ಮಾಜಿ ಸಚಿವ, ಹಿರಿಯ ರಾಜಕಾರಣಿ, ಸಮಾಜವಾದಿ ಚಿಂತಕ ಕೆ ಎಚ್ ಶ್ರೀನಿವಾಸ್ ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. 86 ವರ್ಷದ ಕೆ ಹೆಚ್ ಶ್ರೀನಿವಾಸ್ ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರನಲ್ಲಿಯೇ ನೆಲೆಸಿದ್ದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಕಾನುಗೋಡು ಗ್ರಾಮದವರಾದ ಶ್ರೀನಿವಾಸ್ ತಮ್ಮ ಶುರುವಿನ ರಾಜಕೀಯ ದಿನಗಳಲ್ಲಿ ಜನತಾಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ಆನಂತರ ಕಾಂಗ್ರೆಸ್‌ನಲ್ಲಿ ತಮ್ಮ ರಾಜಕೀಯ ಪಯಣ ಮುಂದುವರೆಸಿದ್ದರು. ವಯೋಸಹಜ ಅನಾರೋಗ್ಯದ ಕಾರಣದಿಂದ ಇತ್ತೀಚೆಗೆ ರಾಜಕೀಯದಿಂದ ದೂರ ಉಳಿದಿದ್ದರು.
ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಶ್ರೀನಿವಾಸ್ ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ಡಿ ದೇವರಾಜ ಅರಸು ಸರ್ಕಾರದಲ್ಲಿ ಸಚಿವರಾಗಿ ಇಂಧನ, ವಾರ್ತಾ, ಯುವಜನ ಸೇವೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯೋಜನಾ ಖಾತೆಗಳನ್ನು ನಿರ್ವಹಿಸಿದ್ದರು. ವಕೀಲರಾಗಿ, ಕೃಷಿಕರೂ ಆಗಿದ್ದರು. ಕವನ ಸಂಕಲನಗಳನ್ನೂ ರಚಿಸಿದ್ದ ಅವರು ಸಿನೆಮಾದಲ್ಲೂ ಅಭಿನಯಿಸಿದ್ದರು.
ಜೋಗ ರಸ್ತೆಯಲ್ಲಿರುವ ಎಲ್ ಬಿ ಕಾಲೇಜಿನ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ಕಾಲೇಜಿನ ಬೆಳವಣಿಗೆಗಳಲ್ಲಿ ಇವರ ಕೊಡುಗೆ ಅಪಾರವಾಗಿತ್ತು.