Friday, June 14, 2024

ಸತ್ಯ | ನ್ಯಾಯ |ಧರ್ಮ

ಪಶ್ಚಿಮ ಬಂಗಾಳ | ಮಾಜಿ ಸಂಸದ ಹಾಗೂ ಸಿಪಿಎಂನ ಪ್ರಮುಖ ನಾಯಕ ಬಸುದೇವ ಆಚಾರ್ಯ ನಿಧನ

ಸಿಪಿಎಂನ ಪ್ರಮುಖ ನಾಯಕ ಮತ್ತು ಪಶ್ಚಿಮ ಬಂಗಾಳದ ಬಂಕುರಾದಿಂದ ಒಂಬತ್ತು ಬಾರಿ ಚುನಾಯಿತ ಸಂಸದರಾದ ಬಸುದೇವ್ ಆಚಾರ್ಯ (81) ನಿಧನರಾದರು.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಇದು ರಾಜಕೀಯ ವಲಯದಲ್ಲಿ ನೋವಿನ ಛಾಯೆ ಮೂಡಿಸಿದೆ. ಕಳೆದ ಕೆಲ ದಿನಗಳಿಂದ ಅವರು ವಯೋ ಸಹಜ ದೌರ್ಬಲ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಸುದೇವ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರಿಲ್ಲದ ಕೊರತೆ ತುಂಬಲು ಸಾಧ್ಯವಿಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ಡಿ.ಸೆಲೀಂ ಶ್ರದ್ಧಾಂಜಲಿ ಅರ್ಪಿಸಿದರು.

ಬಸುದೇವ್ ಆಚಾರ್ಯ ಅವರು ಪಶ್ಚಿಮ ಬಂಗಾಳದ ಬಂಕುರಾ ಲೋಕಸಭಾ ಕ್ಷೇತ್ರಕ್ಕೆ 9 ಬಾರಿ ಆಯ್ಕೆಯಾಗುವ ಮೂಲಕ ಬಂಕುರಾ ಎಂದರೆ ಬಸುದೇವ್‌ ಎನ್ನುವಂತಾಗಿತ್ತು. 1980ರಿಂದ 2014ರವರೆಗೆ ಸುಮಾರು 34 ವರ್ಷಗಳ ಕಾಲ ಸಂಸದರಾಗಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮೂನ್ಮೂನ್ ಸೇನ್ ವಿರುದ್ಧ ಸೋತಿದ್ದರು.

ಬಸುದೇವ್ ಅವರು 11 ಜುಲೈ 1942ರಂದು ಪುರುಲಿಯಾದಲ್ಲಿ ಜನಿಸಿದರು. ವಿದ್ಯಾರ್ಥಿ ಜೀವನದಿಂದ ಕ್ರಿಯಾಶೀಲರಾಗಿದ್ದ ಅವರು ವಿದ್ಯಾರ್ಥಿ ನಾಯಕರಾಗಿ ನಂತರ ಕಾರ್ಮಿಕ ನಾಯಕರಾದರು. ಅಲ್ಲಿನ ಗ್ರಾಮೀಣ ಬುಡಕಟ್ಟು ಸಮುದಾಯದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಪಶ್ಚಿಮ ಬಂಗಾಳದ ರೈಲ್ವೇ ಗುತ್ತಿಗೆದಾರ ಕಾರ್ಮಿಕ ಸಂಘ, ಎಲ್ಐಸಿ ಏಜೆಂಟ್ಸ್ ಆರ್ಗನೈಸೇಶನ್ ಆಫ್ ಇಂಡಿಯಾ, ಡಿವಿಸಿ ಗುತ್ತಿಗೆದಾರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿದ್ದರು. ಆಚಾರ್ಯ ಅವರು ಹಲವಾರು ಸಂಸದೀಯ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು 25 ವರ್ಷಗಳಿಂದ ರೈಲ್ವೆ ಸ್ಥಾಯಿ ಸಮಿತಿಯಲ್ಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು