ ಅವಲಂಬಿಸುವ ಹಿಜ್ರಿ ಪಂಚಾಂಗವನ್ನು ಅನುಸರಿಸಿದರೆ ಇನ್ನೂ ಕೆಲವರು ಸೂರ್ಯನ ಗ್ರಹಗತಿಯನ್ನು ಅವಲಂಬಿಸುವ ಸೌರಮಾನ ಪಂಚಾಂಗವನ್ನು ಅನುಸರಿಸುತ್ತಿದ್ದು ಇದರಿಂದ ಆದ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಟಿಪ್ಪು ಹೊಸದಾದ ಮೌಲೂದಿ ಪಂಚಾಂಗವನ್ನು ಪರಿಚಯಿಸುತ್ತಾನೆ. ಮೈಸೂರಿನಲ್ಲಿ ಕಂದಾಯವನ್ನು ಚಾಂದ್ರಮಾನ ಪಂಚಾಂಗ ಮತ್ತು ಭತ್ತದ ಕೊಯ್ಲಿನ ಮೇಲಿನ ತೆರಿಗೆಯನ್ನು ಸೌರಮಾನ ಪಂಚಾಂಗದ ಅನುಸಾರ ವಸೂಲಿ ಮಾಡುತ್ತಿದ್ದು ಸೌರಮಾನ ಆಧಾರಿತ ಪಂಚಾಂಗದಲ್ಲಿ ಹಿಜ್ರಿ ಪಂಚಾಂಗಗಿಂತ 11 ದಿನಗಳು ಹೆಚ್ಚುವರಿ ಇದ್ದದ್ದರಿಂದ ರೈತರು ಹೆಚ್ಚುವರಿ ತೆರಿಗೆ ನೀಡಬೇಕಾಗಿತ್ತು. ಈ ಸಮಸ್ಯೆಯನ್ನು ನಿವಾರಿಸಲು ಟಿಪ್ಪು ಮೌಲೂದಿ ಪಂಚಾಂಗಕ್ಕೆ ಚಾಲನೆ ನೀಡುತ್ತಾನೆ. ಅರಬ್ ಪದವಾದ “ಮೌಲೂದಿ ಇ ಮಹಮ್ಮದ್” ಅಂದರೆ ಮುಹಮ್ಮದ್ ಪೈಗಂಬರ್ ಅವರ ಜನ್ಮ ವರ್ಷವನ್ನು ಆಧರಿಸಿ ಸಿದ್ಧಪಡಿಸಿದ ಪಂಚಾಂಗವೇ “ಮೌಲೂದಿ” ಪಂಚಾಂಗ. ಮೌಲೂದಿ ಪಂಚಾಂಗ ಮಹಮದ್ ಪೈಗಂಬರ್ ಅವರು ಹುಟ್ಟಿದ ವರ್ಷ ಅಂದರೆ 572 AD ಇಂದ ಪ್ರಾರಂಭಗೊಂಡು ಅಹ್ಮದಿ ಮಾಸದಿಂದ ಶುರುವಾಗಿ ಹನ್ನೆರಡನೆಯ ಮಾಸವಾದ ಬಯಾಜಿ (ರಬಾನಿ) ಜೊತೆಗೆ ಅಂತ್ಯಗೊಳ್ಳುತ್ತದೆ. ಇನ್ನೊಂದು ವಿಶೇಷ ಅಂದರೆ ಮೌಲದಿ ಪಂಚಾಂಗ ಹಿಂದುಗಳ ಚಾಂದ್ರಮಾನ ಪಂಚಾಂಗಕ್ಕೆ ಸರಿಸಮಾನವಾಗಿದ್ದು ಅಹ್ಮದಿ ಮಾಸ ಚೈತ್ರ ಮಾಸಕ್ಕೆ ಸಮಾನಾವಾದರೆ ಕೊನೆಯ ಮಾಸ ಬಯಾಜಿ ಫಾಲ್ಗುಣ ಮಾಸಕ್ಕೆ ಸಮಾನವಾಗಿರುತ್ತದೆ. ಇನ್ನೂ ಈ ಮೌಲೂದಿ ಪಂಚಾಂಗದ ಒಂಭತ್ತನೆಯ ಮಾಸದ ಹೆಸರು “ತುಳುವಿ” ಆಗಿದ್ದು ಇದು ಹಿಂದು ಪಂಚಾಂಗದ “ಮಾರ್ಗಶಿರ” ಮಾಸಕ್ಕೆ ಸಮನಾಗಿರುತ್ತದೆ. ಈ ಎಲ್ಲಾ ಸಂಗತಿಗಳ ಸುಧೀರ್ಘ ಸಂಶೋಧನೆಯ ನಂತರ 1165 ಹಿಜ್ರಿ ವರ್ಷದ ತುಳುವಿ ಮಾಸದ ಹದಿನಾಲ್ಕನೇಯ (14) ತಾರೀಖು ಆಂಗ್ಲ (ಗ್ರೆಗೋರಿಯನ್) ಕ್ಯಾಲೆಂಡರ್ ಪ್ರಕಾರ 1ನೇ ಡಿಸೆಂಬರ್ 1751 ಆಗಿರುತ್ತದೆ. ಮೌಲೂದಿ ಪಂಚಾಂಗವನ್ನು ದೃಢೀಕರಿಸಲು ನಡೆಸಿದ ಹಲವಾರು ಪರೀಕ್ಷಾ ಪ್ರಯೋಗಗಳಲ್ಲಿ ನಿಧಿನ್ ಅವರಿಗೆ ಶ್ರೀ ವಿಶ್ವಾಸ್ (ಮಾಜಿ Google ಸಂಸ್ಥೆಯ ಉದ್ಯೋಗಿ) ಮತ್ತು ಪ್ರೊ ರಾಮನ್ (IIT Madras) ಸಹಾಯ ಹಾಗೂ ಮಾರ್ಗದರ್ಶನ ನೀಡಿದ್ದು ಇದರ ಫಲಶೃತಿಯಾಗಿ ಇಂದು ಆನ್ಲೈನ್ನಲ್ಲಿ ಮೌಲೂದಿ ಪಂಚಾಂಗವನ್ನು ಪರಿಚಯಿಸುತ್ತಿದ್ದು ಇದರ ಸದುಪಯೋಗವನ್ನು ಪ್ರಪಂಚದಾದ್ಯಂತ ಎಲ್ಲಾ ಸಂಶೋಧಕರು ಬಳಸಿಕೊಳ್ಳಬಹುದಾಗಿದೆ. ಈ ವೆಬ್ ಸೈಟ್ ಅಭಿವೃದ್ಧಿಪಡಿಸಲು ನಿಯೋಟೆಕ್ ಸಂಸ್ಥೆಯ ಶ್ರೀ ಮಂಜುನಾಥ್ ಗಾಂವ್ಕರ ಅವರು ಸಹಾಯ ಮಾಡಿರುತ್ತಾರೆ. ಇನ್ನೂ ಈ ಮೇಲೆ ಪ್ರಸ್ತಾಪಿಸಿರುವ ಮೂರು ದಾಖಲೆಗಳು ಪರ್ಶಿಯನ್ ಭಾಷೆಯಲ್ಲಿ ಇದ್ದು ಇದನ್ನು ಪರ್ಶಿಯನ್ ಭಾಷೆಯಿಂದ ಆಂಗ್ಲ ಭಾಷೆಗೆ ತರ್ಜುಮೆ ಮಾಡಲು ಪರ್ಶಿಯನ್ ಭಾಷೆಯ ವಿದ್ವಾಂಸ ಅದ್ನಾನ್ ರಶೀದ್ ಅವರು ನೆರವು ನೀಡಿರುತ್ತಾರೆ.

ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು ಮತ್ತು ಮೈಸೂರಿನ ಪ್ರಸಿದ್ಧ ಇತಿಹಾಸಕಾರರೂ ಆಗಿದ್ದ ದಿ.ಪ್ರೊ.ಶೇಖ್ ಅಲಿ‌ ಅವರು ಟಿಪ್ಪುವಿನ ಜನ್ಮ ತಾರೀಖಿಗೆ ಸಂಬಂಧಿಸಿದಂತೆ ನಿಧಿನ್ ಅವರು ನಡೆಸಿದ ಸಂಶೋಧನೆಯನ್ನು ಅವಲೋಕಿಸಿ ಅದಕ್ಕೆ ಅನುಮೋದನೆ ನೀಡಿದ್ದರಲ್ಲದೆ, ಅವರು “WE HAVE TO ACCEPT THIS DATE AS IT IS BASED ON IRREFUTABLE EVIDENCE” ಎಂದು ತಮ್ಮ ನಿರ್ಧಾರವನ್ನು ಸೂಚಿಸುವ ಮೂಲಕ ನಿಧಿನ್ ಅವರಿಗೆ ಹಾರೈಸಿದ್ದರು.
ಎರಡು ವರ್ಷದ ಸುಧೀರ್ಘವಾದ ಅಧ್ಯಯನ ಮತ್ತು ಸಂಶೋಧನೆ ಮೂಲಕ ಮೈಸೂರಿನ ಹುಲಿ ಟಿಪ್ಪೂ ಸುಲ್ತಾನನ ಜನ್ಮದಿನಾಂಕವು ನಿಖರವಾಗಿ 1ನೇ ಡಿಸೆಂಬರ್ 1751 ಎಂದು ಪುರಾವೆಗಳೊಂದಿಗೆ ನಿಧಿನ್ ಅವರು ಸಾಬೀತು ಪಡಿಸಿರುತ್ತಾರೆ.

Related Articles

ಇತ್ತೀಚಿನ ಸುದ್ದಿಗಳು