ಕನ್ನಡದ ಹಿರಿಯ ಲೇಖಕಿ, ಜಾನಪದ ಲೋಕಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡಿದ್ದ ಕಮಲಾ ಹೆಮ್ಮಿಗೆ ಅವರು ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ.
ಮೂಲತಃ ಮೈಸೂರು ಜಿಲ್ಲೆಯ ಹೆಮ್ಮಿಗೆ ಎಂಬಲ್ಲಿ ಜನಿಸಿದ ಅವರು ತಮ್ಮ ಕಲಿಕಾ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದ ವಿಷಯವನ್ನು ಮುಖ್ಯವಾಗಿಸಿಕೊಂಡು ಎಂ.ಎ ಪದವಿ ಪಡೆದರು. ನಂತರ ಆಕಾಶವಾಣಿ ಉದ್ಯೋಗಿಯಾಗಿ ತಮ್ಮ ಔದ್ಯೋಗಿಕ ಜೀವನ ಮುಂದುವರಿಸಿದ ಅವರು ಧಾರವಾಡ ಮತ್ತು ಮಂಗಳೂರು ಕೇಂದ್ರಗಳಲ್ಲಿ ಹಾಗೂ ದೂರದರ್ಶನದ ಬೆಂಗಳೂರು ಮತ್ತು ಕೇರಳದ ತಿರುವನಂತಪುರದ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಇತ್ತೀಚೆಗೆ ನಿವೃತ್ತಿ ಹೊಂದಿದ್ದರು.
ಕನ್ನಡ ಜಾನಪದ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದ ಅವರು, ವಿಚಾರವಾದಿ ಬಳಗದಲ್ಲಿ ಹೆಚ್ಚು ಗುರುತಿಸಿಕೊಂಡು ಬಂದಿದ್ದಾರೆ. ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ದತಿಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ ಗಳಿಸಿದರು. ಇದಲ್ಲದೆ ಮೈಸೂರು ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾ ಪಡೆದಿದ್ದರು.
ಜಾನಪದ ಮಾತ್ರವಲ್ಲದೆ ಕನ್ನಡ ಸಾಹಿತ್ಯ ಲೋಕಕ್ಕೂ ವಿಶೇಷ ಕೊಡುಗೆ ಕೊಟ್ಟು ಅನೇಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕದ ಮಡಿಲಿಗೆ ಹಾಕಿದ್ದಾರೆ. ಕಾವ್ಯ ಪ್ರಕಾರಗಳಲ್ಲಿ ಪಲ್ಲವಿ, ವಿಷಕನ್ಯೆ, ಮುಂಜಾನೆ ಬಂದವನು, ನೀನೆ ನನ್ನ ಆಕಾಶ, ಮರ್ಮರ, ಕರುಳ ಸಂವಾದ ಮುಂತಾದ ಕಾವ್ಯಗಳು ಸುಪ್ರಸಿದ್ಧವಾಗಿವೆ.
ಬದುಕೆಂಬ ದಿವ್ಯ, ಆಖ್ಯಾನ, ಕಿಚ್ಚಿಲ್ಲದ ಬೇಗೆ ಮುಂತಾದ ಕಾದಂಬರಿಗಳಿವೆ. ಮಾಘ ಮಾಸದ ದಿನ, ಬಿಸಿಲು ಮತ್ತು ಬೇವಿನ ಮರ, ‘ನಾನು , ಅವನು ಮತ್ತು ಅವಳು’, ಹನ್ನೊಂದು ಕಥೆಗಳು, ತ್ರಿಭಂಗಿ ಮುಂತಾದ ಕಥಾ ಸಂಕಲನಗಳಿವೆ. ಲಾವಣಿ-ಒಂದು ಹಕ್ಕಿ ನೋಟ, ಸವದತ್ತಿ ಎಲ್ಲಮ್ಮನ ಜಾತ್ರೆ, ಪಂಚಮುಖ, ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ಧತಿ: ಒಂದು ಅಧ್ಯಯನ ಮುಂತಾದ ಸಂಶೋಧನಾ ಕೃತಿಗಳಿವೆ.
ಕಮಲಾ ಹೆಮ್ಮಿಗೆ ಅವರ ಸಾಹಿತ್ಯ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ಎಸ್.ನರಸಿಂಹಸ್ವಾಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ಸರಕಾರದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ, ಮಾಸ್ತಿ ಕಾದಂಬರಿ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.
ಕಮಲಾ ಹೆಮ್ಮಿಗೆ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಲೋಕದ ಅನೇಕ ಹಿರಿಯರು ಸಂತಾಪ ಸೂಚಿಸಿದ್ದಾರೆ.